Republic Day 2023 Speech Ideas: ಶಾಲೆಯಲ್ಲಿ ಗಣರಾಜ್ಯೋತ್ಸವ ಭಾಷಣ ಮಾಡಿ ಮಿಂಚಲು ಇಲ್ಲಿವೆ ಒಂದಿಷ್ಟು ಪಾಯಿಂಟ್ಸ್

Republic Day Speech: ಗಣರಾಜ್ಯೋತ್ಸವ ದಿನದ ಅಂಗವಾಗಿ ಬಹುತೇಕ ಶಾಲೆಗಳಲ್ಲಿ ಭಾಷಣ ಸ್ಪರ್ಧೆ ನಡೆಯುವುದು ವಾಡಿಕೆ. ಭಾಷಣದಲ್ಲಿ ಯಾವೆಲ್ಲಾ ವಿಷಯಗಳನ್ನು ಪ್ರಸ್ತಾಪಿಸಬಹುದು? ಹೇಗೆ ಭಾಷಣ ಮಾಡಬೇಕು ಎಂಬ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Republic Day 2023 Speech Ideas: ಶಾಲೆಯಲ್ಲಿ ಗಣರಾಜ್ಯೋತ್ಸವ ಭಾಷಣ ಮಾಡಿ ಮಿಂಚಲು ಇಲ್ಲಿವೆ ಒಂದಿಷ್ಟು ಪಾಯಿಂಟ್ಸ್
ಭಾರತದ ಸಂವಿಧಾನ (ಎಡಚಿತ್ರ) ಮತ್ತು ರಾಷ್ಟ್ರಧ್ವಜ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 24, 2023 | 2:21 PM

Republic Day Speech in Kannada | ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಯಂಥ ರಾಷ್ಟ್ರೀಯ ಹಬ್ಬಗಳಲ್ಲಿ ದೇಶವೇ ಸಂಭ್ರಮದಿಂದ ಪಾಲ್ಗೊಳ್ಳುತ್ತದೆ. ದೊಡ್ಡವರಿಗಿಂತಲೂ ಮಕ್ಕಳಲ್ಲಿ ಸಂಭ್ರಮ ಹೆಚ್ಚು. ಒಪ್ಪವಾಗಿ ಸಿಂಗರಿಸಿಕೊಂಡು ಶಾಲೆ, ಕಾಲೇಜುಗಳಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ಪಥಸಂಚಲನ ಮಾಡುವುದು, ಸಿಹಿ ಹಂಚುವುದು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಭ್ರಮಿಸುವ ಉತ್ಸಾಹವಂತೂ ಇದ್ದೇ ಇರುತ್ತದೆ. ಮಕ್ಕಳನ್ನು ಸಿದ್ಧಪಡಿಸಲು ಪೋಷಕರು ಸಹಜವಾಗಿಯೇ ಶ್ರಮಿಸುತ್ತಾರೆ. ಅಗತ್ಯವಿರುವ ಬಟ್ಟೆ, ಬಾವುಟ, ಕೈಗೆ, ತಲೆಗೆ ರಿಬ್ಬನ್​ಗಳು, ಅಂಗಿಯ ಕಿಸೆಯ ಮೇಲೆ ಚುಚ್ಚಲೊಂದು ಸಣ್ಣ ಬಾವುಟದ ಪ್ರತಿಕೃತಿ ಮಕ್ಕಳೊಂದಿಗೆ ದೊಡ್ಡವರೂ ಸಂಭ್ರಮದ ಸಹಭಾಗಿದಾರರಾಗುತ್ತಾರೆ.

ರಾಷ್ಟ್ರೀಯ ಹಬ್ಬಗಳ ಆಚರಣೆಗಳ ಮುಖ್ಯ ಭಾಗ ಭಾಷಣ ಸ್ಪರ್ಧೆ (Republic Day Speech in Kannada). ಹಲವು ಮಕ್ಕಳು ಈಗಾಗಲೇ ಭಾಷಣಕ್ಕಾಗಿ ಸಿದ್ಧತೆ ಮಾಡಿಕೊಂಡಿರುತ್ತಾರೆ. ಕೆಲವರು ಭಾಷಣದಲ್ಲಿ ಪ್ರಸ್ತಾಪಿಸಬಹುದಾದ ಅಂಶಗಳಿಗಾಗಿ ಪೋಷಕರನ್ನು ಪೀಡಿಸುತ್ತಿರುತ್ತಾರೆ. ಗಣರಾಜ್ಯೋತ್ಸವ ದಿನದ ಅಂಗವಾಗಿ ನಡೆಯುವ ಭಾಷಣ ಸ್ಪರ್ಧೆಯಲ್ಲಿ ಏನು ಮಾತನಾಡುವುದು? ಹೇಗೆ ಭಾಷಣ ಮಾಡುವುದು? ಯಾವ ವಿಷಯ ಆರಿಸುವುದು ಎಂಬ ಗೊಂದಲಕ್ಕೆ ಮುಂದಿನ ಸಾಲುಗಳಲ್ಲಿ ಉತ್ತರವಿದೆ.

ಯಾವೆಲ್ಲಾ ಅಂಶಗಳನ್ನು ಪ್ರಸ್ತಾಪಿಸಬಹುದು

ಗಣರಾಜ್ಯೋತ್ಸವದಂದು ಭಾಷಣ ಮಾಡುವಾಗ ಈ ಕೆಳಗಿನ ಅಂಶಗಳನ್ನು ಪ್ರಸ್ತಾಪಿಸಬಹುದು

  • ಗಣರಾಜ್ಯೋತ್ಸವ ದಿನದ ಇತಿಹಾಸ, ಹಿನ್ನೆಲೆ
  • ಭಾರತೀಯ ಸಂವಿಧಾನದ ವೈಶಿಷ್ಟ್ಯಗಳು
  • ದೇಶದ ಸ್ವಾತಂತ್ರ್ಯಕ್ಕಾಗಿ ಜೀವತೆತ್ತ ರಾಷ್ಟ್ರನಾಯಕರ ತ್ಯಾಗ, ಬಲಿದಾನ, ನಿಸ್ವಾರ್ಥ ಸೇವೆ
  • ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಜೀವನ
  • ಒಟ್ಟಾರೆ ಗಣರಾಜ್ಯೋತ್ಸವ ದಿನಾಚರಣೆ

ಮಾದರಿ ಭಾಷಣ

ಈ ಕೆಳಗಿನ ಪಠ್ಯವನ್ನು ಮಾದರಿ ಭಾಷಣವಾಗಿ ಪರಿಗಣಿಸಬಹುದು. ನೀವು ಇದನ್ನು ನಿಮ್ಮದೇ ಶೈಲಿಯಲ್ಲಿ ಬೆಳೆಸಿಕೊಳ್ಳಿ.

ಪ್ರತಿವರ್ಷ ಜನವರಿ 26ರಂದು ಭಾರತದಲ್ಲಿ ಗಣರಾಜ್ಯೋತ್ಸವ ಆಚರಿಸುತ್ತೇವೆ. ಇದು ಭಾರತದ ಮೂರು ರಾಷ್ಟ್ರೀಯ ಹಬ್ಬಗಳಲ್ಲಿ ಒಂದು. ಭಾರತದ ಸಂವಿಧಾನವು ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನವಾಗಿದೆ. ಸಂವಿಧಾನವು ಭಾರತದ ಸರ್ವೋಚ್ಛ ಕಾನೂನು ಎನಿಸಿದೆ. ಸಂವಿಧಾನವನ್ನು ನಮ್ಮ ದೇಶವು ನವೆಂಬರ್ 26, 1949ರಂದು ಅಂಗೀಕರಿಸಿದರೂ ಅನುಷ್ಠಾನಕ್ಕೆ ಬಂದಿದ್ದು ಜನವರಿ 26, 1950ಕ್ಕೆ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ದೇಶವು ಗೌರವಿಸುತ್ತದೆ. ಸಂವಿಧಾನ ರೂಪಿಸಲು ಅವರು ಹಗಲಿರುಳು ಶ್ರಮಿಸಿದರು. ಸಂವಿಧಾನವನ್ನು 105 ಬಾರಿ ತಿದ್ದುಪಡಿ ಮಾಡಲಾಗಿದೆ.

ಪ್ರತಿವರ್ಷ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಭವ್ಯ ಪರೇಡ್ ನಡೆಯುತ್ತದೆ. ಭಾರತದ ಮಿಲಿಟರಿ ಸಾಮರ್ಥ್ಯವನ್ನು ವಿಶ್ವಕ್ಕೆ ಪ್ರದರ್ಶಿಸಲಾಗುತ್ತದೆ. ಧೈರ್ಯ-ಸಾಹಸಗಳಿಂದ ಮಹತ್ವದ ಸಾಧನೆ ಮಾಡಿದ ಮಕ್ಕಳನ್ನು ಅಭಿನಂದಿಸಲಾಗುತ್ತದೆ. ಗಣರಾಜ್ಯೋತ್ಸವದ ಮುನ್ನಾ ದಿನ ದೇಶವನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡುತ್ತಾರೆ. ರಾಷ್ಟ್ರಪತಿಗಳು ನಮ್ಮ ದೇಶದ ಮೂರೂ ಸಶಸ್ತ್ರಪಡೆಗಳ ಮಹಾದಂಡನಾಯಕರೂ ಆಗಿದ್ದಾರೆ. ಶಾಂತಿ, ಸೌಹಾರ್ದ ಮತ್ತು ಸಹಬಾಳ್ವೆಯ ಆಶಯಕ್ಕೆ ಒತ್ತು ನೀಡುವ ನಮ್ಮ ದೇಶದ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡಬೇಕು. ಸಂವಿಧಾನವನ್ನು ಅಭ್ಯಾಸ ಮಾಡಿ, ಅದರ ಅಶಯಗಳನ್ನು ಅನುಸರಿಸಬೇಕು ಎಂದು ಹೇಳುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ. ಅವಕಾಶ ನೀಡಿದ್ದಕ್ಕಾಗಿ ಎಲ್ಲರಿಗೂ ವಂದನೆಗಳು.

ಭಾಷಣ ರೂಪಿಸುವಾಗ ಗಮನಿಸಿ

ವಿಷಯ ಆಯ್ಕೆ: ಭಾಷಣ ಮಾಡಲು ಮಕ್ಕಳಿಗೆ ಸೂಕ್ತ ತಯಾರಿ ಮಾಡಿಕೊಡಬೇಕಾಗುತ್ತದೆ. ಮಾತನಾಡಬೇಕಿರುವ ವಿಷಯ ಆರಿಸಿ ಕೊಡಿ. ಅವರಿಗೇ ಆರಿಸಿಕೊಳ್ಳಲು ಅವಕಾಶ ಕೊಡಿ.

ವಿಷಯ ಸಂಗ್ರಹ, ಅಧ್ಯಯನ: ಭಾಷಣದ ವಿಷಯ ಅಂತಿಮವಾದ ಬಳಿಕ ಅದರ ಬಗ್ಗೆ ವಿಷಯ ಸಂಗ್ರಹ ಮಾಡಬೇಕು. ಇಸವಿಗಳು, ಹೆಸರುಗಳ ಉಲ್ಲೇಖ ಇದ್ದರೆ ಅದರಲ್ಲಿ ತಪ್ಪು ಇರದಂತೆ ನೋಡಿಕೊಳ್ಳಬೇಕು.

ಭಾಷಣದ ಸ್ವರೂಪ: ಸಂಗ್ರಹಿಸಿದ ವಿಷಯವನ್ನು ಭಾಷಣದಲ್ಲಿ ಮೂರು ಹಂತವಾಗಿ ವಿಂಗಡಣೆ ಮಾಡಬಹುದು. ಮೊದಲನೆಯದಾಗಿ ಎಲ್ಲರಿಗೂ ವಂದಿಸಿ ವಿಷಯವನ್ನು ಆರಂಭಿಸುವುದು. ಎರಡನೆಯದಾಗಿ ಮಾತನಾಡುವ ವಿಷಯವನ್ನು ವಿಸ್ತರಿಸುವುದು. ಕೊನೆಯದಾಗಿ ಮಾತು ಮುಗಿಸಿ, ಉಪಸಂಹಾರ ಮಾಡಿ ಧನ್ಯವಾದ ಹೇಳುವುದು.

ಅಭ್ಯಾಸ, ಕಂಠಪಾಠ: ಇದೇ ರೂಪದಲ್ಲಿ ಭಾಷಣವನ್ನು ತಪ್ಪಿಲ್ಲದೆ ಬರೆದುಕೊಳ್ಳಬೇಕು. ಬರೆದುಕೊಂಡ ಭಾಷಣವನ್ನು ಮನೆಯಲ್ಲಿಯೇ ಸಾಕಷ್ಟು ಬಾರಿ ತಾಲೀಮು ಮಾಡಬೇಕು. ಕೆಲವು ಬಾರಿ ಜೋರಾಗಿ ಓದಿಸಿ ಕಂಠಪಾಠ ಮಾಡಿಸಬಹುದು. ಅದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.

ಆತ್ಮವಿಶ್ವಾಸಕ್ಕೆ ಪ್ರೋತ್ಸಾಹ ಬೇಕು: ಈ ವೇಳೆ ಮಕ್ಕಳು ಯಾವುದೇ ತಪ್ಪು ಉಚ್ಚಾರ ಮಾಡದಂತೆ, ಅಂಜದೆ, ಅಳುಕದೆ ಜೋರಾಗಿ ಮಾತನಾಡುವಂತೆ ಪ್ರೋತ್ಸಾಹಿಸಬೇಕು. ಮನೆಯಲ್ಲೇ ಎಲ್ಲರ ಮುಂದೆ ಜೋರಾಗಿ ಭಾಷಣ ಮಾಡುವಂತೆ ಹೇಳಿ ಕಲಿಸಬಹುದು. ಅಕ್ಷರಗಳನ್ನು, ವಾಕ್ಯಗಳನ್ನು ನುಂಗದಂತೆ, ಸ್ಪಷ್ಟವಾಗಿ ಮಾತನಾಡಲು ಹೇಳಬೇಕು. ವೇದಿಕೆಯಲ್ಲಿ ಹೇಗೆ ನಿಲ್ಲಬೇಕು, ನೆಲ ನೋಡಬಾರದು, ಮೇಲಕ್ಕೆ ಆಕಾಶವನ್ನೂ ನೋಡುತ್ತಾ ಮಾತನಾಡುವುದು ಅಲ್ಲ. ಮುಂದಿನ ಕೇಳುಗರನ್ನು ನೋಡಿ ಮಾತನಾಡಬೇಕು ಎಂದು ತಿಳಿಸಬೇಕು. ಹೀಗೆ ಮಾಡುವುದರಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹಿಂಜರಿಯದೇ ಪ್ರಯತ್ನಿಸಿದರೆ ಉತ್ತಮ ವಾಕ್ಚಾತುರ್ಯವನ್ನು ಖಂಡಿತ ರೂಢಿಸಿಕೊಳ್ಳಬಹುದು.

ಇದನ್ನೂ ಓದಿ: Republic Day 2023: ಗಣರಾಜ್ಯೋತ್ಸವ ಪರೇಡ್​ನಲ್ಲಿ ಕರ್ತವ್ಯಪಥದಲ್ಲಿ ನೌಕಾದಳವನ್ನು ಮುನ್ನಡೆಸಲಿದ್ದಾರೆ ಕನ್ನಡತಿ ದಿಶಾ ಅಮೃತ್

ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:17 pm, Tue, 24 January 23