ಆರೋಗ್ಯ ವ್ಯವಸ್ಥೆಯ ತ್ವರಿತ ಉನ್ನತೀಕರಣಕ್ಕೆ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನಿರ್ದೇಶನ

|

Updated on: Apr 27, 2021 | 10:36 PM

PM Modi Chairs High Level Meeting: ಪಿಎಸ್‌ಎ ಆಕ್ಸಿಜನ್ ಘಟಕಗಳನ್ನು ಶೀಘ್ರವಾಗಿ ಪ್ರಾರಂಭಿಸಲು ರಾಜ್ಯ ಸರ್ಕಾರಗಳೊಂದಿಗೆ ನಿಕಟವಾಗಿ ಕೆಲಸ ಮಾಡುವಂತೆ ಪ್ರಧಾನಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಿಎಸ್ಎ ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲು ರಾಜ್ಯಗಳನ್ನು ಪ್ರೋತ್ಸಾಹಿಸುತ್ತಿರುವುದಾಗಿ ಅಧಿಕಾರಿಗಳು ಮೋದಿಯವರಿಗೆ ಹೇಳಿದ್ದಾರೆ.

ಆರೋಗ್ಯ ವ್ಯವಸ್ಥೆಯ ತ್ವರಿತ ಉನ್ನತೀಕರಣಕ್ಕೆ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನಿರ್ದೇಶನ
ನರೇಂದ್ರ ಮೋದಿ
Follow us on

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ದೇಶದ ಕೋವಿಡ್ -19 ಪರಿಸ್ಥಿತಿಯನ್ನು ಪರಿಶೀಲಿಸಿದರು. ದೇಶದಲ್ಲಿ ಆಮ್ಲಜನಕದ ಲಭ್ಯತೆ, ಔಷಧಿಗಳು, ಆರೋಗ್ಯ ಮೂಲಸೌಕರ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಪರಿಸ್ಥಿತಿಯ ಬಗ್ಗೆ ಮೋದಿ ಅವಲೋಕನ ನಡೆಸಿ ಮಾಹಿತಿ ಪಡೆದಿದ್ದಾರೆ.

ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿರುವ ಸಶಕ್ತ ಗುಂಪು (Empowered Group )ದೇಶದಲ್ಲಿ ಆಮ್ಲಜನಕದ ಲಭ್ಯತೆ ಮತ್ತು ಪೂರೈಕೆಯನ್ನು ಹೆಚ್ಚಿಸಲು ಕೈಗೊಂಡಿರುವ ಪ್ರಯತ್ನಗಳ ಬಗ್ಗೆ ಪ್ರಧಾನ ಮಂತ್ರಿಯವರಿಗೆ ವಿವರಿಸಿದ್ದು, ರಾಜ್ಯಗಳಿಗೆ ಆಮ್ಲಜನಕದ ಹಂಚಿಕೆಯನ್ನು ಹೆಚ್ಚಿಸಿರುವ ಬಗ್ಗೆ ಮಾಹಿತಿ ನೀಡಿತು. ದೇಶದಲ್ಲಿ ದ್ರವೀಕೃತ ವೈದ್ಯಕೀಯ ಆಮ್ಲಜನಕ (ಎಲ್‌ಎಂಒ) ಉತ್ಪಾದನೆಯು ಆಗಸ್ಟ್ 2020 ರಲ್ಲಿ ದಿನಕ್ಕೆ 5,700 ಮೆ.ಟನ್ ಇತ್ತು. ಈಗ ಅದು 8,922 ಮೆ.ಟನ್ (2021 ಏಪ್ರಿಲ್ 25 ರಂದು) ಗೆ ಏರಿದೆ. ದೇಶೀಯ ಎಲ್‌ಎಂಒ ಉತ್ಪಾದನೆಯು ಏಪ್ರಿಲ್ 2021 ರ ಅಂತ್ಯದ ವೇಳೆಗೆ ದಿನಕ್ಕೆ 9,250 ಮೆ.ಟನ್ ದಾಟಲಿದೆ.

ಪಿಎಸ್‌ಎ ಆಕ್ಸಿಜನ್ ಘಟಕಗಳನ್ನು ಶೀಘ್ರವಾಗಿ ಪ್ರಾರಂಭಿಸಲು ರಾಜ್ಯ ಸರ್ಕಾರಗಳೊಂದಿಗೆ ನಿಕಟವಾಗಿ ಕೆಲಸ ಮಾಡುವಂತೆ ಪ್ರಧಾನಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಿಎಸ್ಎ ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲು ರಾಜ್ಯಗಳನ್ನು ಪ್ರೋತ್ಸಾಹಿಸುತ್ತಿರುವುದಾಗಿ ಅಧಿಕಾರಿಗಳು ಮೋದಿಯವರಿಗೆ ಹೇಳಿದ್ದಾರೆ.


ಅದೇ ವೇಳೆ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲ್ವೆ ಸೇವೆಯ ಕಾರ್ಯವೈಖರಿ ಮತ್ತು ಆಮ್ಲಜನಕ ಟ್ಯಾಂಕರ್‌ಗಳನ್ನು ಸಾಗಿಸಲು ಭಾರತೀಯ ವಾಯುಪಡೆ (ಐಎಎಫ್) ಕೈಗೊಂಡ ದೇಶೀಯ ಮತ್ತು ಅಂತರರಾಷ್ಟ್ರೀಯ ಕ್ರಮಗಳ ಬಗ್ಗೆ ಪ್ರಧಾನ ಮಂತ್ರಿಯವರಿಗೆ ವಿವರಿಸಲಾಯಿತು.

ಸೋಮವಾರ, ಐಎಎಫ್‌ನ ಸಿ -17 ವಿಮಾನವು ದುಬೈನಿಂದ ಆರು ಖಾಲಿ ಕ್ರಯೋಜೆನಿಕ್ ಆಕ್ಸಿಜನ್ ಕಂಟೇನರ್ ಗಳನ್ನು ಏರ್ ಲಿಫ್ಟ್ ಮಾಡಿದೆ . ಸಿ -17 ಸಾರಿಗೆ ವಿಮಾನವನ್ನು ಮಂಗಳವಾರ ದೇಶೀಯ ಆಮ್ಲಜನಕ ಸಾಗಣೆಗೆ ಸಹ ಬಳಸಲಾಗಿದೆ. ಎರಡು ಖಾಲಿ ಟ್ಯಾಂಕರ್‌ಗಳನ್ನು ಮಧ್ಯಪ್ರದೇಶದ ಇಂದೋರ್‌ನಿಂದ ಗುಜರಾತ್‌ನ ಜಾಮ್ ನಗರ್ ಗೆ ಆಮ್ಲಜನಕ ತುಂಬಿಸಲು ಕಳಿಸಲಾಗಿದೆ.

ವೈದ್ಯಕೀಯ ಮೂಲಸೌಕರ್ಯ ಮತ್ತು ಕೊವಿಡ್ ನಿರ್ವಹಣೆಯಲ್ಲಿ ಕೆಲಸ ಮಾಡುವ ಸಶಕ್ತ ಗುಂಪು ಹಾಸಿಗೆಗಳು ಮತ್ತು ಐಸಿಯುಗಳ ಲಭ್ಯತೆಯನ್ನು ಹೆಚ್ಚಿಸಲು ಕೈಗೊಳ್ಳುತ್ತಿರುವ ಪ್ರಯತ್ನಗಳ ಕುರಿತು ಪ್ರಧಾನ ಮಂತ್ರಿಗೆ ವಿವರಿಸಿದೆ.

ಕೊವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಮಾರ್ಗಸೂಚಿಗಳು ಮತ್ತು ಕಾರ್ಯತಂತ್ರಗಳನ್ನು ರಾಜ್ಯಗಳ ಸಂಬಂಧಿತ ಏಜೆನ್ಸಿಗಳು ಸರಿಯಾಗಿ ಕಾರ್ಯಗತಗೊಳಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕಾದ ಅಗತ್ಯವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ.

ಸಂವಹನ ಕುರಿತ ಸಶಕ್ತ ಗುಂಪು, ಕೊವಿಡ್ ಸಂಬಂಧಿತ ನಡವಳಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕೈಗೊಳ್ಳುತ್ತಿರುವ ಪ್ರಯತ್ನಗಳ ಬಗ್ಗೆ ಪ್ರಧಾನಿಗೆ ವಿವರಿಸಿದೆ. ಪ್ರಸ್ತುತ ಸಭೆಯಲ್ಲಿ ಸಂಪುಟ ಕಾರ್ಯದರ್ಶಿ, ಗೃಹ, ಆರೋಗ್ಯ, ವಾರ್ತಾ ಮತ್ತು ಪ್ರಸಾರ, ಔಷಧ, ಜೈವಿಕ ತಂತ್ರಜ್ಞಾನ ಸಚಿವಾಲಯಗಳ ಕಾರ್ಯದರ್ಶಿಗಳು, ನೀತಿ ಆಯೋಗದ ಸದಸ್ಯ, ಐಸಿಎಂಆರ್ ಮಹಾನಿರ್ದೆಶಕರು ಮತ್ತಿತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ: Narmadaben Modi: ಪ್ರಧಾನಿ ನರೇಂದ್ರ ಮೋದಿ ಚಿಕ್ಕಮ್ಮ ಕೊರೊನಾ ಸೋಂಕಿನಿಂದ ಸಾವು

(Review the Covid 19 situation in India PM Narendra Modi chairs high level meeting)