ಭಾರತೀಯನಿಂದ ಬ್ರಿಟಿಷ್ ಸರ್ಕಾರಕ್ಕೆ 35,000 ರೂ. ಸಾಲ; 109 ವರ್ಷಗಳ ಬಳಿಕ ಇಂಗ್ಲೆಂಡ್​​ನಿಂದ ಬಂತು ಇಮೇಲ್!

ಮಧ್ಯಪ್ರದೇಶದ 63 ವರ್ಷದ ವಿವೇಕ್ ರುಥಿಯಾ ಅವರ ಪೂರ್ವಜರಲ್ಲಿ ಒಬ್ಬರು ಮೊದಲ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್ ಸರ್ಕಾರಕ್ಕೆ 35 ಸಾವಿರ ರೂ. ಸಾಲ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿವೇಕ್ ರುಥಿಯಾ ಅವರ ಕುಟುಂಬವು ತಮ್ಮ ಪೂರ್ವಜರಿಂದ ಪಡೆದ ಸಾಲವನ್ನು ಮರುಪಾವತಿಸಲಾಗಿದೆಯೇ ಎಂದು ಪತ್ತೆಹಚ್ಚಲು ಬ್ರಿಟಿಷ್ ಅಧಿಕಾರಿಗಳನ್ನು ಸಂಪರ್ಕಿಸಿತು. ಆಶ್ಚರ್ಯದ ಸಂಗತಿಯೆಂದರೆ, ಅವರಿಗೆ 109 ವರ್ಷಗಳ ಬಳಿಕ ಇಂಗ್ಲೆಂಡ್​​ನಿಂದ ಆ ಹಳೆಯ ಸಾಲವನ್ನು ಮರುಪಾವತಿ ಮಾಡಲು ಅಗತ್ಯವಾದ ದಾಖಲೆಗಳನ್ನು ಕಳುಹಿಸಲುವಂತೆ ಮೇಲ್ ಮಾಡಲಾಗಿದೆ!

ಭಾರತೀಯನಿಂದ ಬ್ರಿಟಿಷ್ ಸರ್ಕಾರಕ್ಕೆ 35,000 ರೂ. ಸಾಲ; 109 ವರ್ಷಗಳ ಬಳಿಕ ಇಂಗ್ಲೆಂಡ್​​ನಿಂದ ಬಂತು ಇಮೇಲ್!
109 Year Old Letter
Image Credit source: TV9

Updated on: Aug 11, 2026 | 10:19 PM

ನವದೆಹಲಿ, ಆಗಸ್ಟ್ 11: ಮೊದಲ ಮಹಾಯುದ್ಧದ ಸಮಯದಲ್ಲಿ (1917ರಲ್ಲಿ) ಬ್ರಿಟಿಷ್ ಸರ್ಕಾರಕ್ಕೆ ಸಾಲ ನೀಡಿದ್ದ ಮಧ್ಯಪ್ರದೇಶದ ಸೆಹೋರ್ ಮೂಲದ ಕುಟುಂಬವೊಂದಕ್ಕೆ 109 ವರ್ಷಗಳ ಬಳಿಕ ಯುನೈಟೆಡ್ ಕಿಂಗ್‌ಡಮ್‌ನ (UK) ಸಾಲ ನಿರ್ವಹಣಾ ಕಚೇರಿಯಿಂದ (DMO) ಇಮೇಲ್ ಮೂಲಕ ಉತ್ತರ ಬಂದಿದೆ. ಅದರಲ್ಲಿ, ಮೂಲ ಯುದ್ಧ ಸಾಲ ಪ್ರಮಾಣಪತ್ರ ಮತ್ತು ಸಂಬಂಧಿತ ಪತ್ರವ್ಯವಹಾರದ ಪ್ರತಿಗಳನ್ನು ಕೋರಲಾಗಿದೆ. ಆ ಕುಟುಂಬವು ಪ್ರಸ್ತುತ ಬ್ರಿಟಿಷ್ ಅಧಿಕಾರಿಗಳಿಗೆ ಕಳುಹಿಸಲು ಅಗತ್ಯ ದಾಖಲೆಗಳು ಮತ್ತು ಇತರ ಬ್ಯಾಕಪ್ ದಾಖಲೆಗಳನ್ನು ಸಿದ್ಧಪಡಿಸುತ್ತಿದೆ.

ಏನಿದು ಘಟನೆ?:

ಸೆಹೋರ್‌ನ ಪ್ರಸಿದ್ಧ ಉದ್ಯಮಿ ಹಾಗೂ ನಗರ ಸೇಠ್ ಆಗಿದ್ದ ಜುಮ್ಮಾ ಲಾಲ್ ರುಥಿಯಾ ಎಂಬುವವರು 1917ರ ಜೂನ್ 4ರಂದು ಪ್ರಥಮ ಮಹಾಯುದ್ಧದ ನಿಧಿ ಸಂಗ್ರಹಕ್ಕಾಗಿ ಬ್ರಿಟಿಷ್ ಸರ್ಕಾರ ಬಿಡುಗಡೆ ಮಾಡಿದ್ದ ‘ಇಂಡಿಯನ್ ವಾರ್ ಲೋನ್’ಗೆ 35,000 ರೂ. ಸಾಲ ನೀಡಿದ್ದರು. ಆಗಿನ ಭೋಪಾಲ್‌ನ ಪೊಲಿಟಿಕಲ್ ಏಜೆಂಟ್ ಡಬ್ಲ್ಯೂ.ಎಸ್. ಡೇವಿಸ್ ಈ ಪ್ರಮಾಣಪತ್ರಕ್ಕೆ ಸಹಿ ಹಾಕಿದ್ದರು. 1937ರಲ್ಲಿ ಸೇಠ್ ಜುಮ್ಮಾ ಲಾಲ್ ನಿಧನರಾದರು. ನಂತರ ಸ್ವಾತಂತ್ರ್ಯ ಚಳವಳಿ ನಡೆದು ಬ್ರಿಟಿಷರು ಭಾರತ ಬಿಟ್ಟು ಹೋಗಬೇಕಾಯಿತು. ಹೀಗಾಗಿ, ಆ ಸಾಲವನ್ನು ಅವರ ಕುಟುಂಬಕ್ಕೆ ಮರುಪಾವತಿ ಮಾಡಿರಲಿಲ್ಲ.

ಇದನ್ನೂ ಓದಿ: 1917ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಕೊಟ್ಟಿದ್ದ 35,000 ರೂ ಸಾಲ ವಾಪಸ್ ಕೇಳಲಿರುವ ಭಾರತೀಯ ಕುಟುಂಬ; ಈಗದರ ಮೌಲ್ಯ ಎಷ್ಟಿರಬಹುದು?

ಕಾನೂನು ನೋಟಿಸ್:

ಜುಮ್ಮಾ ಲಾಲ್ ಅವರ ಮೊಮ್ಮಕ್ಕಳಾದ ವಿವೇಕ್ ರುಥಿಯಾ (63) ಮತ್ತು ವಿನಯ್ ರುಥಿಯಾ ಅವರು ತಮ್ಮ ವಕೀಲರ ಮೂಲಕ 2026ರ ಫೆಬ್ರವರಿಯಲ್ಲಿ ಬ್ರಿಟನ್‌ನ ಸಾಲ ನಿರ್ವಹಣಾ ಕಚೇರಿಗೆ (DMO) ಹಳೆಯ ಪ್ರಮಾಣಪತ್ರ ಮತ್ತು ದಾಖಲೆಗಳ ಆಧಾರದ ಮೇಲೆ ನೋಟಿಸ್ ಕಳುಹಿಸಿದ್ದರು.

ಬ್ರಿಟನ್ ಸರ್ಕಾರದ ಉತ್ತರವೇನು?:

ಆ ನೋಟಿಸ್​​ಗೆ ಯುಕೆಯ ಸಾಲ ನಿರ್ವಹಣಾ ಕಚೇರಿಯು ರುಥಿಯಾ ಕುಟುಂಬದ ವಕೀಲರಿಗೆ ಇಮೇಲ್ ಕಳುಹಿಸಿದ್ದು, 1917ರ ಸಾಲದ ಮೂಲ ಪ್ರಮಾಣಪತ್ರ ಮತ್ತು ಅದಕ್ಕೆ ಸಂಬಂಧಿಸಿದ ಐತಿಹಾಸಿಕ ದಾಖಲೆಗಳ ಪ್ರತಿಗಳನ್ನು ಸಲ್ಲಿಸುವಂತೆ ಕೋರಿದೆ. ಆ ದಾಖಲೆಗಳನ್ನು ಪರಿಶೀಲಿಸಿ, ಈ ಸಾಲವನ್ನು ಈ ಹಿಂದೆ ಮರುಪಾವತಿ ಮಾಡಲಾಗಿದೆಯೇ ಅಥವಾ ಬಾಕಿ ಉಳಿದಿದೆಯೇ ಎಂಬುದನ್ನು ಆರ್ಕೈವ್ಸ್ ಮುಖಾಂತರ ತನಿಖೆ ನಡೆಸುವುದಾಗಿ ಯುಕೆ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಹೈದರಾಬಾದ್​ನಲ್ಲಿ ತಿಂಡಿ ತಿಂದು ವಿಮಾನ ಹತ್ತಿದ್ದ ಬ್ರಿಟಿಷ್ ಏರ್​ವೇಸ್​ನ ಮೂವರು ಪೈಲಟ್​ಗಳು ಅಸ್ವಸ್ಥ

ಇಂದಿನ ಮೌಲ್ಯ ಎಷ್ಟು ಕೋಟಿ?:

109 ವರ್ಷಗಳ ಹಿಂದೆ ನೀಡಲಾಗಿದ್ದ 35,000 ರೂ.ಗೆ ಶೇ. 5.5ರ ವಾರ್ಷಿಕ ಬಡ್ಡಿ ದರದಲ್ಲಿ ಲೆಕ್ಕ ಹಾಕಿದರೆ, ಈಗ ಇದರ ಮೌಲ್ಯ ಹಲವು ಕೋಟಿ ರೂ. ಆಗಲಿದೆ. ಒಂದು ವೇಳೆ ಅಂದಿನ ಚಿನ್ನದ ಬೆಲೆಗೆ ಹೋಲಿಸಿ ಲೆಕ್ಕ ಹಾಕಿದರೆ (1917ರಿಂದ ಚಿನ್ನದ ಬೆಲೆ 3,000 ಪಟ್ಟು ಹೆಚ್ಚಾಗಿದೆ) ಈ ಮೊತ್ತವು 10 ಕೋಟಿ ರೂ.ಗಿಂತಲೂ ಹೆಚ್ಚು ಆಗಲಿದೆ ಎಂದು ಕುಟುಂಬಸ್ಥರು ಅಂದಾಜಿಸಿದ್ದಾರೆ. ತಮ್ಮ ತಾತನ ಸಾಲದ ಬಾಕಿ ಹಣ ಪಡೆಯುವುದು ಈಗ ಕೇವಲ ಹಣದ ವಿಚಾರವಾಗಿ ಉಳಿದಿಲ್ಲ, ಇದು ಕುಟುಂಬದ ಗೌರವದ ವಿಷಯವಾಗಿದೆ ಎಂದು ವಿವೇಕ್ ರುಥಿಯಾ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us