
ಕೊಚ್ಚಿ, ನವೆಂಬರ್ 24: ಮದುವೆಯೆಂಬುದು ಪ್ರತಿಯೊಬ್ಬರ ಜೀವನದಲ್ಲೂ ಬಹಳ ಮುಖ್ಯವಾದ ಘಟ್ಟ. ಜೀವನಪರ್ಯಂತ ಒಬ್ಬ ವ್ಯಕ್ತಿಯನ್ನು ತನ್ನೊಡನೆ ಬದುಕಲು ಆರಿಸಿಕೊಳ್ಳುವ ಹಾಗೂ ಆ ಸಂಬಂಧಕ್ಕೆ ಸಂಪ್ರದಾಯದ ಮುದ್ರೆ ಒತ್ತುವ ದಿನವಿದು. ಕೇರಳದ ಕೊಚ್ಚಿಯ ಜೋಡಿಯ ವಿವಾಹ (Wedding) ಕೂಡ ಕಳೆದ ವಾರ ನಿಗದಿಯಾಗಿತ್ತು. ಎಲ್ಲ ಸರಿಯಾಗಿ ನಡೆದಿದ್ದರೆ ಅವರ ಜೋಡಿ ಕೂಡ ಬೇರೆಲ್ಲ ದಂಪತಿಯ ಸಾಲಿಗೇ ಸೇರುತ್ತಿತ್ತು. ಆದರೆ, ಮದುವೆಯ ದಿನವೇ ಅವರಿಗೆ ಅಗ್ನಿಪರೀಕ್ಷೆಯೊಂದು ಎದುರಾಗಿತ್ತು.
ಮದುವೆಯ ದಿನ ಮುಂಜಾನೆ ತನ್ನ ಮದುವೆಗೆ ಸುಂದರವಾಗಿ ರೆಡಿಯಾಗಬೇಕೆಂದು ಬ್ಯೂಟಿ ಪಾರ್ಲರ್‌ಗೆ ಹೋಗಿದ್ದ ವಧುವಿಗೆ ಅಪಘಾತವಾಗಿತ್ತು. ಈ ಅಪಘಾತದಿಂದ ಆಕೆಯ ಬೆನ್ನುಮೂಳೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು. ಆದರೆ, ಇದರಿಂದ ಆ ವರ ಎದೆಗುಂದಲಿಲ್ಲ. ನಿಗದಿಯಾದ ಮುಹೂರ್ತದಲ್ಲೇ ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುತ್ತೇನೆಂದು ಹಠ ಹಿಡಿದ ಆತ ಅರ್ಚಕರು ಹಾಗೂ ತಮ್ಮೆರಡು ಕುಟುಂಬದ ಹತ್ತಿರದ ಸಂಬಂಧಿಕರೊಡನೆ ಆಸ್ಪತ್ರೆಗೆ ಹೋಗಿ, ವೈದ್ಯರ ಅನುಮತಿ ಪಡೆದು, ವಾರ್ಡ್ನೊಳಗಿನ ಬೆಡ್ನಲ್ಲೇ ಆ ವಧುವಿಗೆ ತಾಳಿ ಕಟ್ಟಿದ್ದಾರೆ.
A couple from Kerala got married in a hospital emergency ward after the bride suffered a spinal injury in a road accident just hours before their wedding.
Despite the challenging circumstances, the wedding was carried out with the support of medical staff and family members… pic.twitter.com/UfBnH8UlTD
— Lakshay Mehta (@lakshaymehta08) November 23, 2025
ಈ ಮೂಲಕ ಅವನಿ ಹಾಗೂ ಶರೋನ್ ಅವರ ಮದುವೆ ಹತ್ತರಲ್ಲಿ ಮತ್ತೊಂದು ಎನಿಸಿಕೊಳ್ಳದೆ ಬಹಳ ವಿಶೇಷವೆನಿಸಿದೆ. ಈ ದೃಶ್ಯವನ್ನು ನೋಡಿ ಎರಡೂ ಕುಟುಂಬದವರು ಕಣ್ತುಂಬಿಕೊಂಡು ನವದಂಪತಿಗೆ ಹಾರೈಸಿದರು. ಆಲಪ್ಪುಳದ ಕೊಮ್ಮಡಿಲ್‌ನ ಅವನಿ ಶಿಕ್ಷಕಿಯಾಗಿದ್ದಾರೆ. ಥುಂಪೋಲಿಯ ಸಹಾಯಕ ಪ್ರಾಧ್ಯಾಪಕ ಶರೋನ್ ಅವರ ಮದುವೆ ಕಳೆದ ಶುಕ್ರವಾರ ಅದ್ದೂರಿ ಸಮಾರಂಭದಲ್ಲಿ ನಡೆಯಬೇಕಿತ್ತು. ಆದರೆ ಆ ದಿನ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅವನಿ, ಆಕೆಯ ಸೋದರಸಂಬಂಧಿ ಮತ್ತು ಚಿಕ್ಕಮ್ಮ ಮೇಕಪ್‌ಗಾಗಿ ಕೊಟ್ಟಾಯಂನಲ್ಲಿರುವ ಬ್ಯೂಟಿ ಪಾರ್ಲರ್‌ಗೆ ಪ್ರಯಾಣಿಸುತ್ತಿದ್ದರು. ಆಗ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿತ್ತು. ಸ್ಥಳೀಯ ನಿವಾಸಿಗಳು ಮೂವರನ್ನು ರಕ್ಷಿಸಿ ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಿದರು. ಮೂವರೂ ತೀವ್ರವಾಗಿ ಗಾಯಗೊಂಡಿದ್ದರು.
ಇದನ್ನೂ ಓದಿ: ರೈಲಿನೊಳಗೆ ಮ್ಯಾಗಿ ಬೇಯಿಸಿ, ಚಹಾ ಮಾಡಿದ ಮಹಿಳೆ! ರೈಲ್ವೆ ಇಲಾಖೆ ಎಚ್ಚರಿಕೆ
ಆ ದಿನವೇ ಮದುವೆಯಾಗಬೇಕಿದ್ದ ಅವನಿಯ ಬೆನ್ನುಮೂಳೆಗೆ ತೀವ್ರ ಗಾಯಗಳಾಗಿದ್ದರಿಂದ ಆಕೆಗೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ವಿಶೇಷ ಚಿಕಿತ್ಸೆಗಾಗಿ ಮಧ್ಯಾಹ್ನ ಅವರನ್ನು ಎರ್ನಾಕುಲಂನ ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಈ ಸುದ್ದಿ ತಿಳಿದ ಶರೋನ್ ಮತ್ತು ಅವರ ಕುಟುಂಬ ಆಸ್ಪತ್ರೆಗೆ ಧಾವಿಸಿದರು. ಅದೇ ದಿನ ಮಧ್ಯಾಹ್ನ 12.15ಕ್ಕೆ ನಿಗದಿಯಾಗಿದ್ದ ಮುಹೂರ್ತದಲ್ಲಿ ಅವರು ಮದುವೆಯಾಗಲು ನಿರ್ಧರಿಸಿದರು. ಶರೋನ್ ಅವರ ಕೋರಿಕೆಯ ಮೇರೆಗೆ, ಆಸ್ಪತ್ರೆ ಅಧಿಕಾರಿಗಳು, ವೈದ್ಯಕೀಯ ತಂಡದೊಂದಿಗೆ ಸಮಾಲೋಚಿಸಿದ ನಂತರ, ವರನಿಗೆ ತುರ್ತು ವಿಭಾಗದಲ್ಲಿ ತಾಳಿ ಕಟ್ಟಲು ವಿಶೇಷ ವ್ಯವಸ್ಥೆಗಳನ್ನು ಮಾಡಿದರು. ಈ ಸಮಾರಂಭವು ರೋಗಿಗೆ ಯಾವುದೇ ಅಸ್ವಸ್ಥತೆಯನ್ನು ಉಂಟುಮಾಡುವುದಿಲ್ಲ ಎಂದು ಖಚಿತಪಡಿಸಿಕೊಂಡರು. ಬಳಿಕ ಆಸ್ಪತ್ರೆಯ ಐಸಿಯು ವಾರ್ಡ್ನಲ್ಲೇ ವಿವಾಹ ನೆರವೇರಿತು.
ಇದನ್ನೂ ಓದಿ: Video: ಜೀವನಕ್ಕಾಗಿ ಮೆಕ್ಯಾನಿಕ್ ಕೆಲಸ, ಪ್ರಾಣಿಗಳೇ ಈತನ ಪ್ರಪಂಚ; ಇದು ಕುದುರೆಮುಖದ ರೂಬನ್ ಜೀವನದ ಕಥೆ
ವಧು ಅವನಿ ಅವರ ಬೆನ್ನುಮೂಳೆಗೆ ಗಂಭೀರ ಗಾಯವಾಗಿದ್ದು, ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಮದುವೆಯ ಆಚರಣೆಗಳು ಅನಿರೀಕ್ಷಿತವಾಗಿ ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದರೂ, ವಿವಾಹದ ಸ್ಥಳದಲ್ಲಿ ಈಗಾಗಲೇ ಸೇರಿದ್ದ ಅತಿಥಿಗಳಿಗೆ ಮದುವೆಯ ಊಟವನ್ನು ಹಾಕಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ