
ಅಹಮದಾಬಾದ್, ಡಿಸೆಂಬರ್ 12: ಭಾರತದ ಕ್ರಿಕೆಟ್ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರ ಪತ್ನಿ ಹಾಗೂ ಗುಜರಾತ್ ಸರ್ಕಾರದ ಸಚಿವೆ ರಿವಾಬಾ ಜಡೇಜಾ ಆಘಾತಕಾರಿ ಹೇಳಿಕೆಯೊಂದನ್ನು ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ವಿದೇಶಿ ಪ್ರವಾಸಗಳ ಸಮಯದಲ್ಲಿ ಕೆಲವು ಭಾರತೀಯ ಕ್ರಿಕೆಟಿಗರು ವಿವಿಧ ದುಶ್ಚಟಗಳಲ್ಲಿ ತೊಡಗುತ್ತಾರೆ ಎಂದು ಆರೋಪಿಸಿ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಆದರೆ, ನನ್ನ ಪತಿ ಎಂದಿಗೂ ಅಂತಹ ಯಾವುದೇ ದುಶ್ಚಟಗಳಲ್ಲಿ ಇದುವರೆಗೂ ತೊಡಗಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಿವಾಬಾ ಜಡೇಜಾ, ಕ್ರಿಕೆಟಿಗರ ಬಗ್ಗೆ ಹೆಚ್ಚು ಜನರಿಗೆ ಗೊತ್ತಿಲ್ಲದ ಅಭ್ಯಾಸಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ, ಅವರ ಸುತ್ತಮುತ್ತಲಿನ ಪರಿಸರ ಆ ರೀತಿಯಾಗಿದ್ದರೂ ತನ್ನ ಪತಿಗೆ ಅಂತಹ ಯಾವುದೇ ಅಭ್ಯಾಸಗಳಿಲ್ಲ ಎಂದು ಅವರು ರವೀಂದ್ರಾ ಜಡೇಜಾ ಅವರಿಗೆ ಈ ವಿಷಯದಲ್ಲಿ ಕ್ಲೀನ್ ಚಿಟ್ ನೀಡಿದ್ದಾರೆ.
ಇದನ್ನೂ ಓದಿ: ಗುಜರಾತ್ ಹೊಸ ಕ್ಯಾಬಿನೆಟ್: ಹರ್ಷ್ ಸಾಂಘ್ವಿ ಅತ್ಯಂತ ಕಿರಿಯ ಡಿಸಿಎಂ; ರವೀಂದ್ರ ಜಡೇಜಾ ಪತ್ನಿ ಸೇರಿ 26 ಮಂತ್ರಿಗಳು
“ನನ್ನ ಪತಿ, ಕ್ರಿಕೆಟಿಗ ರವೀಂದ್ರ ಜಡೇಜಾ ಕ್ರಿಕೆಟ್ ಆಡಲು ಲಂಡನ್, ದುಬೈ ಮತ್ತು ಆಸ್ಟ್ರೇಲಿಯಾದಂತಹ ಹಲವು ದೇಶಗಳಿಗೆ ಪ್ರಯಾಣಿಸಬೇಕಾಗುತ್ತದೆ. ಆದರೂ, ಇಂದಿಗೂ ಅವರು ಯಾವುದೇ ರೀತಿಯ ದುಶ್ಚಟಗಳನ್ನು ಮಾಡಿಲ್ಲ. ಏಕೆಂದರೆ ಅವರು ತಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಂಡಿದ್ದಾರೆ. ಕ್ರಿಕೆಟ್ ತಂಡದ ಉಳಿದವರೆಲ್ಲರೂ ದುಶ್ಚಟಗಳನ್ನು ರೂಢಿಸಿಕೊಂಡಿದ್ದಾರೆ. ಆದರೆ ಅವರ ಕುಟುಂಬಗಳಿಂದ ಅದಕ್ಕೆ ಯಾವುದೇ ನಿರ್ಬಂಧವಿಲ್ಲ” ಎಂದು ರಿವಾಬಾ ಹೇಳಿದ್ದಾರೆ. ಈ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ.
“ಒಮ್ಮೆ ನಾವು ಜೀವನದಲ್ಲಿ ಪ್ರಗತಿ ಸಾಧಿಸಿದ ನಂತರ ನಡೆದುಬಂದ ಹಾದಿಯನ್ನು ಮರೆಯಬಾರದು. ನಮ್ಮ ಸಾಂಸ್ಕೃತಿಕ ಬೇರುಗಳನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ” ಎಂದು ರಿವಾಬಾ ಹೇಳಿದ್ದಾರೆ.
ಇದನ್ನೂ ಓದಿ: IPL 2026: ನಾನು ತಂಡಕ್ಕೆ ಬರಬೇಕೆಂದರೆ..; ರಾಜಸ್ಥಾನ್ಗೆ ಬಿಸಿ ತುಪ್ಪವಾದ ರವೀಂದ್ರ ಜಡೇಜಾ ಷರತ್ತು
2016ರಲ್ಲಿ ಕ್ರಿಕೆಟಿಗ ಕೆ.ಎಲ್ ರಾಹುಲ್ ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಕೈಯಲ್ಲಿ ಬಿಯರ್ ಬಾಟಲಿಯನ್ನು ಹಿಡಿದುಕೊಂಡು ತಮ್ಮ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದರು. ಈ ಫೋಟೋ ತಕ್ಷಣವೇ ವೈರಲ್ ಆಯಿತು. ಇದರಿಂದಾಗಿ ಬಿಸಿಸಿಐ ಆಟಗಾರರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕೆಂದು ಕ್ರಿಕೆಟಿಗರಿಗೆ ನಿರ್ದೇಶಿಸುವಂತಾಯಿತು.
“मेरे पति (रवींद्र जडेजा , क्रिकेटर)को लंदन , दुबई, ऑस्ट्रेलिया जैसे अनेकों देशों में खेलने के लिए जाना होता है फिर भी आज दिन तक उन्होंने कभी व्यसन नहीं किया क्योंकि वो अपनी जवाबदारी को समझते हैं @Rivaba4BJP जी , शिक्षा मंत्री गुजरात सरकार #Rivabajadeja #ravindrajadeja pic.twitter.com/OyuiPFPvVa
— राणसिंह राजपुरोहित (@ransinghBJP) December 10, 2025
2024ರ ಆರಂಭದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ತಂಬಾಕು ಮತ್ತು ಆಲ್ಕೋಹಾಲ್ ಉತ್ಪನ್ನಗಳ ಜಾಹೀರಾತಿನಲ್ಲಿ ಕ್ರೀಡಾಪಟುಗಳು ಭಾಗವಹಿಸುವುದನ್ನು ತಡೆಯುವ ಕ್ರಮಗಳನ್ನು ಜಾರಿಗೆ ತರಲು ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಗೆ ಸೂಚಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:14 pm, Fri, 12 December 25