1917ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಕೊಟ್ಟಿದ್ದ 35,000 ರೂ ಸಾಲ ವಾಪಸ್ ಕೇಳಲಿರುವ ಭಾರತೀಯ ಕುಟುಂಬ; ಈಗದರ ಮೌಲ್ಯ ಎಷ್ಟಿರಬಹುದು?
Indian man wants Rs 35,000 along-with interest that his grandfather given to British in 1917: ಮೊದಲನೆ ವಿಶ್ವ ಮಹಾಯುದ್ಧದಲ್ಲಿ ಬ್ರಿಟಿಷ್ ಆಡಳಿತಕ್ಕೆ 35,000 ರೂ ಸಾಲ ಕೊಟ್ಟಿದ್ದ ಭಾರತೀಯ ಉದ್ಯಮಿಯೊಬ್ಬರ ಕುಟುಂಬ ಸದಸ್ಯರು ಈಗ ಆ ಸಾಲ ವಸೂಲಿ ಮಾಡಲು ನಿರ್ಧರಿಸಿದ್ದಾರೆ. ಆಗ ಶೇ. 5.5 ಬಡ್ಡಿಗೆ ಬ್ರಿಟಿಷ್ ಆಡಳಿತ ಸಾಲಪತ್ರ ವಿತರಿಸಿತ್ತು. ಈ ಮೂಲಕ ಜುಮ್ಮಾ ಲಾಲ್ ಎಂಬುವವರಿಂದ 35,000 ರೂ ಸಾಲ ಪಡೆಯಲಾಗಿತ್ತು. ಈಗ ಜುಮ್ಮಾ ಲಾಲ್ ಅವರ ಮೊಮ್ಮಗ ಆ ಸಾಲ ವಸೂಲಿಗೆ ಪ್ರಯತ್ನಿಸುತ್ತಿದ್ದಾರೆ.

ಭೋಪಾಲ್, ಫೆಬ್ರುವರಿ 26: ಮೊದಲ ವಿಶ್ವ ಮಹಾಯುದ್ಧದ (World War I) ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಬ್ರಿಟಿಷ್ ಸರ್ಕಾರಕ್ಕೆ ಭಾರತೀಯ ಉದ್ಯಮಿಯೊಬ್ಬರು ಕೊಟ್ಟಿದ್ದ 35,000 ರೂ ಸಾಲದ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಲು ಅವರ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಮಧ್ಯಪ್ರದೇಶದ ಸೀಹೋರ್ನ (Sehore, Madhya Pradesh) ಈ ಕುಟುಂಬವು 35,000 ರೂ ಸಾಲವನ್ನು ವಾಪಸ್ ಕೇಳಲು ಕಾನೂನು ಮಾರ್ಗಗಳನ್ನು ಅವಲೋಕಿಸುತ್ತಿದ್ದಾರೆ.
1917ರಲ್ಲಿ ಸೇಠ್ ಜುಮ್ಮಾ ಲಾಲ್ ರುದಿಯಾ (Seth Jumma Lal Ruthia) ಅವರು ಸ್ಥಳೀಯ ಬ್ರಿಟಿಷ್ ಆಡಳಿತಕ್ಕೆ 35,000 ರೂ ಹಣವನ್ನು ಸಾಲವಾಗಿ ನೀಡಿದ್ದರು. ಈ ಅವರ ಮೊಮ್ಮಗ ವಿವೇಕ್ ರುದಿಯಾ (Vivek Ruthia) ಅವರು ಆ ಸಾಲವನ್ನು ಮರುಪಾವತಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಬ್ರಿಟಿಷ್ ಸರ್ಕಾರಕ್ಕೆ ಲೀಗಲ್ ನೋಟೀಸ್ ಕಳುಹಿಸಲು ಸಜ್ಜಾಗಿದ್ದಾರೆ.
1917, ಮೊದಲ ವಿಶ್ವ ಮಹಾಯುದ್ಧದ ಕಾಲ. ಯುದ್ಧದ ವೆಚ್ಚ ಭರಿಸಲು ಬ್ರಿಟಿಷ್ ಸರ್ಕಾರವು ಸಾಲಪತ್ರಗಳನ್ನು (Debt instruments) ಮಾರುತ್ತಿತ್ತು. ಆಗ ಸಾಲಕ್ಕೆ ಶೇ. 5.5 ಬಡ್ಡಿ ನಿಗದಿಯಾಗಿತ್ತು. ಸೇಠ್ ರಾಮಕಿಶನ್ ಜಸ್ಕರಣ್ ರುದಿಯಾ ಎನ್ನುವ ಹೆಸರಿನ ಆಗಿನ ಪ್ರಖ್ಯಾತ ಕಂಪನಿ ಮಾಲೀಕರಾಗಿದ್ದ ಸೇಠ್ ಜುಮ್ಮಾ ಲಾಲ್ ಅವರು 1917ರ ಜೂನ್ 4ರಂದು 35,000 ರೂ ಸಾಲ ಕೊಟ್ಟಿರುವುದರ ದಾಖಲೆ ಇದೆ. ಜುಮ್ಮಾ ಲಾಲ್ ನಿಧನರಾದ ಬಳಿಕ ಅವರ ಕುಟುಂಬಸ್ಥರಿಗೆ ಈ ದಾಖಲೆ ಸಿಕ್ಕಿದೆ.
ಅಂದಿನ ಕಾಲಕ್ಕೆ 35,000 ರೂ ಬಹಳ ದೊಡ್ಡ ಹಣ. ಅದನ್ನು ಹಾಗೆ ಸುಮ್ಮನೆ ಬಿಡುವುದು ಯಾಕೆ ಎಂದು ಅವರ ಕುಟುಂಬ ಸದಸ್ಯರು ಆಲೋಚಿಸಿ, ಅದನ್ನು ವಸೂಲಿ ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.
1917ರಲ್ಲಿ ಕೊಟ್ಟ 35,000 ರೂ ಸಾಲದ ಮೌಲ್ಯ ಈಗ ಎಷ್ಟು?
1917, ಎಂದರೆ ಸುಮಾರು 108-109 ವರ್ಷದ ಹಿಂದೆ. ಆಗ ಆ ಸಾಲಕ್ಕೆ ಶೇ. 5.5 ಬಡ್ಡಿಯಂತೆ ಲೆಕ್ಕ ಹಾಕಿದರೆ 35,000 ರೂ ಹಣ ಇವತ್ತು 10-11 ಕೋಟಿ ರೂ ಆಗಿರುತ್ತಿತ್ತು.
ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್ನಿಂದ ತೆರಿಗೆ ಉಳಿತಾಯದ ಜೊತೆಗೆ ತಿಂಗಳಿಗೆ 20,000 ರೂ ಆದಾಯ ಸೃಷ್ಟಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಸೇಠ್ ಜುಮ್ಮಾ ಲಾಲ್ ದೊಡ್ಡ ಉದ್ಯಮಿಯಾಗಿದ್ದವರು…
ಭೋಪಾಲ್ ಪ್ರಾಂತ್ಯದಲ್ಲಿ ಮತ್ತು ಸೀಹೋರ್ ಭಾಗದಲ್ಲಿ ರೂದಿಯಾ ಕುಟುಂಬ ಬಹಳ ಶ್ರೀಮಂತಿಕೆ ಹೊಂದಿತ್ತು. ಅಪಾರವಾದ ಭೂಮಿ ಮತ್ತು ಉದ್ಯಮಗಳನ್ನು ಹೊಂದಿತ್ತು. ಸೇಠ್ ಜುಮ್ಮಾ ಲಾಲ್ ರೂದಿಯಾ ಅವರು ಅಂದಿನ ಕಾಲದ ದೊಡ್ಡ ಬ್ಯುಸಿನೆಸ್ ಎನಿಸಿದ್ದ ಬಟ್ಟೆ ಹಾಗೂ ಆಹಾರಧಾನ್ಯಗಳ ಪ್ರಮುಖ ವರ್ತಕರೆನಿಸಿದ್ದರು. ಹೀಗಾಗಿ, ಬ್ರಿಟಿಷ್ ಆಡಳಿತಕ್ಕೆ ಅವರು ಅಷ್ಟು ದೊಡ್ಡ ಮೊತ್ತದ ಸಾಲ ಕೊಡಲು ಸಾಧ್ಯವಾಗಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
