ಗುಜರಾತ್ ಹೊಸ ಕ್ಯಾಬಿನೆಟ್: ಹರ್ಷ್ ಸಾಂಘ್ವಿ ಅತ್ಯಂತ ಕಿರಿಯ ಡಿಸಿಎಂ; ರವೀಂದ್ರ ಜಡೇಜಾ ಪತ್ನಿ ಸೇರಿ 26 ಮಂತ್ರಿಗಳು
Gujarat cabinet reshuffle updates: ಗುಜರಾತ್ ಸಂಪುಟದ ಪುನಾರಚನೆ ನಡೆದಿದ್ದು, ಹಲವು ಹಾಲಿ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಸ್ಥಾನ ಕೊಡಲಾಗಿದೆ. ಸಿಎಂ ಭೂಪೇಂದ್ರ ಪಟೇಲ್ ನೇತೃತ್ವದ ಸಂಪುಟದಲ್ಲಿ 26 ಮಂದಿ ಸಚಿವರಿರಲಿದ್ದಾರೆ. ಇದರಲ್ಲಿ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಕೂಡ ಇದ್ದಾರೆ. ಇಂದೇ ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಗಾಂಧಿನಗರ್, ಅಕ್ಟೋಬರ್ 17: ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ (Bhupendra Patel) ತಮ್ಮ ಸಂಪುಟ ಪುನಾರಚನೆ ಮಾಡಿದ್ದಾರೆ. ಮಾಧ್ಯಮಗಳಿಗೆ ಬಂದ ಮಾಹಿತಿ ಪ್ರಕಾರ 26 ಮಂತ್ರಿಗಳಿರುವ ಕ್ಯಾಬಿನೆಟ್ ಅನ್ನು ಸಿಎಂ ಹೊಂದಿರಲಿದ್ದಾರೆ. ಹಲವು ಹಾಲಿ ಮಂತ್ರಿಗಳನ್ನು ಕೈಬಿಡಲಾಗಿದೆ. ಹಲವು ಹೊಸಬರಿಗೆ ಮಣೆಹಾಕಲಾಗಿದೆ. ಮೊದಲ ಬಾರಿಗೆ ಮಂತ್ರಿ ಸ್ಥಾನ ಪಡೆದವರಲ್ಲಿ ಗಮನ ಸೆಳೆಯುತ್ತಿರುವವರು ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬ ಜಡೇಜಾ (Rivaba Jadeja).
ಹೊಸ ಸಂಪುಟ ಸದಸ್ಯರ ಪ್ರಮಾಣ ವಚನ ಸಮಾರಂಭ ಇಂದು ಶುಕ್ರವಾರವೇ ನಡೆಯಲಿದೆ. ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರನ್ನು ಸಿಎಂ ಭೂಪೇಂದ್ರ ಪಟೇಲ್ ಭೇಟಿಯಾಗಿ ಪ್ರಮಾಣ ವಚನ ಸಮಾರಂಭಕ್ಕೆ ಅನುಮತಿ ಪಡೆದಿದ್ದಾರೆ. ಶುಕ್ರವಾರ ಸಂಜೆ ನಡೆಯುವ ಸಮಾರಂಭದಲ್ಲಿ ಎಲ್ಲಾ ಮಂತ್ರಿಗಳು ರಾಜ್ಯಪಾಲರಿಂದ ಪ್ರಮಾಣ ಬೋಧನೆ ಪಡೆಯಲಿದ್ದಾರೆ.
ಇದನ್ನೂ ಓದಿ: ಭಾರತ-ಅಫ್ಘಾನ್ ವಿರುದ್ಧ ಯುದ್ಧ ಮಾಡಲು ನಾವು ಸಿದ್ಧ: ಪಾಕ್ ರಕ್ಷಣಾ ಸಚಿವ
ಭುಪೇಂದ್ರ ಪಟೇಲ್ ಸಂಪುಟಕ್ಕೆ ಸೇರಿದ ಮಂತ್ರಿಗಳು
ವರದಿಗಳ ಪ್ರಕಾರ ಒಟ್ಟು 26 ಮಂದಿಗೆ ಭೂಪೇಂದ್ರ ಪಟೇಲ್ ಅವರ ಸಂಪುಟಕ್ಕೆ ಸೇರಲಿದ್ದಾರೆ. ಇದರಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಕೂಡ ಸೇರಿದ್ದಾರೆ. ಅಲ್ಪೇಶ್ ಠಾಕೂರ್ ಅವರಿಗೂ ಮಂತ್ರಿಯಾಗುವ ಯೋಗ ಸಿಕ್ಕಿದೆ.
ಹರ್ಷ್ ಸಾಂಘ್ವಿ ಕಿರಿಯ ವಯಸ್ಸಿನ ಡಿಸಿಎಂ
40 ವರ್ಷದ ಹರ್ಷ್ ಸಾಂಘ್ವಿ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ. ಗುಜರಾತ್ ರಾಜ್ಯದ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಡಿಸಿಎಂ ಎನ್ನುವ ದಾಖಲೆ ಮತ್ತು ಗೌರವ ಹರ್ಷ್ ಸಾಂಘ್ವಿ ಅವರದ್ದಾಗಿದೆ.
ಇದನ್ನೂ ಓದಿ: ಉಪ ರಾಷ್ಟ್ರಪತಿ ರಾಧಾಕೃಷ್ಣನ್ ಚೆನ್ನೈ ನಿವಾಸಕ್ಕೆ ಹುಸಿ ಬಾಂಬ್ ಬೆದರಿಕೆ
ಗುಜರಾತ್ನ ಹೊಸ ಕ್ಯಾಬಿನೆಟ್ಗೆ ಸೇರ್ಪಡೆಯಾಗಿರುವ 20ಕ್ಕೂ ಹೆಚ್ಚು ಸಚಿವರಲ್ಲಿ ಮೂವರು ಮಹಿಳೆಯರಿದ್ದಾರೆ. ಮನೀಶಾ ವಕೀಲ್, ರಿವಾಬಾ ಜಡೇಜಾ ಮತ್ತು ದರ್ಶನಾ ವಘೇಲಾ ಅವರು ಆ ಮೂವರು ಸಚಿವೆಯರು. ಈ ಪೈಕಿ ಮನೀಶಾ ವಕೀಲ್ ಅವರು ಈ ಹಿಂದೆ ಸಚಿವೆಯಾಗಿ ಕೆಲಸ ಮಾಡಿದ ಅನುಭವಿಯಾಗಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:02 pm, Fri, 17 October 25




