ಜನವರಿ 26ರಂದು ಕೆಂಪುಕೋಟೆ ಬಳಿ ನಡೆದ ಗಲಭೆಯ ಹಿಂದೆ ಇತ್ತು ಒಂದು ಪಿತೂರಿ; ಗುಟ್ಟು ಬಹಿರಂಗ ಗೊಳಿಸಿದ ದೆಹಲಿ ಪೊಲೀಸರು
ಜ.26ರಂದು ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಅನುಮತಿ ಪಡೆದಿದ್ದ ರೈತ ಸಂಘಟನೆ ಬಳಿಕ ತನ್ನ ಪ್ರತಿಭಟನೆಯನ್ನು ಹಿಂಸಾಚಾರ ರೂಪಕ್ಕೆ ತಿರುಗಿಸಿತ್ತು. ಪೊಲೀಸರ ಬ್ಯಾರಿಕೇಡ್ಗಳನ್ನೆಲ್ಲ ಮುರಿದು, ಕೆಂಪುಕೋಟೆ ಮೇಲೆ ಸಿಖ್ರ ಧ್ವಜ ಹಾರಿಸಲಾಗಿತ್ತು.
2021ರ ಜನವರಿ 26ರಂದು ದೆಹಲಿಯ ಕೆಂಪುಕೋಟೆ ಬಳಿ, ರೈತರ ಪ್ರತಿಭಟನೆ ನೆಪದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರು ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಗುಟ್ಟೊಂದು ಬಹಿರಂಗವಾಗಿದೆ. ಕೇಂದ್ರ ಸರ್ಕಾರದ ಹೊಸ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಅಂದು ಕೆಂಪುಕೋಟೆ ಬಳಿ ದಾಂಧಲೆ ನಡೆಸಿದ್ದರು. ಭಾರತದ ತ್ರಿವರ್ಣ ಧ್ವಜ ಪಕ್ಕದಲ್ಲಿ ಇನ್ನೊಂದು ಧ್ವಜವನ್ನೂ ಹಾರಿಸಿದ್ದರು. ಈ ಪ್ರಕರಣ ಸಂಬಂಧ ಪೊಲೀಸರು ಹಲವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರತಿಭಟನೆ ಸ್ಥಳವನ್ನು ಕೆಂಪುಕೋಟೆಗೆ ಸ್ಥಳಾಂತರ ಮಾಡಲು ರೈತರು ಪಿತೂರಿ ನಡೆಸಿದ್ದರು. ಅಷ್ಟುದಿನ ಗಡಿಭಾಗದಲ್ಲಿ ಇದ್ದವರು, ಕೆಂಪುಕೋಟೆಯನ್ನು ತಮ್ಮ ಪ್ರತಿಭಟನೆಯ ಸ್ಥಳವನ್ನಾಗಿ ಮಾಡಿಕೊಳ್ಳಲು ಅಂದು ಪ್ರಯತ್ನಿಸಿದ್ದರು ಎಂದು ದೆಹಲಿ ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಜ.26ರಂದು ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಅನುಮತಿ ಪಡೆದಿದ್ದ ರೈತ ಸಂಘಟನೆ ಬಳಿಕ ತನ್ನ ಪ್ರತಿಭಟನೆಯನ್ನು ಹಿಂಸಾಚಾರ ರೂಪಕ್ಕೆ ತಿರುಗಿಸಿತ್ತು. ಪೊಲೀಸರ ಬ್ಯಾರಿಕೇಡ್ಗಳನ್ನೆಲ್ಲ ಮುರಿದು, ಕೆಂಪುಕೋಟೆ ಮೇಲೆ ಸಿಖ್ರ ಧ್ವಜ ಹಾರಿಸಲಾಗಿತ್ತು. ಅಂದು ಪೊಲೀಸರು ಲಾಠಿ ಚಾರ್ಜ್, ಅಶ್ರುವಾಯು ದಾಳಿ ನಡೆಸಿದ್ದರು. ಟ್ರ್ಯಾಕ್ಟರ್ ರ್ಯಾಲಿಗೆ ಅನುಮತಿ ನೀಡಿದ್ದ ಮಾರ್ಗದಲ್ಲಿ ಹೋಗದೆ, ಬೇರೆ ಮಾರ್ಗಗಳಲ್ಲೂ ಹೋಗಿ ನಿಯಮ ಉಲ್ಲಂಘನೆ ಮಾಡಿದ್ದರು.
ರೈತರು ನಡೆಸಿದ ಈ ಹಿಂಸಾಚಾರದ ಹಿಂದೆ ಪೂರ್ವ ನಿಯೋಜಿತ ಪಿತೂರಿಯಿದೆ ಎಂದು ಇದೀಗ ದೆಹಲಿ ಪೊಲೀಸರು ಹೇಳಿದ್ದಾರೆ. ಕೆಂಪುಕೋಟೆಯ ಬಳಿ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಉದ್ದೇಶದಿಂದ ಅಲ್ಲಿ ಹೋಗಿ ಅಷ್ಟು ದಾಂಧಲೆ ನಡೆಸಿದ್ದಾರೆ. ಧ್ವಜವನ್ನೂ ಹಾರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಅಲ್ಲದೆ ಈ ಪ್ರತಿಭಟನೆಯನ್ನು ಫಲಪ್ರದಗೊಳಿಸುವ ಸಲುವಾಗಿ ಹಲವು ಹಿರಿಯ ರೈತರನ್ನೂ ಸಜ್ಜುಗೊಳಿಸಲಾಗಿತ್ತು. ಕೇಂದ್ರ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಲು ಜನವರಿ 26-ಗಣರಾಜ್ಯ ದಿನದಂದೇ ಪ್ರತಿಭಟನೆ ನಡೆಸಲಾಗಿದೆ ಎಂದು ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ. ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜದ ಬಳಿ ಮತ್ತೊಂದು ಧ್ವಜ ಹಾರಿಸಿದವರಿಗೆ ಅಪಾರ ಪ್ರಮಾಣದ ಹಣ ನೀಡುವ ಭರವಸೆಯನ್ನೂ ನೀಡಲಾಗಿತ್ತು. ಆರೋಪಿಗಳಲ್ಲಿ ಒಬ್ಬನ ಪುತ್ರಿಯ ಹೇಳಿಕೆ ಪ್ರಕಾರ ಆಕೆಯ ತಂದೆಗೆ 50 ಲಕ್ಷ ರೂ. ಕೊಡುವ ಭರವಸೆ ನೀಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಸಚಿವಗಿರಿ ನನ್ನ ಮಗ ಚಲಾಯಿಸಿದರೆ ಒಪ್ಪಲ್ಲ.. ಪರೋಕ್ಷವಾಗಿ ಬಿ.ವೈ. ವಿಜಯೇಂದ್ರಗೆ ಟಾಂಗ್ ಕೊಟ್ಟ ಸಚಿವ ಸಿ.ಪಿ. ಯೋಗೇಶ್ವರ್