ಬೆಂಗಳೂರು:ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ ಎನ್ನಲಾದ ಸಚಿವ ಸಿ.ಪಿ.ಯೋಗೇಶ್ವರ್ ಅವರು ಇದೇ ವಿಷಯವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ನಾನು ಸಚಿವನಿದ್ದೇನೆ ಕೆಲ ವಿಚಾರ ಹಂಚಿಕೊಳ್ಳಲು ಆಗಲ್ಲ. ನನ್ನ ಸಚಿವಗಿರಿಯನ್ನು ನನ್ನ ಮಗ ಚಲಾಯಿಸಿದರೆ ಒಪ್ಪಲ್ಲ. ನನ್ನ ಅಧಿಕಾರದಲ್ಲಿ ಬೇರೆಯವರಿಂದ ಹಸ್ತಕ್ಷೇಪವಾಗುತ್ತಿದೆ. ಅದನ್ನು ಸಹಿಸಿಕೊಂಡು ಹೋಗಲು ನನ್ನಿಂದ ಆಗುವುದಿಲ್ಲ ಎಂದು ಪರೋಕ್ಷವಾಗಿ ಬಿ.ವೈ.ವಿಜಯೇಂದ್ರ ವಿರುದ್ಧ ವಿಧಾನಸೌಧದಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಅಪಸ್ವರ ನುಡಿದಿದ್ದಾರೆ.
ವರಿಷ್ಠರ ಮುಂದೆ ನನ್ನ ನೋವು ತೋಡಿಕೊಳ್ಳುತ್ತೇನೆ.. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಿ.ಪಿ.ಯೋಗೇಶ್ವರ್, ಮುಖ್ಯಮಂತ್ರಿಯ ಬದಲಾವಣೆ ನನ್ನ ಮೂಲ ಉದ್ದೇಶವಲ್ಲ. ಮುಖ್ಯಮಂತ್ರಿಯನ್ನು ಬದಲಿಸುವಷ್ಟು ಶಕ್ತಿ ನನಗೆ ಇಲ್ಲ. ನಾನು ದೆಹಲಿಗೆ ಹೋಗ್ತಾ ಇರುತ್ತೇನೆ ಬರ್ತಾ ಇರುತ್ತೇನೆ. ನಾನು ವೈಯಕ್ತಿಕ ವಿಚಾರಕ್ಕಾಗಿ ದೆಹಲಿಗೆ ಹೋಗಿದ್ದೇನೆ. ನನ್ನ ವಿಚಾರ ಎಲ್ಲಿ ಹೇಳಬೇಕೋ ಅಲ್ಲಿ ಹೇಳುತ್ತೇನೆ. ವರಿಷ್ಠರ ಮುಂದೆ ನನ್ನ ನೋವು ತೋಡಿಕೊಳ್ಳುತ್ತೇನೆ. ನನಗೂ ಒಂದಿಷ್ಟು ನೋವು, ಆತಂಕಗಳಿವೆ. ಅಪ್ಪನ ಅಧಿಕಾರವನ್ನು ಮಗ ಚಲಾಯಿಸೋದನ್ನು ನಾನು ಒಪ್ಪಲ್ಲ. ವರಿಷ್ಠರು ಸಿಗೋವರೆಗೂ ನಾನು ದೆಹಲಿ ಹೋಗುತ್ತಾ ಇರ್ತಿನಿ. ಆದರೆ ಅರವಿಂದ ಬೆಲ್ಲದ್ ಏಕೆ ದೆಹಲಿಗೆ ಹೋಗಿದ್ದರೆಂದು ಗೊತ್ತಿಲ್ಲ ಎಂದು ದೆಹಲಿಗೆ ಹೋಗಿದ್ದ ಬಗ್ಗೆ ಯೋಗೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ಮಾತನಾಡುತ್ತಾ, ಪಕ್ಷ ನನ್ನನ್ನು ವಿಧಾನ ಪರಿಷತ್ ಸದಸ್ಯನಾಗಿ ಮಾಡಿ ಸಚಿವನನ್ನಾಗಿ ಮಾಡಿದೆ. 2023ರ ಚುನಾವಣೆಗೆ ನಾನು ಮತ್ತೆ ಚನ್ನಪಟ್ಟಣ ವಿಧಾನ ಪರಿಷತ್ ಕ್ಷೇತ್ರದಿಂದ ಗೆದ್ದು ಬರಬೇಕು. ಇದಕ್ಕೆ ತಕ್ಕ ವಾತಾವರಣವನ್ನು ಪಕ್ಷ ಹಾಗೂ ಸರ್ಕಾರದಲ್ಲಿ ಮೂಡಿಸಬೇಕು. ಪಕ್ಷದ ಚೌಕಟ್ಟಿನಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಿದ್ದೇನೆ. ಮುಖ್ಯಮಂತ್ರಿಗಳ ಗಮನಕ್ಕೂ ಸಹ ತಂದಿದ್ದೇನೆ ಎಂದು ಹೇಳಿದ್ದಾರೆ.
ನನಗೆ ಉತ್ತಮ ಖಾತೆ ನೀಡಿಲ್ಲವೆಂದಾಗಲಿ ಅಥವಾ ರಾಮನಗರ ಜಿಲ್ಲೆ ಉಸ್ತುವಾರಿ ನೀಡಿಲ್ಲವೆಂದು ಬೇಸರವಿಲ್ಲ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಬಿ.ಜೆ.ಪಿ. ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ. ನನಗೆ ನನ್ನದೇ ಆದ ಕೆಲವು ಚಿಂತನೆಗಳಿವೆ. ಹಳೇ ಮೈಸೂರು ಭಾಗದಲ್ಲಿ ಬಿ.ಜೆ.ಪಿ. ಬಲಿಷ್ಠವಾಗಬೇಕು ಈ ನಿಟ್ಟಿನಲ್ಲಿ ಕೆಲವು ವಿಷಯಗಳನ್ನು ಪಕ್ಷದ ವರಿಷ್ಠರ ಜೊತೆ ಮಾತನಾಡಿದ್ದೇನೆ. ನಮ್ಮ ಎದುರಾಳಿ ಪಕ್ಷಗಳ ಜೊತೆ ನಮ್ಮ ಪಕ್ಷದವರು ಹಾಗೂ ಸರ್ಕಾರ ಹೊಂದಾಣಿಕೆ ಮಾಡಿಕೊಂಡಿದ್ದು, ವೈಯಕ್ತಿಕವಾಗಿ ನನಗೆ ತುಂಬಾ ನೋವಾಗಿದೆ. ಮುಂಬರುವ ಚುನಾವಣೆಯಲ್ಲಿ ನಾನು ಗೆಲ್ಲಬೇಕು. ಹೀಗಾಗಿ, ನನ್ನ ದುಃಖವನ್ನು ತೋಡಿಕೊಂಡಿರುವುದಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಕೋವಿಡ್ ನಿಂದ ಜನರು ಪರಿತಪಿಸುತ್ತಿದ್ದಾರೆ. ಕೊರೊನಾ ನಿವಾರಣೆ ರಾಜ್ಯ ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು . ನಾಯಕತ್ವ ಬದಲಾವಣೆ ಮಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅಷ್ಟೂ ಶಕ್ತಿಯೂ ನನಗಿಲ್ಲ ಎಂದು ಹೇಳಿದ್ದಾರೆ.
ಒಂದು ವೇಳೆ ಹೈಕಮಂಡ್ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಬದಲಾಯಿಸಿದರೆ ಅದಕ್ಕೆ ನಿಮ್ಮ ಬೆಂಬಲ ಇರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ಸಂದರ್ಭ ಬಂದಾಗ ನೋಡೋಣ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಬಿ.ಜೆ.ಪಿ. ಶಾಸಕರಾದ ರೇಣುಕಾಚಾರ್ಯ ಸೇರಿದಂತೆ ಕೆಲವು ಶಾಸಕರು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರೆಲ್ಲರಿಗೂ ಉತ್ತರ ಕೊಡುತ್ತೇನೆ. ಎಲ್ಲ ವಿಷಯಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳಲು ಸಾಧ್ಯವಿಲ್ಲ. ಕೆಲವು ವಿಷಯಗಳನ್ನು ಪಕ್ಷದ ಚೌಕಟ್ಟಿನೊಳಗೆ ನಾಲ್ಕು ಗೋಡೆಗಳ ಮದ್ಯೆ ಹಂಚಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪಕ್ಷದ ಪ್ರಮುಖರ ಮುಂದೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ.
2023ರಲ್ಲಿ ನಾನು ಗೆಲ್ಲಬೇಕು. ನಮ್ಮ ಸರಕಾರ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಕೆಲವೊಂದು ಕೆಲಸ ಆಗಬೇಕು. ಸಿಎಂ ಬಿಎಸ್‌ವೈ ಮುಂದೆ ಹಲವು ವಿಚಾರ ಹೇಳಿಕೊಂಡಿದ್ದೇನೆ. ನಮ್ಮ ಪಕ್ಷ ಹೋಗುತ್ತಿರುವ ರೀತಿಯ ಬಗ್ಗೆ ನನಗೆ ನೋವಿದೆ. ಮೊದಲಿನಿಂದಲೂ ಈ ವಿಚಾರ ಹೇಳಿಕೊಂಡು ಬಂದಿದ್ದೇನೆ. ವಿಪಕ್ಷಗಳನ್ನ ಜತೆಯಲ್ಲಿಟ್ಟುಕೊಂಡು ಆಡಳಿತ ಮಾಡಲು ಸಾಧ್ಯವಿಲ್ಲ. ಹೀಗಾದರೆ ಚುನಾವಣೆ ಎದುರಿಸುವುದು ಕಷ್ಟವಾಗಬಹುದು ಎಂದು ಆತಂಕ ಹೊರ ಹಾಕಿದ್ದಾರೆ.
ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಕೊಡಬೇಕಾಗುತ್ತೆ ನಾನು ಸಚಿವನಿದ್ದೇನೆ ಕೆಲ ವಿಚಾರ ಹಂಚಿಕೊಳ್ಳಲು ಆಗಲ್ಲ. ನನ್ನ ಸಚಿವಗಿರಿಯನ್ನು ನನ್ನ ಮಗ ಚಲಾಯಿಸಿದರೆ ಒಪ್ಪಲ್ಲ. ನನ್ನ ಅಧಿಕಾರದಲ್ಲಿ ಬೇರೆಯವರಿಂದ ಹಸ್ತಕ್ಷೇಪವಾಗುತ್ತಿದೆ. ಅದನ್ನು ಸಹಿಸಿಕೊಂಡು ಹೋಗಲು ನನ್ನಿಂದ ಆಗುವುದಿಲ್ಲ. ನಾನು ಸೂಕ್ಷ್ಮವಾಗಿ ಹೇಳಿದ್ದೇನೆ, ಅರ್ಥ ಮಾಡಿಕೊಳ್ಳಿ. ಪಕ್ಷದ ಕೆಲ ಸ್ನೇಹಿತರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಂದ ಯಾರು ಮಾತನಾಡಿಸುತ್ತಿದ್ದಾರೆಂದೂ ಗೊತ್ತಿದೆ. ಇದರ ಹಿಂದೆ ಯಾರ ಕುಮ್ಮಕ್ಕಿದೆ ಎಂದು ನನಗೆ ಗೊತ್ತು. ಹೀಗೆ ಮಾತನಾಡುತ್ತಾ ಹೋದರೆ ಮುಂದೆ ಉತ್ತರಿಸ್ತೇನೆ. ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಕೊಡಬೇಕಾಗುತ್ತೆ ಎಂದು ತಿಳಿಸಿದರು.
ಬಿಜೆಪಿ ಮೂರು ಗುಂಪಿನ ಸರ್ಕಾರವಾಗಿದೆ ರಾಜ್ಯದಲ್ಲಿ ಶುದ್ಧ ಬಿಜೆಪಿ ಸರ್ಕಾರವಾಗಿ ಉಳಿದಿಲ್ಲ. ರಾಜ್ಯದಲ್ಲಿ ಮೂರು ಗುಂಪಿನ ಸರ್ಕಾರವಾಗಿದೆ. 3 ರಾಜಕೀಯ ಪಕ್ಷಗಳು ಕಾಂಗ್ರೆಸ್, ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ವಿಧಾನಸೌಧದಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ಇದನ್ನೂ ಓದಿ: ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ ಪತ್ನಿಯ ತಲೆಗೆ ಗುಂಡಿಕ್ಕಿದ ಪತಿ; ಬಳಿಕ ಮೂವರು ಪುಟಾಣಿ ಮಕ್ಕಳನ್ನು ನಾಲೆಗೆ ಎಸೆದು ಕೊಲೆ