ನೀಟ್ ಪರೀಕ್ಷೆ: ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು 45 ನಿಮಿಷ ದೆಹಲಿ ಏರ್ಪೋರ್ಟ್ನಲ್ಲೇ ಕಾದ ಮೋದಿ
ಅಂತಾರಾಷ್ಟ್ರೀಯ ಯೋಗ ದಿನದಂದು ಕೋಲ್ಕತ್ತಾದಿಂದ ದೆಹಲಿಗೆ ಮರಳಿದ ಪ್ರಧಾನಿ ಮೋದಿ, ನೀಟ್ ವಿದ್ಯಾರ್ಥಿಗಳಿಗೆ ಟ್ರಾಫಿಕ್ ತೊಂದರೆಯಾಗಬಾರದೆಂದು ವಿಮಾನ ನಿಲ್ದಾಣದಲ್ಲೇ 45 ನಿಮಿಷ ಕಾದರು. ಮಧ್ಯಾಹ್ನ 2 ಗಂಟೆಗೆ ನೀಟ್ ಮರು ಪರೀಕ್ಷೆ ಪ್ರಾರಂಭವಾಗಲಿದ್ದು, ಅವರ ಬೆಂಗಾವಲು ಪಡೆ ರಸ್ತೆಗೆ ಇಳಿದರೆ ಟ್ರಾಫಿಕ್ ಜಾಮ್ ಉಂಟಾಗಬಹುದೆಂಬ ಕಾರಣಕ್ಕೆ ವಿದ್ಯಾರ್ಥಿಗಳ ಅನುಕೂಲಕ್ಕೆ ಆದ್ಯತೆ ನೀಡಿದರು. ಪೇಪರ್ ಸೋರಿಕೆಯ ನಂತರ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಮೋದಿ ಅವರ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ನವದೆಹಲಿ, ಜೂನ್ 21: ಅಂತಾರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ದೆಹಲಿಗೆ ಹಿಂತಿರುಗಿದ ಪ್ರಧಾನಿ ನರೇಂದ್ರ ಮೋದಿ(Narendra Modi) ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ವಿಮಾನ ನಿಲ್ದಾಣದಲ್ಲೇ ಸುಮಾರು 45 ನಿಮಿಷಗಳ ಕಾಲ ಕಾದಿದ್ದಾರೆ. ಪ್ರಧಾನಿಯವರ ಶಿಷ್ಟಾಚಾರದ ಪ್ರಕಾರ ಅವರು ರಸ್ತೆಯಲ್ಲಿ ಚಲಿಸುವಾಗ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದರಿಂದ ನೀಟ್ ಪರೀಕ್ಷೆ ಬರೆಯಲು ಹೋಗುವ ವಿದ್ಯಾರ್ಥಿಗಳಿಗೆ ತಡವಾಗಬಹುದು ಮತ್ತು ತೊಂದರೆಯಾಗಬಹುದು ಎಂಬ ಕಾರಣಕ್ಕೆ ಪ್ರಧಾನಿ ಮೋದಿ ಈ ನಿರ್ಧಾರ ಕೈಗೊಂಡಿದ್ದಾರೆ.
ಪ್ರಧಾನಿ ಮೋದಿ ಅವರ ಕೋಲ್ಕತ್ತಾ ವಿಮಾನವು ಇಂದು ಮಧ್ಯಾಹ್ನ 1.15 ಕ್ಕೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ನಿಯಮದ ಪ್ರಕಾರ ಅವರು ತಕ್ಷಣವೇ ತಮ್ಮ ನಿವಾಸಕ್ಕೆ ತೆರಳಬೇಕಿತ್ತು. ಇಂದು ಮಧ್ಯಾಹ್ನ 2 ಗಂಟೆಗೆ ದೇಶಾದ್ಯಂತ ನೀಟ್ ಮರು ಪರೀಕ್ಷೆ ನಿಗದಿಯಾಗಿತ್ತು. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಲುಪುವ ಅದೇ ಸಮಯದಲ್ಲಿ ಪ್ರಧಾನಿ ಬೆಂಗಾವಲು ಪಡೆ ರಸ್ತೆಗಿಳಿದರೆ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಯಿತ್ತು.
ವಿದ್ಯಾರ್ಥಿಗಳಿಗೆ ಯಾವುದೇ ಅನಾನುಕೂಲವಾಗಬಾರದು ಎಂದು ಯೋಚಿಸಿದ ಪ್ರಧಾನಿ ಮೋದಿ, ಪರೀಕ್ಷೆ ಪ್ರಾರಂಭವಾಗುವ ಮಧ್ಯಾಹ್ನ 2 ಗಂಟೆಯವರೆಗೆ ವಿಮಾನ ನಿಲ್ದಾಣದಲ್ಲೇ ಉಳಿದುಕೊಂಡರು. ಅಭ್ಯರ್ಥಿಗಳೆಲ್ಲರೂ ಪರೀಕ್ಷಾ ಕೇಂದ್ರ ತಲುಪಿದ ಬಳಿಕ ಅವರು ತಮ್ಮ ನಿವಾಸಕ್ಕೆ ತೆರಳಿದರು.
ಮತ್ತಷ್ಟು ಓದಿ: ಯೋಗ ಒಂದು ದಿನದ ಕಾರ್ಯಕ್ರಮ ಆಗುವುದು ಬೇಡ, 365 ದಿನ ನಿಮ್ಮ ಜೀವನದ ಭಾಗವಾಗಿರಲಿ: ಮೋದಿ
ಪೇಪರ್ ಲೀಕ್ ಬಳಿಕ ಕಟ್ಟುನಿಟ್ಟಿನ ಕ್ರಮ: ಈ ಹಿಂದೆ ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆಯಾದ ಕಾರಣ ರದ್ದುಗೊಳಿಸಲಾಗಿತ್ತು. ಹೀಗಾಗಿ ಇಂದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ನಡೆಸಲಾಗುತ್ತಿದ್ದು, ಭದ್ರತೆಯನ್ನು ಯುದ್ಧೋಪಾದಿಯಲ್ಲಿ ಮಾಡಲಾಗಿದೆ.
ಪರೀಕ್ಷಾ ಕೇಂದ್ರಗಳ ಸುತ್ತ ಅರೆಸೈನಿಕ ಮತ್ತು ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆಯ ವದಂತಿಗಳನ್ನು ನಿರ್ಲಕ್ಷಿಸುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪ್ರಧಾನಿಯವರ ಈ ಸಮಯಪ್ರಜ್ಞೆ ಮತ್ತು ಕಾಳಜಿಗೆ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




