
ನವದೆಹಲಿ, ಏಪ್ರಿಲ್ 17: ಉಕ್ರೇನ್‌ನ (Ukraine) ಕೈವ್‌ನಲ್ಲಿರುವ ಭಾರತೀಯ ಔಷಧ ಕಂಪನಿಯಾದ ಕುಸುಮ್ ಹೆಲ್ತ್‌ಕೇರ್‌ನ ಗೋದಾಮಿನ ಮೇಲೆ ರಷ್ಯಾದ ಕ್ಷಿಪಣಿ ದಾಳಿ ಮಾಡಿದೆ ಎಂಬ ಉಕ್ರೇನ್ ಆರೋಪಗಳನ್ನು ಭಾರತದಲ್ಲಿನ ರಷ್ಯಾದ ರಾಯಭಾರ (Russian Embassy) ಕಚೇರಿ ತಳ್ಳಿಹಾಕಿದೆ. ಉಕ್ರೇನಿಯನ್ ರಾಯಭಾರ ಕಚೇರಿಯ ಆರೋಪಗಳಿಗೆ ಪ್ರತಿಕ್ರಿಯಿಸಿದ ರಷ್ಯಾ, “ರಷ್ಯಾದ ಸಶಸ್ತ್ರ ಪಡೆಗಳು ಏಪ್ರಿಲ್ 12ರಂದು ಕೈವ್‌ನ ಪೂರ್ವ ಭಾಗದಲ್ಲಿರುವ ಕುಸುಮ್ ಹೆಲ್ತ್‌ಕೇರ್‌ನ ಔಷಧಾಲಯ ಗೋದಾಮಿನ ಮೇಲೆ ದಾಳಿ ಮಾಡಿಲ್ಲ. ನಾವು ಆ ದಾಳಿ ಮಾಡಲು ಪ್ಲಾನ್ ಮಾಡಿರಲಿಲ್ಲ” ಎಂದು ಹೇಳಿದೆ.
ಶನಿವಾರ ಭಾರತದಲ್ಲಿನ ಉಕ್ರೇನ್ ರಾಯಭಾರ ಕಚೇರಿಯು ರಷ್ಯಾದ ಕ್ಷಿಪಣಿಯು ಪ್ರಮುಖ ಭಾರತೀಯ ಔಷಧ ಕಂಪನಿಯಾದ ಕುಸುಮ್‌ನ ಗೋದಾಮಿನ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿತ್ತು. ಎಕ್ಸ್ನಲ್ಲಿ ಪೋಸ್ಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದ ಉಕ್ರೇನ್ ರಾಯಭಾರ ಕಚೇರಿ, “ಇಂದು ರಷ್ಯಾದ ಕ್ಷಿಪಣಿ ಉಕ್ರೇನ್‌ನಲ್ಲಿರುವ ಭಾರತೀಯ ಔಷಧ ಕಂಪನಿ ಕುಸುಮ್‌ನ ಗೋದಾಮಿನ ಮೇಲೆ ದಾಳಿ ಮಾಡಿದೆ. ಭಾರತದೊಂದಿಗೆ ‘ವಿಶೇಷ ಸ್ನೇಹವಿದೆ’ ಎಂದು ಹೇಳಿಕೊಳ್ಳುವ ರಷ್ಯಾ ಉದ್ದೇಶಪೂರ್ವಕವಾಗಿ ಭಾರತೀಯ ವ್ಯವಹಾರಗಳನ್ನು ಗುರಿಯಾಗಿಸಿಕೊಂಡಿದೆ. ಅದು ಮಕ್ಕಳು ಮತ್ತು ವೃದ್ಧರಿಗೆ ನೀಡಲಾಗುವ ಔಷಧಿಗಳನ್ನು ನಾಶಪಡಿಸುತ್ತದೆ” ಎಂದು ಹೇಳಿತ್ತು.
ಇದನ್ನೂ ಓದಿ: ಪುಟಿನ್ ಜೊತೆಗಿನ ಫೋನ್ ಕಾಲ್ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಟ್ರಂಪ್ ಜೊತೆ ಉಕ್ರೇನ್‌ನ ಝೆಲೆನ್ಸ್ಕಿ ಮಾತುಕತೆ
ಈ ದಾಳಿಯ ಕೆಲವು ದಿನಗಳ ನಂತರ, ರಷ್ಯಾದ ರಾಯಭಾರ ಕಚೇರಿ ಈ ಹೇಳಿಕೆಯನ್ನು ತಳ್ಳಿಹಾಕಿದೆ. ಉಕ್ರೇನಿಯನ್ ವಾಯು ರಕ್ಷಣಾ ಕ್ಷಿಪಣಿಗಳಲ್ಲಿ ಒಂದು ಕುಸುಮ್ ಹೆಲ್ತ್‌ಕೇರ್‌ನ ಗೋದಾಮಿನ ಮೇಲೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಆ ದಾಳಿಯನ್ನು ನಾವು ಪ್ಲಾನ್ ಮಾಡಿರಲಿಲ್ಲ ಎಂದು ರಷ್ಯಾದ ರಾಯಭಾರ ಕಚೇರಿ ಹೇಳಿದೆ. “ಈ ಹಿಂದೆ ಇದೇ ರೀತಿಯ ಪ್ರಕರಣಗಳು ಸಂಭವಿಸಿವೆ, ಇದರಲ್ಲಿ ಉಕ್ರೇನಿಯನ್ ವಾಯು ರಕ್ಷಣಾ ಪ್ರತಿಬಂಧಕಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುವ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳಿಂದಾಗಿ ನಗರ ಪ್ರದೇಶಗಳಲ್ಲಿ ತಮ್ಮ ಗುರಿಗಳನ್ನು ತಲುಪಲು ವಿಫಲವಾಗಿವೆ” ಎಂದು ಅದು ಹೇಳಿದೆ.
ಇದನ್ನೂ ಓದಿ: ರಷ್ಯಾದ ಯುದ್ಧಕ್ಕೆ ಚೀನಾ ಸಹಾಯ; ಉಕ್ರೇನ್ಗೆ ಭೇಟಿ ನೀಡಿ ಎಂದ ಝೆಲೆನ್ಸ್ಕಿಗೆ ಟ್ರಂಪ್ ಹೇಳಿದ್ದೇನು?
ನಾಗರಿಕ ಮೂಲಸೌಕರ್ಯದ ಮೇಲೆ ರಷ್ಯಾ ಉದ್ದೇಶಪೂರ್ವಕವಾಗಿ ದಾಳಿ ಮಾಡಿದೆ ಎಂಬ ಆರೋಪವನ್ನು ತಿರಸ್ಕರಿಸಿದ ರಷ್ಯಾದ ರಾಯಭಾರ ಕಚೇರಿ, “ವಿಶೇಷ ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ರಷ್ಯಾದ ಸಶಸ್ತ್ರ ಪಡೆಗಳು ಎಂದಿಗೂ ನಾಗರಿಕ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ರಾಯಭಾರ ಕಚೇರಿ ವಿವರಿಸುತ್ತದೆ” ಎಂದು ಹೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ