AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುರುಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೆ ಕೃಷ್ಣನ ಬೃಹತ್ ವಿಶ್ವರೂಪ ವಿಗ್ರಹ ಕೆತ್ತನೆ ಮಾಡಲಿದ್ದಾರೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್

ಅಯೋಧ್ಯೆ ರಾಮಲಲ್ಲಾ ಮೂರ್ತಿ ಖ್ಯಾತಿಯ ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ಕುರುಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೆ ಬೃಹತ್ ಕೃಷ್ಣನ ವಿಶ್ವರೂಪ ವಿಗ್ರಹ ಕೆತ್ತನೆಗೆ ಸಿದ್ಧತೆ ನಡೆಸಿರುವುದಾಗಿ ಹೇಳಿದ್ದಾರೆ. ಹತ್ತು ಮುಖಗಳಿಗೆ ಭಾವ ತುಂಬುವುದು ಸವಾಲಾಗಿದ್ದು, ಸಂಶೋಧನೆ ನಡೆಯುತ್ತಿದೆ. ಅವಕಾಶ ಸಿಕ್ಕರೆ ಮೈಸೂರಿನಲ್ಲೇ ಕೆತ್ತನೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕುರುಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೆ ಕೃಷ್ಣನ ಬೃಹತ್ ವಿಶ್ವರೂಪ ವಿಗ್ರಹ ಕೆತ್ತನೆ ಮಾಡಲಿದ್ದಾರೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್
ಕೃಷ್ಣನ ಬೃಹತ್ ವಿಶ್ವರೂಪ ವಿಗ್ರಹ ಕೆತ್ತನೆ ಮಾಡಲಿದ್ದಾರೆ ಅರುಣ್ ಯೋಗಿರಾಜ್
ರಾಮ್​, ಮೈಸೂರು
| Edited By: |

Updated on: Oct 17, 2025 | 11:21 AM

Share

ಮೈಸೂರು, ಅಕ್ಟೋಬರ್ 17: ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿ ದೇಶದ ಗಮನ ಸೆಳೆದಿರುವ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಬಾಲಿವುಡ್ ತಾರೆಯರಾದ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮನೆಗೆ ಗಣೇಶ ವಿಗ್ರಹ ಕೆತ್ತನೆ ಮಾಡಿ ಕೊಟ್ಟಿದ್ದು ಸುದ್ದಿಯಲ್ಲಿದೆ. ಇದೇ ಸಂದರ್ಭದಲ್ಲಿ ಅವರು ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ಹರಿಯಾಣದ ಕುರುಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲು ಕೃಷ್ಣನ ಬೃಹತ್ ವಿಶ್ವರೂಪ ವಿಗ್ರಹ ಕೆತ್ತನೆಗೆ ಸಿದ್ಧತೆ ಮಾಡುತ್ತಿರುವುದಾಗಿ ‘ಟಿವಿ9’ಗೆ ತಿಳಿಸಿದ್ದಾರೆ. ಕುರುಕ್ಷೇತ್ರದಲ್ಲಿ ಕೃಷ್ಣನ ಬೃಹತ್ ವಿಶ್ವರೂಪ ವಿಗ್ರಹ ಕೆತ್ತನೆಗೆ ಈಗಾಗಲೇ ಕಲ್ಲಿಗೆ ಪೂಜೆ ಸಲ್ಲಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಹೇಗಿರಲಿದೆ ಕೃಷ್ಣನ ವಿಶ್ವರೂಪ ವಿಗ್ರಹ?

ಹರಿಯಾಣದ ಕುರುಕ್ಷೇತ್ರದಲ್ಲಿ ಕೃಷ್ಣನ ವಿಶ್ವರೂಪ ಮೂರ್ತಿಗಾಗಿ 18 ಅಂತಸ್ತಿನ ಗರ್ಭಗುಡಿ ನಿರ್ಮಾಣ ಮಾಡಲಾಗಿದೆ. ಅದರ ಒಳಗಡೆ ಕೃಷ್ಣನ‌ ವಿಶ್ವರೂಪ ವಿಗ್ರಹ ಪ್ರತಿಷ್ಠೆ ಮಾಡಲಾಗುತ್ತದೆ. ಅದಕ್ಕಾಗಿ ಹೋಮ್ ವರ್ಕ್ ಶುರು ಮಾಡಿದ್ದೇನೆ. ಇದು ಮುಗಿದ ನಂತರ ಕೆಲಸ ಆರಂಭಿಸುತ್ತೇನೆ. ಈ ವಿಗ್ರಹಕ್ಕಾಗಿ ಸಾಕಷ್ಟು ಸಂಶೋಧನೆ ಮಾಡಲಾಗುತ್ತಿದೆ. ವಿಗ್ರಹ ಕೆತ್ತನೆ ಆರಂಭಿಸಲು ಯಾವುದೇ ಸಮಯ ನಿಗದಿಯಾಗಿಲ್ಲ. ಸಾವಕಾಶವಾಗಿ ಕೆತ್ತನೆ ಮಾಡಲಾಗುತ್ತದೆ ಎಂದು ಯೋಗಿರಾಜ್ ತಿಳಿಸಿದ್ದಾರೆ.

ಕೃಷ್ಣನ ವಿಶ್ವರೂಪ ವಿಗ್ರಹದ ಹತ್ತು ಮುಖಗಳಿಗೆ ಭಾವ ತುಂಬುವುದು ಸವಾಲಗಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿದೆ. ಮೈಸೂರಿನಲ್ಲಿಯೇ ಮೂರ್ತಿ ಕೆತ್ತನೆ ಮಾಡಿ ಕೊಂಡೊಯ್ಯಲು ಅವಕಾಶ ಕೇಳಿದ್ದೇನೆ. ಇಲ್ಲೇ ವಿಗ್ರಹ ಕೆತ್ತಿ ಕುರುಕ್ಷೇತ್ರಕ್ಕೆ ತೆಗೆದುಕೊಂಡು ಹೋಗಲಾಗುವುದು. ಅವರು ಅನುಮತಿ ನೀಡಿದರೆ ಮೈಸೂರಿನ ಜನರಿಗೆ ತೋರಿಸಿ ನಂತರ ಕುರುಕ್ಷೇತ್ರಕ್ಕೆ ವಿಗ್ರಹ ಕೊಂಡೊಯ್ಯಲಾಗುವುದು ಎಂದು ಅರುಣ್ ಯೋಗಿರಾಜ್ ತಿಳಿಸಿದ್ದಾರೆ.

ಆಲಿಯಾ ಭಟ್, ರಣಬೀರ್ ಕಪೂರ್ ಮನೆಯಲ್ಲಿ ಗಣೇಶ ವಿಗ್ರಹ

ಬಾಲಿವುಡ್ ತಾರೆಯರಾದ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅವರ ಮುಂಬೈಯ ನೂತನ ಮನೆಯ ಗೃಪ್ರವೇಶ ಇಂದು ನಡೆಯುತ್ತಿದ್ದು, ಅರುಣ್ ಯೋಗಿರಾಜ್ ಕೆತ್ತನೆ ಮಾಡಿರುವ ಸುಂದರ ಗಣೇಶನ ಮೂರ್ತಿ ಇಡಲಾಗಿದೆ. ಈ ಬಗ್ಗೆಯೂ ‘ಟಿವಿ9’ಗೆ ಪ್ರತಿಕ್ರಿಯಿಸಿದ ಯೋಗಿರಾಜ್, ಖುದ್ದು ಆಲಿಯಾ ಭಟ್ ಕರೆ ಮಾಡಿ ಕೇಳಿದ್ದರು. ಆ ದಂಪತಿ ಆಸೆಯಂತೆ ವಿನಾಯಕನ ಮೂರ್ತಿ ಕೆತ್ತನೆ ಮಾಡಿದ್ದೇನೆ ಎಂದರು.

ಇದನ್ನೂ ಓದಿ: ಆಲಿಯಾ-ರಣಬೀರ್ ಹೊಸ ಮನೆಯಲ್ಲಿ ಕಂಗೊಳಿಸಲಿದೆ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣಪತಿ ಮೂರ್ತಿ

ಎಲ್ಲಾ ಮಾಹಿತಿ ಪಡೆದುಕೊಂಡು ಕೆಲಸ ಆರಂಭಿಸಿದ್ದೆ. ಹೊಯ್ಸಳ ಶೈಲಿಯ ಆಭರಣಗಳು ಮೂರ್ತಿಯಲ್ಲಿವೆ. ಮೈಸೂರು ಶೈಲಿಯಲ್ಲಿ ಗಣಪನ ವಿಗ್ರಹವನ್ನು ಕೆತ್ತನೆ ಮಾಡಲಾಗಿದೆ‌‌. ಇಂದು ಆಲಿಯಾ ಭಟ್ ಕುಟುಂಬಸ್ಥರಿಂದ ಗಣಪತಿಗೆ ಪೂಜೆ ನಿಗದಿಯಾಗಿದೆ‌ ಎಂದು ಅರುಣ್ ಯೋಗಿರಾಜ್ ಹೇಳಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ