ಓಡುವ ಹುಡುಗನ ನಿಷ್ಠೆಗೆ ಸಿಕ್ತು ಪ್ರತಿಫಲ; ಪ್ರದೀಪ್​ ಸೇನೆ ಸೇರುವ ಕನಸನ್ನು ನನಸು ಮಾಡಲು ಮುಂದಾದ ನಿವೃತ್ತ ಲೆಫ್ಟಿನೆಂಟ್ ಜನರಲ್​

| Updated By: Lakshmi Hegde

Updated on: Mar 21, 2022 | 4:42 PM

ಒಂದು ಅದ್ಭುತ ಕಾರಣಕ್ಕೆ ಇಂಟರ್​ನೆಟ್ ಸೆನ್ಸೇಶನ್​ ಆಗಿರುವ ಯುವಕನಿಗೆ ಸೇನೆ ಸೇರಲು ಸಹಾಯ ಮಾಡುವುದಾಗಿ ನಿವೃತ್ತ ಲೆಫ್ಟಿನೆಂಟ್ ಜನರಲ್​ ಸತೀಶ್ ದುವಾ ಮುಂದೆಬಂದಿದ್ದಾರೆ.

ಓಡುವ ಹುಡುಗನ ನಿಷ್ಠೆಗೆ ಸಿಕ್ತು ಪ್ರತಿಫಲ; ಪ್ರದೀಪ್​ ಸೇನೆ ಸೇರುವ ಕನಸನ್ನು ನನಸು ಮಾಡಲು ಮುಂದಾದ ನಿವೃತ್ತ ಲೆಫ್ಟಿನೆಂಟ್ ಜನರಲ್​
ಪ್ರದೀಪ್ ಮೆಹ್ರಾ ಮತ್ತು ಲೆಫ್ಟಿನೆಂಟ್ ಜನರಲ್​ ಸತೀಶ್ ದುವಾ
Follow us on

19 ವರ್ಷದ ಯುವಕನೊಬ್ಬ ರಾತ್ರಿ ಮನೆಗೆ ಓಡುತ್ತಲೇ ಹೋಗುವ ವಿಡಿಯೋ ನಿನ್ನೆ ರಾತ್ರಿಯಿಂದ ಸಿಕ್ಕಾಪಟೆ ವೈರಲ್ ಆಗುತ್ತಲೇ ಇದೆ. ಭಾರತೀಯ ಸೇನೆಯನ್ನು ಸೇರಬೇಕು ಎಂಬ ಮಹದಾಸೆಯನ್ನು ಹೊತ್ತ ಯುವಕ ಅದಕ್ಕೆ ಪೂರ್ವಭಾವಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿರುವುದು, ಸಿನಿಮಾ ನಿರ್ಮಾಪಕ, ಲೇಖಕ ವಿನೋದ್​ ಕಪ್ರಿ ಶೇರ್ ಮಾಡಿರುವ ವಿಡಿಯೋದಿಂದ ಸ್ಪಷ್ಟವಾಗಿದೆ. ಹೀಗೆ ದೇಶಸೇವೆ ಮಾಡಲೆಂದು ತನ್ನದೇ ಆದ ರೀತಿಯಲ್ಲಿ ಸಿದ್ಧತೆಯಲ್ಲಿ ತೊಡಗಿರುವ ಈ ಯುವಕನ ನಿಷ್ಠೆಗೆ ದೇಶಾದ್ಯಂತ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಉತ್ತರಾಖಂಡ್​ ಮೂಲದ ಯುವಕ ನೊಯ್ಡಾ ಬಳಿ ತನ್ನ ಅಣ್ಣನೊಂದಿಗೆ ವಾಸವಾಗಿದ್ದು, ಮೆಕ್​ಡೊನಾಲ್ಡ್​ನಲ್ಲಿ ಉದ್ಯೋಗಿ. ಬೆಳಗ್ಗೆ ಎದ್ದು ತಿಂಡಿ ಮಾಡಿ ಕೆಲಸಕ್ಕೆ ಬರುವ ಕಾರಣ ಆಗ ಹೀಗೆ ಓಡಲು, ವ್ಯಾಯಾಮ ಮಾಡಲು ಸಾಧ್ಯವಿಲ್ಲ ಎಂದು ಪ್ರತಿದಿನ ಸಂಜೆ ಕೆಲಸ ಮುಗಿಯುತ್ತಿದ್ದಂತೆ 10 ಕಿಮೀ ದೂರದಲ್ಲಿರುವ ಮನೆಗೆ ಓಡಿಕೊಂಡೇ ಹೋಗುತ್ತಿದ್ದಾನೆ. ಇದೊಂದು ಸ್ಫೂರ್ತಿದಾಯಕ ವಿಡಿಯೋ ಎಂದು ಅನೇಕರು ಹೇಳುತ್ತಿದ್ದಾರೆ.

ಅಂದಹಾಗೇ ಈ ಯುವಕನ ಹೆಸರು ಪ್ರದೀಪ್​ ಮೆಹ್ರಾ. ನಿನ್ನೆಯವರೆಗೂ ಈತ ಯಾರೆಂದೇ ಗೊತ್ತಿರಲಿಲ್ಲ. ಆದರೆ ಇಂದು ಇಡೀ ದೇಶಕ್ಕೇ ಪರಿಚಿತ. ಹೀಗೆ ಒಂದು ಅದ್ಭುತ ಕಾರಣಕ್ಕೆ ಇಂಟರ್​ನೆಟ್ ಸೆನ್ಸೇಶನ್​ ಆಗಿರುವ ಯುವಕನಿಗೆ ಸೇನೆ ಸೇರಲು ಸಹಾಯ ಮಾಡುವುದಾಗಿ ನಿವೃತ್ತ ಲೆಫ್ಟಿನೆಂಟ್ ಜನರಲ್​ ಸತೀಶ್ ದುವಾ ಮುಂದೆಬಂದಿದ್ದಾರೆ. ವಿನೋದ್ ಕಪ್ರಿ ವಿಡಿಯೋವನ್ನು ರೀಟ್ವೀಟ್ ಮಾಡಿಕೊಂಡಿರುವ ಅವರು, ಈ ಯುವಕ ಪ್ರದೀಪ್​ ಉತ್ಸಾಹ, ಜೋಶ್​ ಮೆಚ್ಚಿಕೊಳ್ಳುವಂಥದ್ದಾಗಿದೆ. ಆತನ ಅರ್ಹತೆಯ ಆಧಾರದ ಮೇಲೆ ಸೇನಾ ನೇಮಕಾತಿ ಪರೀಕ್ಷೆಯನ್ನು ಉತ್ತೀರ್ಣನಾಗಲು ನಾನು ಸಹಾಯ ಮಾಡುತ್ತೇನೆ. ಪ್ರದೀಪ್​ ಬಗ್ಗೆ ನಾನು, ಪೂರ್ವ ಸೇನಾ ಕಮಾಂಡರ್​, ಕುಮಾನ್ ರೆಜಿಮೆಂಟ್‌ನ ಕರ್ನಲ್ ಲೆಫ್ಟಿನೆಂಟ್ ಜನರಲ್​ ರಾಣಾ ಕಲಿಟಾ ಅವರೊಂದಿಗೆ ಮಾತನಾಡಿದ್ದೇನೆ. ಈ ಹುಡುಗನನ್ನು ತನ್ನ ರೆಜಿಮೆಂಟ್​​ನಲ್ಲಿ ನೇಮಕ ಮಾಡಿಕೊಳ್ಳುವ ಸಂಬಂಧ ಪ್ರಕ್ರಿಯೆಗಳನ್ನು ಅವರು ಶುರು ಮಾಡಿದ್ದಾರೆ, ಜೈ ಹಿಂದ್​ ಎಂದು ಕ್ಯಾಪ್ಷನ್​ ಬರೆದುಕೊಂಡಿದ್ದಾರೆ. ಇನ್ನು ವಿಡಿಯೋ ನೋಡಿದ ಅನೇಕರಂತೂ ಹುಡುಗನನ್ನು ಸಿಕ್ಕಾಪಟೆ ಹೊಗಳುತ್ತಿದ್ದಾರೆ. ನಿಜವಾದ ದೇಶಭಕ್ತಿಯೆಂದರೆ ಇದು ಎನ್ನುತ್ತಿದ್ದಾರೆ.

ಇದನ್ನೂ ಓದಿ: Video: ರಾತ್ರಿ ಕೆಲಸ ಮುಗಿಯುತ್ತಿದ್ದಂತೆ 10 ಕಿಮೀ ಓಡಿಕೊಂಡೇ ಹೋಗಿ ಮನೆ ಸೇರುವ ಯುವಕ; ಕಾರಣ ಕೇಳಿ ಸೆಲ್ಯೂಟ್​​ ಹೊಡೆದ ನೆಟ್ಟಿಗರು