ಆರ್​ಎಸ್ಎಸ್​ನ್ನು ಸಂಘ ಪರಿವಾರ್ ಎಂದು ಹೇಳಬಾರದು, ಅವರಿಗೆ ಕುಟುಂಬದ ಮೌಲ್ಯಗಳು ಗೊತ್ತಿಲ್ಲ: ರಾಹುಲ್ ಗಾಂಧಿ

Rahul Gandhi: ಕುಟುಂಬ ಎಂದು ಹೇಳುವಾಗ ಅಲ್ಲಿ ಮಹಿಳೆಯರಿರುತ್ತಾರೆ, ಹಿರಿಯರ ಮೇಲೆ ಗೌರವ ಇರುತ್ತದೆ, ಪ್ರೀತಿ ಮತ್ತು ಸಹಾನುಭೂತಿ ಇರುತ್ತದೆ. ಆದರೆ ಆರ್​ಎಸ್ಎಸ್​ನಲ್ಲಿ ಇದು ಯಾವುದೂ ಇಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಆರ್​ಎಸ್ಎಸ್​ನ್ನು ಸಂಘ ಪರಿವಾರ್ ಎಂದು ಹೇಳಬಾರದು, ಅವರಿಗೆ ಕುಟುಂಬದ ಮೌಲ್ಯಗಳು ಗೊತ್ತಿಲ್ಲ: ರಾಹುಲ್ ಗಾಂಧಿ
ರಾಹುಲ್​ ಗಾಂಧಿ
Edited By:

Updated on: Mar 25, 2021 | 2:36 PM

ದೆಹಲಿ: ಆರ್​ಎಸ್ಎಸ್​ನ್ನು ಸಂಘ ಪರಿವಾರ್ (ಕುಟುಂಬ) ಎಂದು ಕರೆಯಬಾರದು .ಅವರಿಗೆ ಕುಟುಂಬದ ಮೌಲ್ಯಗಳು ಗೊತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಆರ್ ಎಸ್ ಎಸ್ ಮತ್ತು ಅದರೊಂದಿಗೆ ಇರುವ ಸಂಘಟನೆಗಳನ್ನು ಸಂಘ ಪರಿವಾರ ಎಂದು ಕರೆಯಬಾರದು. ಕುಟುಂಬ ಎಂದು ಹೇಳುವಾಗ ಅಲ್ಲಿ ಮಹಿಳೆಯರಿರುತ್ತಾರೆ, ಹಿರಿಯರ ಮೇಲೆ ಗೌರವ ಇರುತ್ತದೆ, ಪ್ರೀತಿ ಮತ್ತು ಸಹಾನುಭೂತಿ ಇರುತ್ತದೆ. ಆದರೆ ಆರ್​ಎಸ್ಎಸ್​ನಲ್ಲಿ ಇದು ಯಾವುದೂ ಇಲ್ಲ. ನಾನು ಆರ್​ಎಸ್ಎಸ್​ನ್ನು ಸಂಘ ಪರಿವಾರ್ ಎಂದು ಕರೆಯುವುದಿಲ್ಲ ಎಂಬುದಾಗಿ ರಾಹುಲ್ ಗುರುವಾರ ಟ್ವೀಟ್ ಮಾಡಿದ್ದಾರೆ.

ಚುನಾವಣೆಯ ಹೊತ್ತಲ್ಲಿ ರಾಹುಲ್ ಈ ರೀತಿ ಆರ್​ಎಸ್​ಎಸ್ ಮೇಲೆ ಹರಿಹಾಯ್ದಿರುವುದು ಮೊದಲೇನೂ ಅಲ್ಲ. ಕಳೆದ ವಾರ ಅಸ್ಸಾಂ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಆರ್​ಎಸ್​ಎಸ್ ವಿರುದ್ಧ ರಾಹುಲ್ ಕಿಡಿಕಾರಿದ್ದರು. ನಮ್ಮ ಭಾಷೆ, ಇತಿಹಾಸ, ನಮ್ಮ ಯೋಚನಾ ರೀತಿ, ನಾವು ಇರುವ ರೀತಿ ಎಲ್ಲದರ ಮೇಲೂ ಬಿಜೆಪಿ ಮತ್ತು ಆರ್​ಎಸ್ಎಸ್ ದಾಳಿ ನಡೆಸುತ್ತಿದೆ. ನಾವು ಅಸ್ಸಾಂನ ಯೋಚನೆಗಳನ್ನು ಸಂರಕ್ಷಿಸುತ್ತೇವೆ ಎಂದು ಈ ಪ್ರಣಾಳಿಕೆ ಮೂಲಕ ಭರವಸೆ ನೀಡುತ್ತೇವೆ ಎಂದಿದ್ದರು ರಾಹುಲ್.


ಕಳೆದ ತಿಂಗಳು ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ಮಾಡಿದ ರಾಹುಲ್, ಆರ್​ಎಸ್​ಎಸ್ ಮತ್ತು ಬಿಜೆಪಿ ಕೇಂದ್ರದ ಸಂಸ್ಥೆಗಳನ್ನು ನಾಶಪಡಿಸಲು ಹಣದ ದರ್ಪ ತೋರಿಸುತ್ತದೆ. ಶಾಸಕರನ್ನು ಖರೀದಿಸುವುದು, ನ್ಯಾಯಾಂಗದಲ್ಲಿ ನುಸುಳುವುದು ಎಲ್ಲವೂ ಇದರದ್ದೇ ಭಾಗವಾಗಿದೆ.


ದೇಶವನ್ನು ಒಗ್ಗೂಡಿಸುತ್ತಿರುವ ಚುನಾಯಿತ ಸಂಸ್ಥೆಗಳು, ಮುಕ್ತ ಮಾಧ್ಯಮಗಳ ಮೇಲೆ ಕಳೆದ 6 ವರ್ಷಗಳಿಂದ ವ್ಯವಸ್ಥಿತ ದಾಳಿ ನಡೆಯುತ್ತಲೇ ಇದೆ. ಪ್ರಜಾಪ್ರಭುತ್ವವು ಒಂದೇ ಏಟಿಗೆ ಸಾಯುವುದಿಲ್ಲ. ಅದು ನಿಧಾನವಾಗಿ ಸಾಯುತ್ತದೆ. ಆರ್​ಎಸ್ಎಸ್ ಸಾಂಸ್ಥಿಕ ಸಮತೋಲನವನ್ನು ನಾಶಮಾಡಿದೆ ಎಂದು ಹೇಳಿದ್ದಾರೆ. ಸಂಸತ್, ರಾಜ್ಯ ವಿಧಾನಸಭೆ, ಪಂಚಾಯತ್, ನ್ಯಾಯಾಂಗ ಮತ್ತು ಮಾಧ್ಯಮ ಸ್ವಾತಂತ್ರ್ಯದ ಕ್ಷಯಿಸುವಿಕೆ ಮತ್ತು ಆರ್​ಎಸ್ಎಸ್ ನಿಂದಾಗಿ ದೇಶದ ಪ್ರಜಾಪ್ರಭುತ್ವ ಸತ್ತು ಹೋಗಿದೆ ಎಂದು ರಾಹುಲ್ ಆರೋಪಿಸಿದ್ದರು.

ಆದಾಗ್ಯೂ, ರಾಹುಲ್ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ. ಇದು ನಮಗೆ ಸಿಕ್ಕಿದ ಶ್ಲಾಘನೆ. ಆರ್​ಎಸ್ಎಸ್ ಅಂದರೆ ಶಿಸ್ತು, ರಾಷ್ಟ್ರಭಕ್ತಿ ಮತ್ತು ಇತರ ಒಳ್ಳೆಯ ಗುಣಗಳು. ಆರ್​ಎಸ್ಎಸ್ ನ್ಯಾಯಾಂಗ ಅಥವಾ ಇನ್ಯಾವುದೇ ಕ್ಷೇತ್ರದಲ್ಲಿ ಪ್ರಭಾವ ಬೀರುತ್ತದೆ ಎಂದು ಯಾರಾದರೂ ಹೇಳಿದರೆ ಏನೋ ಒಳ್ಳೆಯದಾಗುತ್ತದೆ ಎಂದು ಭಾವಿಸಿ ಖುಷಿ ಪಡಬೇಕು. ಇದು ರಾಹುಲ್ ನಮಗೆ ನೀಡಿದ ಮೆಚ್ಚುಗೆ ಎಂದು ಸಂಘಟನೆ ಹೇಳಿದೆ.

ಇದನ್ನೂ ಓದಿ:  ರೈತರ ಭವಿಷ್ಯ ಕಸಿಯಲು ಕೇಂದ್ರ ಪ್ರಯತ್ನಿಸುತ್ತಿದೆ: ಕೃಷಿ ಕಾಯ್ದೆ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

Published On - 1:46 pm, Thu, 25 March 21