ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಉಲ್ಬಣಗೊಳ್ಳುತ್ತಲೇ ಇರುವುದರಿಂದ ಯುದ್ಧ ಪೀಡಿತ ಉಕ್ರೇನ್ (Ukraine) ದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರುವ ಪ್ರಯತ್ನವನ್ನು ಭಾರತ ಮತ್ತಷ್ಟು ತೀವ್ರಗೊಳಿಸಿದೆ. ಇದಕ್ಕಾಗಿ ಮಾರ್ಚ್ 8ರೊಳಗೆ 31ಕ್ಕೂ ಹೆಚ್ಚು ವಿಮಾನಗಳನ್ನು ಯುದ್ಧಪೀಡಿತ ಉಕ್ರೇನ್ ಮತ್ತು ಅದರ ನೆರೆಯ ದೇಶಗಳಿಗೆ ಕಳುಹಿಸಲಾಗುವುದು. ಅಲ್ಲಿ ಸಿಲುಕಿರುವ 6,300ಕ್ಕೂ ಹೆಚ್ಚು ಭಾರತೀಯರನ್ನು ಮರಳಿ ಕರೆತರಲಾಗುವುದು ಎಂದು ಭಾರತ ಸರ್ಕಾರ ತಿಳಿಸಿದೆ.
ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಇಂಡಿಗೋ, ಸ್ಪೈಸ್‌ಜೆಟ್ ಮತ್ತು ಭಾರತೀಯ ವಾಯುಪಡೆಗಳು ಉಕ್ರೇನ್ನಲ್ಲಿ ಸಿಕ್ಕಿಬಿದ್ದ ಪ್ರಜೆಗಳನ್ನು ಸ್ಥಳಾಂತರಿಸಲು ‘ಆಪರೇಷನ್ ಗಂಗಾ’ ಕಾರ್ಯಾಚರಣೆ ನಡೆಸಲಿವೆ. ಇಂದಿನಿಂದ ರೊಮೇನಿಯಾದ ಬುಕಾರೆಸ್ಟ್‌ನಿಂದ ಭಾರತೀಯರನ್ನು ಮರಳಿ ಕರೆತರಲು 21ಕ್ಕೂ ಹೆಚ್ಚು ವಿಮಾನಗಳನ್ನು ಕಳುಹಿಸಲಾಗುವುದು. 4 ವಿಮಾನಗಳು ಹಂಗೇರಿಯ ಬುಡಾಪೆಸ್ಟ್‌ನಿಂದ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಇದಲ್ಲದೆ, ಪೋಲೆಂಡ್‌ನ ರ್ಜೆಸ್ಜೋವ್‌ನಿಂದ ಜನರನ್ನು ಮರಳಿ ಕರೆತರಲು 4 ವಿಮಾನಗಳು ಮತ್ತು ಸ್ಲೋವಾಕಿಯಾದ ಕೊಸೈಸ್‌ನಿಂದ ಭಾರತೀಯರನ್ನು ಕರೆತರಲು 1 ವಿಮಾನ ಕಾರ್ಯ ನಿರ್ವಹಿಸಲಿದೆ. ಭಾರತೀಯ ವಾಯುಪಡೆಯು ಬುಕಾರೆಸ್ಟ್‌ನಿಂದ ಭಾರತೀಯರನ್ನು ಮರಳಿ ಕರೆತರಲಿದೆ.
ಒಟ್ಟಾರೆಯಾಗಿ, 31 ವಿಮಾನಗಳು ಇಂದಿನಿಂದ ಮಾರ್ಚ್ 8ರವರೆಗೆ ಕಾರ್ಯ ನಿರ್ವಹಿಸಲಿದ್ದು, 6,300ಕ್ಕೂ ಹೆಚ್ಚು ಜನರೊಂದಿಗೆ ಕರೆತರಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಸ್ಪೈಸ್‌ಜೆಟ್ ವಿಮಾನಗಳು ಸುಮಾರು 180 ಜನರ ಸಾಮರ್ಥ್ಯವನ್ನು ಹೊಂದಿದ್ದು, ಏರ್ ಇಂಡಿಯಾ ಮತ್ತು ಇಂಡಿಗೋ ಕ್ರಮವಾಗಿ 250 ಮತ್ತು 216 ಪ್ರಯಾಣಿಕರನ್ನು ಸಾಗಿಸಬಹುದು ಎಂದು ಮೂಲಗಳು ತಿಳಿಸಿವೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಒಟ್ಟು 7 ವಿಮಾನಗಳನ್ನು ನಿರ್ವಹಿಸುತ್ತಿದ್ದರೆ, ಸ್ಪೈಸ್‌ಜೆಟ್ 4 ವಿಮಾನಗಳನ್ನು ಸೇವೆಗೆ ನೀಡಲಿದೆ. ಏರ್ ಇಂಡಿಯಾ 7 ವಿಮಾನಗಳನ್ನು ನಿರ್ವಹಿಸಲಿದೆ ಮತ್ತು ಇಂಡಿಗೋ 12 ವಿಮಾನಗಳಲ್ಲಿ ಭಾರತದ ಜನರನ್ನು ಕರೆತರಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಏರ್ ಇಂಡಿಯಾ ಬುಕಾರೆಸ್ಟ್‌ನಿಂದ ಹಾರಾಟ ನಡೆಸಲಿದ್ದು, ಇಂಡಿಗೋ ಬುಕಾರೆಸ್ಟ್, ಬುಡಾಪೆಸ್ಟ್ ಮತ್ತು ರ್ಜೆಸ್ಜೋವ್‌ನಿಂದ ತಲಾ 4 ವಿಮಾನಗಳನ್ನು ಯೋಜಿಸಿದೆ. ಸ್ಪೈಸ್‌ಜೆಟ್ ಬುಕಾರೆಸ್ಟ್‌ನಿಂದ 2, ಬುಡಾಪೆಸ್ಟ್‌ನಿಂದ 1 ಮತ್ತು ಸ್ಲೋವಾಕಿಯಾದ ಕೊಸೈಸ್‌ನಿಂದ 1 ವಿಮಾನಗಳು ಕಾರ್ಯ ನಿರ್ವಹಿಸಲಿದೆ.
ಹಾಗೇ, ಖಾರ್ಕಿವ್‌ನಲ್ಲಿರುವ ತನ್ನ ಎಲ್ಲಾ ಪ್ರಜೆಗಳು ತಮ್ಮ ಸುರಕ್ಷತೆಗಾಗಿ ತಕ್ಷಣವೇ ಖಾರ್ಕಿವ್ನಿಂದ ತೆರಳುವಂತೆ ಭಾರತ ಇಂದು ತುರ್ತು ಮನವಿಯನ್ನು ಮಾಡಿದೆ. ಫೇಸ್ಬುಕ್, ಟ್ವಿಟ್ಟರ್ ಸೇರಿದಂತೆ ಎಲ್ಲ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯರು ಉಕ್ರೇನಿಯನ್ ಸಮಯ ಸಂಜೆ 6 ಗಂಟೆಯೊಳಗೆ (ಭಾರತೀಯ ಕಾಲಮಾನ ರಾತ್ರಿ 9.30) ಪೆಸೊಚಿನ್, ಬಾಬಾಯೆ ಅಥವಾ ಬೆಜ್ಲ್ಯುಡೋವ್ಕಾವನ್ನು ತಲುಪಬೇಕು ಎಂದು ಭಾರತ ತಿಳಿಸಿದೆ.
ಇದನ್ನೂ ಓದಿ: ಕೂಡಲೇ ಖಾರ್ಕಿವ್ನಿಂದ ಹೊರಟು ಈ ಜಾಗಗಳನ್ನು ಸೇರಿಕೊಳ್ಳಿ; ಉಕ್ರೇನ್ನಲ್ಲಿರುವ ಭಾರತೀಯರಿಗೆ ಸರ್ಕಾರ ಸೂಚನೆ