ಬಿಹಾರ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ‘ಠಾಕೂರ್ ಕಾ ಕುಂವಾ’; ಪ್ರತ್ಯೇಕ ರಜಪೂತ ರಾಜ್ಯಕ್ಕೆ ಹೆಚ್ಚಿದ ಆಗ್ರಹ
Bihar Politics; ರಾಜ್ಯದ ಏಳು ಜಿಲ್ಲೆಗಳನ್ನು ವಿಭಜಿಸಿ ಪ್ರತ್ಯೇಕ ‘ರಜಪೂತಾನ’ ರಾಜ್ಯವನ್ನು ರಚಿಸಬೇಕೆಂಬ ಆಗ್ರಹ ಬಿಹಾರದಾದ್ಯಂತ ಜೋರಾಗಿದೆ. ಸಿದ್ಧಾರ್ಥ್ ಕ್ಷತ್ರಿಯ ಎಂಬವರ ಚಿತ್ರಗಳಿರುವ ಪೋಸ್ಟರ್ ವೈರಲ್ ಆಗಿದೆ. ಅದರಲ್ಲಿ, ‘ನಮಗೆ ಪ್ರತ್ಯೇಕ ರಜಪೂತ ರಾಜ್ಯ ಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ಪಟ್ನಾ, ಸೆಪ್ಟೆಂಬರ್ 29: ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಆರ್‌ಜೆಡಿ ಸಂಸದ ಮನೋಜ್ ಕುಮಾರ್ ಝಾ (RJD MP Manoj Kumar Jha) ಅವರು ಓಂ ಪ್ರಕಾಶ್ ವಾಲ್ಮೀಕಿ ಅವರ ಕವಿತೆ ‘ಠಾಕೂರ್ ಕಾ ಕುಂವಾ (Thakur ka kuan)’ ಅನ್ನು ಉಲ್ಲೇಖಿಸಿದ್ದು, ಬಿಹಾರ ರಾಜಕೀಯದಲ್ಲಿ (Bihar Politics) ಸಂಚಲನ ಸೃಷ್ಟಿಸಿದೆ. ಈ ವಿಚಾರವಾಗಿ ಬಿಜೆಪಿ ಹಾಗೂ ಆರ್‌ಜೆಡಿ ಮಧ್ಯೆ ರಾಜಕೀಯ ಆರೋಪ ಪ್ರತ್ಯಾರೋಪ ತೀವ್ರಗೊಂಡಿದ್ದು, ಇದರ ಮಧ್ಯೆಯೇ ಪ್ರತ್ಯೇಕ ರಜಪೂತ ರಾಜ್ಯಕ್ಕಾಗಿ ಆಗ್ರಹ ಹೆಚ್ಚಾಗತೊಡಗಿದೆ. ರಜಪೂತರನ್ನು ‘ಪ್ರಚೋದನೆ’ ಮಾಡಬಾರದು ಎಂದು ಜೆಡಿಯು ಎಂಎಲ್ಸಿ ಸಂಜಯ್ ಸಿಂಗ್ ಎಚ್ಚರಿಸಿದ್ದರೆ, ಮೇಲ್ವರ್ಗದ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ರಾಜ್ಯದ ಏಳು ಜಿಲ್ಲೆಗಳನ್ನು ವಿಭಜಿಸಿ ಪ್ರತ್ಯೇಕ ‘ರಜಪೂತಾನ’ ರಾಜ್ಯವನ್ನು ರಚಿಸಬೇಕೆಂಬ ಆಗ್ರಹ ಬಿಹಾರದಾದ್ಯಂತ ಜೋರಾಗಿದೆ. ಸಿದ್ಧಾರ್ಥ್ ಕ್ಷತ್ರಿಯ ಎಂಬವರ ಚಿತ್ರಗಳಿರುವ ಪೋಸ್ಟರ್ ವೈರಲ್ ಆಗಿದೆ. ಅದರಲ್ಲಿ, ‘ನಮಗೆ ಪ್ರತ್ಯೇಕ ರಜಪೂತ ರಾಜ್ಯ ಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ರಾಜ್ಯದ ಏಳು ಜಿಲ್ಲೆಗಳನ್ನು ವಿಭಜಿಸಿ ಪ್ರತ್ಯೇಕ ‘ರಜಪೂತಾನ’ ರಾಜ್ಯವನ್ನು ರಚಿಸುವ ಬೇಡಿಕೆ ಇಡಲಾಗಿದೆ. ಇದರೊಂದಿಗೆ ಹಲವು ರಜಪೂತ ನಾಯಕರ ಛಾಯಾಚಿತ್ರಗಳನ್ನೂ ಈ ಪೋಸ್ಟರ್‌ನಲ್ಲಿ ಸೇರಿಸಲಾಗಿದೆ. ಜತೆಗೆ ದೇಶಕ್ಕೆ ಅವರ ಕೊಡುಗೆಯನ್ನೂ ತೋರಿಸಲಾಗಿದೆ. ಇದರಲ್ಲಿ ವಿಪಿ ಸಿಂಗ್, ಚಂದ್ರಶೇಖರ್, ಅರ್ಜುನ್ ಸಿಂಗ್ ಅವರಂತಹ ನಾಯಕರ ಚಿತ್ರಗಳಿವೆ. ಈ ಪೋಸ್ಟರ್‌ನಲ್ಲಿ, ಒಂದು ಮೂಲೆಯಲ್ಲಿ ಮನೋಜ್ ಝಾ ಅವರ ಚಿತ್ರವೂ ಇದೆ, ಅದರಲ್ಲಿ ಅವರನ್ನು ವಿರೋಧಿಸಿ ಪೋಸ್ಟ್ ಹಾಕಲಾಗಿದೆ. ಈ ಪೋಸ್ಟರ್ ಅನ್ನು ರಜಪೂತಾನ ರಾಜ್ಯ ಹೋರಾಟ ಸಮಿತಿಯ ನಾಯಕ ಸಿದ್ಧಾರ್ಥ್ ಕ್ಷತ್ರಿಯ ಅವರು ಹಾಕಿದ್ದಾರೆ ಎನ್ನಲಾಗಿದೆ.
ಪ್ರತ್ಯೇಕ ರಾಜ್ಯ ಕೂಗಿನ ಪೋಸ್ಟರ್ ಪಾಟ್ನಾದ ಬೀದಿಗಳಲ್ಲಿ ಗೋಚರಿಸುತ್ತಿದೆ. ಪೋಸ್ಟರ್‌ನಲ್ಲಿ ಬಿಹಾರದ ನಕ್ಷೆಯನ್ನೂ ಉಲ್ಲೇಖಿಸಲಾಗಿದೆ. ಬಿಹಾರದ ನಕ್ಷೆಯಿಂದ ಕೆಲವು ಜಿಲ್ಲೆಗಳನ್ನು ಸೇರಿಸುವ ಮೂಲಕ ಪ್ರತ್ಯೇಕ ರಜಪೂತ ರಾಜ್ಯದ ಬೇಡಿಕೆ ಇಡಲಾಗಿದೆ. ಇದು ಬಿಹಾರದ ರೋಹ್ತಾಸ್, ಭೋಜ್‌ಪುರ, ಸರನ್, ವೈಶಾಲಿ, ಸಮಸ್ತಿಪುರ್, ಸಹರ್ಸಾ, ಔರಂಗಾಬಾದ್ ಜಿಲ್ಲೆಗಳನ್ನು ಒಳಗೊಂಡಿದೆ.
ಏನಿದು ವಿವಾದ?
ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಆರ್‌ಜೆಡಿ ಸಂಸದ ಮನೋಜ್ ಕುಮಾರ್ ಝಾ ಕವಿತೆ ‘ಠಾಕೂರ್ ಕಾ ಕುಂವಾ’ ಅನ್ನು ವಾಚಿಸಿದ್ದರು. ಹಳ್ಳಿಯ ಜೀವನದ ಎಲ್ಲಾ ಅಂಶಗಳ ಮೇಲೆ ಮೇಲ್ಜಾತಿ ಪ್ರಾಬಲ್ಯವನ್ನು ಹಿಡಿಯಲು ಪ್ರಯತ್ನಿಸುವ ಕವಿತೆ ಇದಾಗಿದೆ. ಈ ಹಿಂದೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡದೆ ಮಹಿಳಾ ಕೋಟಾವನ್ನು ಬೆಂಬಲಿಸುವುದಿಲ್ಲ ಎಂದಿದ್ದ ಆರ್‌ಜೆಡಿ ಈ ಬಾರಿ ಮಸೂದೆ ಪರ ಮತ ಚಲಾಯಿಸಿತ್ತು. ಆದರೆ ಸರ್ಕಾರವು ಎಸ್‌ಸಿ/ಎಸ್‌ಟಿಗಳಂತೆ ಒಬಿಸಿ ಕೋಟಾವನ್ನು ಅದರಲ್ಲಿ ತರಬೇಕೆಂದು ಕೋರಿತ್ತು.
ಇದನ್ನೂ ಓದಿ: ಉನ್ನತ ಸ್ಥಾನವನ್ನು ಹೊಂದಿರುವವರು ಈ ರೀತಿ ಹೇಳಬಾರದು: ಗೆಹ್ಲೋಟ್ಗೆ ಧನ್ಖರ್ ಪ್ರತಿಕ್ರಿಯೆ
ಒಂದೆಡೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮನೋಜ್ ಝಾ ಅವರ ಬೆಂಬಲಕ್ಕೆ ನಿಂತಿದ್ದರೆ, ಮತ್ತೊಂದೆಡೆ ಬಿಹಾರದ ರಜಪೂತ ನಾಯಕರು ಅವರನ್ನು ನಿರಂತರವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಆಡಳಿತಾರೂಢ ಸಮ್ಮಿಶ್ರ ಸರ್ಕಾರ ಕೂಡ ರಜಪೂತ ನಾಯಕರನ್ನು ಹೊಂದಿದೆ ಎಂಬುದು ಗಮನಾರ್ಹ.
ಭಾಷಣದ ವಿಚಾರ ವಿವಾದಕ್ಕೀಡಾಗುತ್ತಿದ್ದಂತೆಯೇ, ಬಿಜೆಪಿ ಬಿಹಾರ ನಾಯಕ ಮತ್ತು ರಾಜ್ಯಸಭಾ ಸಂಸದ ಸುಶೀಲ್ ಕುಮಾರ್ ಮೋದಿ ಅವರು ಆರ್‌ಜೆಡಿ ನಾಯಕ ಮತ್ತು ರಾಜ್ಯದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಝಾ ಪರವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಝಾ ಅವರು ರಜಪೂತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ