ಭಾರತದಲ್ಲಿ ಈ ವರ್ಷ ದಾಖಲೆಯ 1.37 ಲಕ್ಷ ಎಂಬಿಬಿಎಸ್ ಸೀಟುಗಳಿಗೆ ಅನುಮೋದನೆ; ಕರ್ನಾಟಕಕ್ಕೆ ಹೆಚ್ಚು ಲಾಭ!

ವೈದ್ಯಕೀಯ ಶಿಕ್ಷಣ ರಂಗದಲ್ಲಿ ಹೊಸ ಇತಿಹಾಸ ಬರೆಯಲು ಮುಂದಾಗಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ ಈ ವರ್ಷ ದೇಶಾದ್ಯಂತ ಒಟ್ಟು 823 ವೈದ್ಯಕೀಯ ಕಾಲೇಜುಗಳಲ್ಲಿ 1.37 ಲಕ್ಷ ಎಂಬಿಬಿಎಸ್ (MBBS) ಸೀಟುಗಳಿಗೆ ಅನುಮೋದನೆ ನೀಡಿದೆ. ಈ ಬಾರಿ ಹೊಸದಾಗಿ 25 ಕಾಲೇಜುಗಳ 2,400 ಸೀಟುಗಳು ಸೇರಿದಂತೆ ಒಟ್ಟು 9,911 ಸೀಟುಗಳನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಲಾಗಿದೆ. ಇನ್ನೊಂದು ಖುಷಿಯ ವಿಷಯವೇನೆಂದರೆ, ದೇಶದಲ್ಲೇ ಅತಿ ಹೆಚ್ಚು ಎಂಬಿಬಿಎಸ್ ಸೀಟುಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮತ್ತೆ ಮೊದಲ ಸ್ಥಾನ ಕಾಯ್ದುಕೊಂಡಿದೆ.

ಭಾರತದಲ್ಲಿ ಈ ವರ್ಷ ದಾಖಲೆಯ 1.37 ಲಕ್ಷ ಎಂಬಿಬಿಎಸ್ ಸೀಟುಗಳಿಗೆ ಅನುಮೋದನೆ; ಕರ್ನಾಟಕಕ್ಕೆ ಹೆಚ್ಚು ಲಾಭ!
MBBS
Image Credit source: Getty Image

Updated on: Jul 16, 2026 | 6:58 PM

ಮುಖ್ಯಾಂಶಗಳು

  • ಈ ವರ್ಷ 9,911 ಅಧಿಕ ಎಂಬಿಬಿಎಸ್ ಸೀಟು ಹಂಚಿಕೆ
  • ಕರ್ನಾಟಕ ಮತ್ತು ತಮಿಳುನಾಡಿಗೆ ಅತಿ ಹೆಚ್ಚು ವೈದ್ಯಕೀಯ ಸೀಟು
  • ಈ ವರ್ಷ 1.37 ಲಕ್ಷ ಎಂಬಿಬಿಎಸ್ ಸೀಟುಗಳಿಗೆ ಸರ್ಕಾರ ಒಪ್ಪಿಗೆ

ನವದೆಹಲಿ, ಜುಲೈ 16: ಭಾರತದಲ್ಲಿ ಈ ಬಾರಿ ವೈದ್ಯರ ಸಂಖ್ಯೆ ಹೆಚ್ಚಾಗಲಿದೆ. ಏಕೆಂದರೆ, ಭಾರತದ ವೈದ್ಯಕೀಯ ಶಿಕ್ಷಣ ರಂಗದಲ್ಲಿ ಇತಿಹಾಸದಲ್ಲೇ ಮೊದಲ ಬಾರಿ 2026-27ನೇ ಶೈಕ್ಷಣಿಕ ಸಾಲಿನಲ್ಲಿ ದೇಶಾದ್ಯಂತ ಬರೋಬ್ಬರಿ 1.37 ಲಕ್ಷ ಎಂಬಿಬಿಎಸ್ (MBBS) ಸೀಟುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಅನುಮೋದನೆ ನೀಡಿದೆ. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ, ರಾಜ್ಯವಾರು ಎಂಬಿಬಿಎಸ್​ ಸೀಟು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅತಿ ಹೆಚ್ಚು ಸೀಟುಗಳನ್ನು ನೀಡಲಾಗಿದೆ. ದೇಶದಲ್ಲೇ ಅತಿಹೆಚ್ಚು ಎಂಬಿಬಿಎಸ್​ ಸೀಟುಗಳನ್ನು ಪಡೆಯುವ ಮೂಲಕ ಕರ್ನಾಟಕ ಅಗ್ರಸ್ಥಾನ ಪಡೆದುಕೊಂಡಿದೆ.

ನೀಟ್-ಯುಜಿ (NEET-UG) ಫಲಿತಾಂಶ ಪ್ರಕಟವಾಗುವುದಕ್ಕೂ ಮುನ್ನವೇ ವೈದ್ಯಕೀಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ಸಿಹಿ ಸುದ್ದಿ ನೀಡಿದೆ. ಈ ಬಾರಿ ಎಂಬಿಬಿಎಸ್ ಸೀಟುಗಳ ಸಂಖ್ಯೆಯಲ್ಲಿ ಶೇ. 7ರಷ್ಟು ಹೆಚ್ಚಳ ಮಾಡಲಾಗಿದ್ದು, ಇದರಿಂದಾಗಿ ಭಾರತದಲ್ಲಿ ಒಟ್ಟು ಪದವಿಪೂರ್ವ ವೈದ್ಯಕೀಯ ಸೀಟುಗಳ ಸಂಖ್ಯೆ 1.37 ಲಕ್ಷ ತಲುಪಿದೆ.

ಕರ್ನಾಟಕಕ್ಕೆ ಮೊದಲ ಸ್ಥಾನ:

ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳೆರಡರಲ್ಲೂ ಸೀಟುಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಕರ್ನಾಟಕ ರಾಜ್ಯದ ಒಟ್ಟು 75 ವೈದ್ಯಕೀಯ ಕಾಲೇಜುಗಳಲ್ಲಿ ಬರೋಬ್ಬರಿ 15,395 ಸೀಟುಗಳು ಲಭ್ಯವಿದ್ದು, ಈ ಬಾರಿ ದಾಖಲೆಯ 1,300 ಸೀಟುಗಳು ಹೆಚ್ಚಳವಾಗಿವೆ. ಕರ್ನಾಟಕ ಒಟ್ಟು 15,395 ಸೀಟುಗಳೊಂದಿಗೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕರ್ನಾಟಕದ ನಂತರ 2ನೇ ಸ್ಥಾನವನ್ನು ತಮಿಳುನಾಡು ಪಡೆದುಕೊಂಡಿದೆ. ತಮಿಳುನಾಡಿನ 78 ಕಾಲೇಜುಗಳಲ್ಲಿ 13,999 ಸೀಟುಗಳು ಲಭ್ಯವಿವೆ. ಈ ಬಾರಿ 950 ಸೀಟುಗಳು ಹೆಚ್ಚಳವಾಗಿದೆ. ನಂತರ ಸ್ಥಾನಗಳಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್, ಪಶ್ಚಿಮ ಬಂಗಾಳ ರಾಜ್ಯಗಳು ಇವೆ.

ಇದನ್ನೂ ಓದಿ: ನೀಟ್ ಪರೀಕ್ಷೆ: ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು 45 ನಿಮಿಷ ದೆಹಲಿ ಏರ್​ಪೋರ್ಟ್​​ನಲ್ಲೇ ಕಾದ ಮೋದಿ

ಕೇಂದ್ರ ಆರೋಗ್ಯ ಸಚಿವಾಲಯವು ಈ ನಿರ್ಧಾರವನ್ನು ಶ್ಲಾಘಿಸಿದೆ. ದೇಶದಲ್ಲಿ ನುರಿತ ವೈದ್ಯಕೀಯ ಮಾನವ ಸಂಪನ್ಮೂಲವನ್ನು ನಿರ್ಮಿಸಲು ಮತ್ತು ದೇಶದ ಮೂಲೆ ಮೂಲೆಗೂ ವೈದ್ಯಕೀಯ ಸೇವೆಗಳನ್ನು ವಿಸ್ತರಿಸಲು ಈ ಸೀಟುಗಳ ಹೆಚ್ಚಳವು ಅತ್ಯಗತ್ಯ ಮತ್ತು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಸಚಿವಾಲಯ ಹೇಳಿದೆ. ಇದರ ನಡುವೆ, ದೇಶದ ಹಲವು ಕಾಲೇಜುಗಳಲ್ಲಿ ಅರ್ಹ ಅಧ್ಯಾಪಕರ ಕೊರತೆಯಿದ್ದು, ಇಂತಹ ಪರಿಸ್ಥಿತಿಯಲ್ಲಿ ಸೀಟುಗಳನ್ನು ಹೆಚ್ಚಿಸುವುದರಿಂದ ಹೊರಬರುವ ವೈದ್ಯರ ಗುಣಮಟ್ಟ ಕಳಪೆಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಎಂಬಿಬಿಎಸ್​ ಸೀಟುಗಳನ್ನು ಹೆಚ್ಚಿಸುವುದರ ಜೊತೆಗೆ ಸ್ನಾತಕೋತ್ತರ (PG) ಸೀಟುಗಳ ಹೆಚ್ಚಳ ಮಾಡಬೇಕು, ತಜ್ಞ ವೈದ್ಯರ ಕೊರತೆ ನೀಗಿಸಲು ಪಿಜಿ ಸೀಟುಗಳ ತರಬೇತಿಯನ್ನು ಉತ್ತಮಗೊಳಿಸಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ. ಹಾಗೇ, ಸೀಟುಗಳನ್ನು ಪಡೆದ ವೈದ್ಯರನ್ನು ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸುವಂತೆ ಮಾಡುವ ಸಮರ್ಪಕ ನೀತಿಯನ್ನು ಜಾರಿಗೆ ತರಬೇಕು ಎಂದು ತಜ್ಞರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಫ್ಲಶ್​ ಟ್ಯಾಂಕ್​ನಲ್ಲಿ ಮೊಬೈಲ್ ಅಡಗಿಸಿಟ್ಟು ಹೊಟ್ಟೆ ನೋವೆಂದು ಎದ್ದು ಹೋಗ್ತಿದ್ದ ನೀಟ್ ವಿದ್ಯಾರ್ಥಿ ಸಿಕ್ಕಿಬಿದ್ದಿದ್ಹೇಗೆ?

ಜೂನ್ 21ರಂದು ನಡೆದ ನೀಟ್ ಯುಜಿ (NEET UG 2026) ಪರೀಕ್ಷೆಯ ಫಲಿತಾಂಶಗಳು ಜುಲೈ 20ರೊಳಗೆ ಪ್ರಕಟವಾಗುವ ನಿರೀಕ್ಷೆಯಿದ್ದು, ಇದಕ್ಕೂ ಮುನ್ನವೇ ಎನ್‌ಎಂಸಿ ಸೀಟುಗಳ ಹಂಚಿಕೆಯ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿದೆ. ದೇಶಾದ್ಯಂತ ಇರುವ ಒಟ್ಟು 823 ವೈದ್ಯಕೀಯ ಕಾಲೇಜುಗಳಲ್ಲಿ 1,36,939 ಎಂಬಿಬಿಎಸ್ ಸೀಟುಗಳು ಲಭ್ಯವಿರುತ್ತವೆ. ಇವುಗಳಲ್ಲಿ 1,27,028 ಸೀಟುಗಳಿಗೆ ಈಗಾಗಲೇ ಅನುಮೋದನೆ ದೊರೆತಿದ್ದು, ಈ ವರ್ಷ ಹೊಸದಾಗಿ 9,911 ಸೀಟುಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಇದರೊಂದಿಗೆ, ಒಟ್ಟು 25 ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದ್ದು, ಇವುಗಳಿಂದಲೇ 2,400 ಹೆಚ್ಚುವರಿ ಸೀಟುಗಳು ಲಭ್ಯವಾಗಲಿವೆ. ಈ ವರ್ಷ ಮಂಜೂರಾದ 25 ಹೊಸ ಕಾಲೇಜುಗಳಲ್ಲಿ 7 ಸರ್ಕಾರಿ ಮತ್ತು 18 ಖಾಸಗಿ ಕಾಲೇಜುಗಳು ಸೇರಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:55 pm, Thu, 16 July 26

Follow Us