Kerala: ಶಬರಿಮಲೆ ಅಯ್ಯಪ್ಪ ದೇಗುಲದ ಗರ್ಭಗುಡಿ ಪ್ರವೇಶದ್ವಾರ ಬಳಿ, ವಿಜಯ ಮಲ್ಯ ನೀಡಿದ್ದ ಚಿನ್ನದ ಲೇಪಿತ ಛಾವಣಿ ಸೋರುತಿದೆ!
Vijay Mallya: ವಿಜಯ್ ಮಲ್ಯ 18 ಕೋಟಿ ರೂ ವೆಚ್ಚದಲ್ಲಿ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಚಿನ್ನದ ಹಾಳೆಗಳ ಮೇಲ್ಛಾವಣಿ ಮಾಡಿಸಿಕೊಟ್ಟಿದ್ದರು. ಅದೀಗ ಸೋರುತ್ತಾ ಇದೆಯಂತೆ! ಹಾಗೆ ನೋಡಿದರೆ ತಮ್ಮ ಪಾಪಗಳಿಗೆ ಪ್ರಾಯಶ್ಚಿತ್ತವಾಗಿಯೋ ಏನೋ ವಿಜಯ್ ಮಲ್ಯ ನಾನಾ ಮಂದಿರಗಳಿಗೆ ನಾನಾ ಸ್ವರೂಪದಲ್ಲಿ ದೇಣಿಗೆಗಳನ್ನು ನೀಡಿದ್ದಾರೆ.
ಮಾಡಬಾರದ್ದು ಮಾಡಿ, ಕೋಟಿ ಕೋಟಿ ಹಣ ಗಂಟುಮೂಟೆ ಕಟ್ಟಿಕೊಂಡು ಭಾರತಕ್ಕೆ ಗುಡ್ ಬೈ ಹೇಳಿರುವ ಮದ್ಯದ ದೊರೆ ವಿಜಯ್ ಮಲ್ಯ (Vijay Mallya) ಮತ್ತೆ ಸುದ್ದಿಯಲ್ಲಿದ್ದಾರೆ. ವರುಣನ ಆರ್ಭಟಕ್ಕೆ ತತ್ತರಿಸುತ್ತಿರುವ ದೇವರನಾಡು ಕೇರಳದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ (Sabarimala Ayyappa temple) 10-12 ವರ್ಷಗಳ ಹಿಂದೆ ದೇವರಿಗೆ ಮುಡಿ ಅರ್ಪಿಸುತ್ತಾ, ಇದೇ ವಿಜಯ್ ಮಲ್ಯ ಆಗ್ಗೆ ಸುಮಾರು 18 ಕೋಟಿ ರೂಪಾಯಿ ವೆಚ್ಚದಲ್ಲಿ ದೇಗುಲದ ಮುಂಭಾಗದಲ್ಲಿ ಚಿನ್ನದ ಹಾಳೆಗಳ ಮೇಲ್ಛಾವಣಿಯನ್ನು (Golden Roof) ಮಾಡಿಸಿಕೊಟ್ಟಿದ್ದರು. ಅದೀಗ ಸೋರುತ್ತಾ ಇದೆಯಂತೆ! ಹಾಗೆ ನೋಡಿದರೆ ತಮ್ಮ ಪಾಪಗಳಿಗೆ ಪ್ರಾಯಶ್ಚಿತ್ತವಾಗಿಯೋ ಏನೋ ವಿಜಯ್ ಮಲ್ಯ ನಾನಾ ಮಂದಿರ-ಮಠಗಳಿಗೆ ನಾನಾ ಸ್ವರೂಪದಲ್ಲಿ ದೇಣಿಗೆಗಳನ್ನು (Donation) ನೀಡಿದ್ದರು.
ವಿಜಯ್ ಮಲ್ಯಗೆ ಶಬರಿಮಲೆ ಅಯ್ಯಪ್ಪ ಅಂದ್ರೆ ತುಂಬಾ ಭಕ್ತಿ ಭಾವ ಇದ್ದ ಕಾಲವದು. ಪ್ರತಿ ವರ್ಷ ಅಯ್ಯಪ್ಪ ಸ್ವಾಮಿ ದರ್ಶನಕ್ಕೆಂದು 41 ದಿನಗಳ ಕಾಲ no drinks-no meat ಸಂಪ್ರದಾಯ ಆಚರಿಸುತ್ತಿದ್ದರು. ಸುಮಾರು 20 ಬಾರಿ ಅವರು ಅಯ್ಯಪ್ಪನ ದರ್ಶನ ಪಡೆದಿದ್ದರು. ಕೊನೆಯ ಘಟ್ಟದಲ್ಲಿ 10 ಕಿಮೀ ಬರಿಗಾಲಲ್ಲಿ ನಡೆದು ದೇವರ ದರ್ಶನ ಪಡೆಯುತ್ತಿದ್ದರು. ಹೀಗಿರುವಾಗ ಜನವರಿ 2011ರಲ್ಲಿ 32 ಕೆಜಿ ಚಿನ್ನ ಮತ್ತು 1900 ಕೆಜಿ ತಾಮ್ರ ಬಳಸಿ, ದೇಗುಲದ ಮುಂಭಾಗ ಚಿನ್ನದ ಹಾಳೆಗಳ ಮೇಲ್ಛಾವಣಿ ನಿರ್ಮಿಸಿಕೊಟ್ಟರು. ಅದಕ್ಕೆ ಆಗ್ಗೆ ತಗುಲಿದ ವೆಚ್ಚ 18 ಕೋಟಿ ರೂಪಾಯಿ. ಇನ್ನು ಇಲ್ಲೇ ಬೆಂಗಳೂರು ಪೀಣ್ಯ ಜಾಲಹಳ್ಳಿಯಲ್ಲಿರುವ ಅಯ್ಯಪ್ಪ ದೇಗುಲದಲ್ಲಿ ಆಧಾರ ಸ್ತಂಭಗಳಿಗೆ ಚಿನ್ನದ ಪಟ್ಟಿ ಕಟ್ಟಲು ಹಣ ನೀಡಿದ್ದರು. ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೂ ಮಲ್ಯ ದೇಣಿಗೆ ನೀಡಿದ್ದರು. ವಿಜಯ್ ಮಲ್ಯರ ದಾನಧರ್ಮಗಳ ಪಟ್ಟಿ ಇನ್ನೂ ಉದ್ದವಿದೆ.
ಇನ್ನು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಸೋರುತ್ತಿರುವ ವಿಚಾರಕ್ಕೆ ಬಂದರೆ ದೇಗುಲದ ಗರ್ಭಗುಡಿಯ ಎಡ ಭಾಗದ ಪ್ರವೇಶದ್ವಾರದಲ್ಲಿ ದ್ವಾರಪಾಲಕರ ವಿಗ್ರದ ಮೇಲೆ ಮಳೆ ನೀರು ತೊಟ್ಟುಕ್ಕುತ್ತಿದೆ. ಅಯ್ಯಪ್ಪ ದೇವಸ್ಥಾನದ ಆಡಳಿತ ಮಂಡಳಿ ತಂತ್ರಿಗಳ ಜೊತೆ ಮಾತನಾಡಿ, ಶಾಸ್ತ್ರೋಕ್ತವಾಗಿ 45 ದಿನಗಳ ಕಾಲಾವಧಿಯಲ್ಲಿ ರಿಪೇರಿ ಕೆಲಸ ಮಾಡಿಸಲು ನಿರ್ಧರಿಸಿದೆ. ಇದಕ್ಕಾಗಿ ಯಾರಾದರೂ ಭಕ್ತಾದಿಗಳು ದೇಣಿಗೆ ನೀಡಬಹುದು ಎಂದು ಆಡಳಿತ ಮಂಡಳಿ ಮನವಿ ಮಾಡಿದೆ.
Published On - 7:47 pm, Fri, 5 August 22