ಪೈಲಟ್​ಗೆ ಸಿಎಂ ಸ್ಥಾನ ನೀಡದಿದ್ರೆ ಭಾರತ್‌ ಜೋಡೋ ಯಾತ್ರೆ ನಿಲ್ಲಿಸುತ್ತೇವೆ: ಗುರ್ಜಾರ್ ಮುಖಂಡನ ಎಚ್ಚರಿಕೆಗೆ ಸಚಿನ್‌ ತೀಕ್ಷ್ಣ ಪ್ರತಿಕ್ರಿಯೆ

ಸಚಿನ್‌ ಪೈಲಟ್​ಗೆ ಸಿಎಂ ಸ್ಥಾನ ನೀಡಬೇಕು, ಇಲ್ಲದಿದ್ರೆ ಭಾರತ್‌ ಜೋಡೋ ಯಾತ್ರೆ ನಿಲ್ಲಿಸುತ್ತೇವೆ ಎಂದು ಗುರ್ಜಾರ್ ಮುಖಂಡ ಎಚ್ಚರಿಕೊಟ್ಟಿದ್ದಾರೆ. ಇನ್ನು ಇದಕ್ಕೆ ಸಚಿನ್‌ ಪೈಲಟ್‌ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಪೈಲಟ್​ಗೆ ಸಿಎಂ ಸ್ಥಾನ ನೀಡದಿದ್ರೆ ಭಾರತ್‌ ಜೋಡೋ ಯಾತ್ರೆ ನಿಲ್ಲಿಸುತ್ತೇವೆ: ಗುರ್ಜಾರ್ ಮುಖಂಡನ ಎಚ್ಚರಿಕೆಗೆ ಸಚಿನ್‌ ತೀಕ್ಷ್ಣ ಪ್ರತಿಕ್ರಿಯೆ
Sachin Pilot and Rahul Gandh
TV9kannada Web Team

| Edited By: Ramesh B Jawalagera

Nov 23, 2022 | 9:34 PM

ಜೈಪುರ್: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು ಇದೇ ಡಿಸೆಂಬರ್ 3ರಂದು ರಾಜಸ್ಥಾನಕ್ಕೆ ಜಲಾವರ್‌ನಿಂದ ಪ್ರವೇಶಿಸಲಿದೆ. ಜಲಾವರ್, ಕೋಟಾ, ಬುಂಡಿ, ಸವೈಮಾಧೋಪುರ್, ದೌಸಾ ಮತ್ತು ಅಲ್ವಾರ್‌ನ ಭಾಗಗಳಲ್ಲಿ ಸುಮಾರು 20 ದಿನ ಯಾತ್ರೆ ನಡೆಯಲಿದೆ. ಆದ್ರೆ, ಭಾರತ್ ಜೋಡೋ ಯಾತ್ರೆ ರಾಜಸ್ಥಾನ ಪ್ರವೇಶಿಸಲು ಬಿಡುವುದಿಲ್ಲ ಎಂದು ಗುರ್ಜಾರ್ ಸಮುದಾಯದ ನಾಯಕ ಎಚ್ಚರಿಕೆ ಕೊಟ್ಟಿದ್ದಾರೆ.

ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಬೇಡಿಕೆಯನ್ನು ಕಾಂಗ್ರೆಸ್ ಹೈಕಮಾಂಡ್ ಒಪ್ಪದಿದ್ದಲ್ಲಿ ಭಾರತ್ ಜೋಡೋ ಯಾತ್ರೆ ರಾಜಸ್ಥಾನ ಪ್ರವೇಶಿಸಲು ಬಿಡುವುದಿಲ್ಲ ಎಂದು ಗುರ್ಜಾರ್ ಸಮುದಾಯದ ಪ್ರಭಾವಿ ಮುಖಂಡ ವಿಜಯ್ ಸಿಂಗ್ ಬೈಂಸ್ಲಾ ಎಚ್ಚರಿಸಿದ್ದಾರೆ.

ಇಂದು(ನ.23) ಗುರ್ಜರ್‌ ಸಮುದಾಯದ ಸದಸ್ಯರೊಂದಿಗಿನ ಸಭೆಯ ಬಳಿಕ ಬಿಡುಗಡೆ ಮಾಡಿರುವ ವಿಡಿಯೋ ಹೇಳಿಕೆಯಲ್ಲಿ ಮಾತನಾಡಿದ ಅವರು, ರಾಹುಲ್‌ ಗಾಂಧಿ ರಾಜಸ್ಥಾನಕ್ಕೆ ಗುರ್ಜರ್ ಮುಖ್ಯಮಂತ್ರಿಯ ಜೊತೆ ಅಥವಾ ಈ ಸಮಸ್ಯೆಗೆ ಉತ್ತರದೊಂದಿಗೆ ಭೇಟಿ ನೀಡಬೇಕು. 2018ರಲ್ಲಿ ಗುರ್ಜರ್ ಸಮುದಾಯದವರು ಮುಖ್ಯಮಂತ್ರಿ ಆಗ್ತಾರೆ ಎಂಬ ಭರವಸೆಯೊಂದಿಗೆ ಕಾಂಗ್ರೆಸ್‌ಗೆ ನಮ್ಮ ಸಮುದಾಯ ಮತ ಹಾಕಿದೆ. ನಾವು ಶಾಸಕರಿಗೆ ಮತ ಹಾಕಿಲ್ಲ. ಗುರ್ಜರ್‌ ಸಮುದಾಯದ ಸಿಎಂಗೆ ಮತ ಹಾಕಿದ್ದೇವೆ ಎಂದರು.

ಇನ್ನು ಭಾರತ್ ಜೋಡೋ ಯಾತ್ರೆ ಪೂರ್ವಭಾವಿ ಸಭೆಯ ಬಳಿಕ ವಿಜಯ್ ಸಿಂಗ್ ಬೈಂಸ್ಲಾ ಕೊಟ್ಟ ಎಚ್ಚರಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಸಚಿನ್ ಪೈಲೆಟ್, ಬಿಜೆಪಿ ಎಷ್ಟೇ ಪ್ರಯತ್ನ ಪಟ್ಟರೂ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಲಿದೆ. ಬಿಜೆಪಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿ ಅವರು, ಬಿಜೆಪಿ ಗಲಭೆ ಸೃಷ್ಟಿಸಲು ಪ್ರಯತ್ನಿಸಬಹುದು. ನಾವೆಲ್ಲರೂ ಒಗ್ಗಟ್ಟಿನಿಂದ ಯಾತ್ರೆಯನ್ನು ಸ್ವಾಗತಿಸಲಿದ್ದು, ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗುರ್ಜರ್ ಸಮುದಾಯವು ರಾಜಸ್ಥಾನದ ಒಟ್ಟು ಜನಸಂಖ್ಯೆಯ ಶೇ.5 ರಿಂದ ಶೇ.6ರಷ್ಟು ಪ್ರಮಾಣವನ್ನು ಹೊಂದಿದೆ. ಪ್ರಮುಖವಾಗಿ ಪೂರ್ವ ರಾಜಸ್ಥಾನದಲ್ಲಿ 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗುರ್ಜರ್‌ ಸಮುದಾಯ ಪ್ರಭಾವಶಾಲಿಯಾಗಿದೆ. ಗುರ್ಜರ್‌ ಸಮುದಾಯ ಹೆಚ್ಚಿರುವ ಪ್ರದೇಶದಲ್ಲಿ ಭಾರತ್‌ ಜೋಡೋ ಯಾತ್ರೆಯು ಹಾದು ಹೋಗಲಿದೆ.

ಒಟ್ಟಿನಲ್ಲಿ ಎಐಸಿಸಿ ಅಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ರಾಜಸ್ಥಾನ ಕಾಂಗ್ರೆಸ್​ನಲ್ಲಿ ಉಂಟಾಗಿದ್ದ​​ ಬಿಕ್ಕಟ್ಟು ಇನ್ನೂ ಶಮನವಾದಂತೆ ಕಾಣುತ್ತಿಲ್ಲ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಧ್ಯೆ ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡದಿದ್ದಲ್ಲಿ ಭಾರತ್ ಜೋಡೋ ಯಾತ್ರೆ ರಾಜಸ್ಥಾನ ಪ್ರವೇಶಿಸಲು ಬಿಡುವುದಿಲ್ಲ ಎಂದು ಗುರ್ಜಾರ್ ಸಮುದಾಯದ ನಾಯಕ ಎಚ್ಚರಿಕೆ ನೀಡಿದ್ದು, ಕಾಂಗ್ರೆಸ್​ನಲ್ಲಿ ಸಂಚಲನ ಮೂಡಿಸಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada