Same Sex Marriage: ಸಲಿಂಗ ವಿವಾಹ ವಿರೋಧಿಸಿ ಹಕ್ಕುಗಳನ್ನು ನಿರಾಕರಿಸಬೇಡಿ; ಸುಶೀಲ್ ಕುಮಾರ್ ಮೋದಿಗೆ ಅಕೈ ಪದ್ಮಶಾಲಿ ಪತ್ರ
Same Sex Marriage Debate; ಸಲಿಂಗ ವಿವಾಹವನ್ನು ಬಿಜೆಪಿ ವಿರೋಧಿಸುತ್ತದೆ ಎಂದು ಸುಶೀಲ್ ಮೋದಿ ಅವರು ಸಂಸತ್ನಲ್ಲಿ ಇತ್ತೀಚೆಗೆ ಹೇಳಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಬಹಿರಂಗ ಪತ್ರ ಬರೆದಿರುವ ಅಕೈ ಪದ್ಮಶಾಲಿ, ಕ್ಷಮೆಯಾಚಿಸುವಂತೆ ಸುಶೀಲ್ ಮೋದಿ ಅವರನ್ನು ಆಗ್ರಹಿಸಿದ್ದಾರೆ.

ನವದೆಹಲಿ: ಸಲಿಂಗ ವಿವಾಹವನ್ನು (Same Sex Marriage) ವಿರೋಧಿಸುವ ಮೂಲಕ ನಮ್ಮ ಹಕ್ಕುಗಳನ್ನು ನಿರಾಕರಿಸಬೇಡಿ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿಗೆ (Sushil Kumar Modi) ಲೈಂಗಿಕ ಅಲ್ಪಸಂಖ್ಯಾತರಾದ (LGBT) ಅಕೈ ಪದ್ಮಶಾಲಿ (Akkai Padmashali) ಹೇಳಿದ್ದಾರೆ. ಸಲಿಂಗ ವಿವಾಹವನ್ನು ಬಿಜೆಪಿ (BJP) ವಿರೋಧಿಸುತ್ತದೆ ಎಂದು ಸುಶೀಲ್ ಮೋದಿ ಅವರು ಸಂಸತ್ನಲ್ಲಿ ಇತ್ತೀಚೆಗೆ ಹೇಳಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಬಹಿರಂಗ ಪತ್ರ ಬರೆದಿರುವ ಅಕೈ ಪದ್ಮಶಾಲಿ, ಲೈಂಗಿಕ ಅಲ್ಪಸಂಖ್ಯಾತರ ಕಷ್ಟಗಳನ್ನು ತೋಡಿಕೊಂಡಿದ್ದಲ್ಲದೆ, ಕ್ಷಮೆ ಯಾಚಿಸುವಂತೆ ಸುಶೀಲ್ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
‘ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡುವುದರ ವಿರುದ್ಧ ನೀವು (ಸುಶೀಲ್ ಮೋದಿ) ರಾಜ್ಯಸಭೆಯಲ್ಲಿ ಆಡಿರುವ ಮಾತುಗಳಿಂದ ತೀವ್ರ ಆಘಾತವಾಗಿದೆ. ಎಲ್ಜಿಬಿಟಿಯಲ್ಲಿ ಒಬ್ಬಳಾಗಿರುವ ನಾನು ಮದುವೆಯಾಗುವ ಹಕ್ಕು ಕೇವಲ ಪುರುಷ ಮತ್ತು ಮಹಿಳೆಯರಿಗಷ್ಟೇ ಸೀಮಿತವಾಗಿ ಇರಬಾರದು ಎಂದು ಭಾವಿಸುತ್ತೇನೆ’ ಎಂದು ಪದ್ಮಶಾಲಿ ಅವರು ಮೂರು ಪುಟಗಳ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ನೀವು ಸಲಿಂಗ ವಿವಾಹವನ್ನು ವಿರೋಧಿಸುತ್ತೀರಿ. ಯಾಕೆಂದರೆ ನಿಮ್ಮ ದೃಷ್ಟಿಯಲ್ಲಿ ಮದುವೆ ಎಂಬುದು ಪುರುಷ ಮತ್ತು ಮಹಿಳೆಗಷ್ಟೇ ಸೀಮಿತವಾಗಿದೆ ಮತ್ತು ಅದು ಮಾತ್ರ ಪರಿಶುದ್ಧ ಎಂಬುದು ನಿಮ್ಮ ಭಾವನೆ. ಆದರೆ ಎಲ್ಜಿಬಿಟಿ ಆಂದೋಲನವು ಇದಕ್ಕೆ ವಿರುದ್ಧವಾಗಿದೆ. ಎಲ್ಲ ರೀತಿಯ ಲೈಂಗಿಕ ಅಲ್ಪಸಂಖ್ಯಾತರನ್ನೂ ಸಮಾನವಾಗಿ ನೋಡಬೇಕಿದೆ. ನನ್ನ ಉದಾಹರಣೆಯನ್ನೇ ತೆಗೆದುಕೊಳ್ಳಿ. ನಾನು ಪುರುನಾಗಿ ಜನಿಸಿದೆ. ಆದರೆ, ಸದಾ ಮಹಿಳೆಯಾಗಿ ಗುರುತಿಸಿಕೊಂಡೆ. ಅರಿವಿನ ಹೆಚ್ಚಳ, ಆತ್ಮವಿಶ್ವಾಸ ವೃದ್ಧಿ ಮತ್ತು ಸ್ವಂತ ಬಲದಿಂದ ನಾನೀಗ ಮಹಿಳೆಯಾಗಿ ಪರಿವರ್ತನೆ ಹೊಂದಿದ್ದೇನೆ. ಆದಾಗ್ಯೂ, ನಿಮ್ಮ ವ್ಯಾಖ್ಯಾನದ ಪ್ರಕಾರ ನಾನು ಜೈವಿಕವಾಗಿ ಮಹಿಳೆಯಲ್ಲ. ಹೀಗಾಗಿ ಮದುವೆಯಾಗಲು ಅರ್ಹಳಲ್ಲ. ಜೈವಿಕವಾಗಿ ಸ್ತ್ರೀಯರಲ್ಲದ ನಮ್ಮಂತಹವರಿಗೆ ಈ ನಿರಾಕರಣೆಯು ಸಮಾನತೆ ಮತ್ತು ಗೌರವಯುತ ಜೀವನವನ್ನು ನಡೆಸುವ ಹಕ್ಕನ್ನು ನಿರಾಕರಿಸಿದಂತೆ’ ಎಂದು ಅವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸಲಿಂಗಿಗಳು
ಕ್ಷಮೆಯಾಚಿಸಿ; ಸುಶೀಲ್ ಮೋದಿಗೆ ಪದ್ಮಶಾಲಿ ಆಗ್ರಹ
ನನ್ನಂತೆಯೇ ಜೈವಿಕವಾಗಿ ಪುರುಷರಲ್ಲದ, ಮಹಿಳೆಯೂ ಅಲ್ಲದ ಅನೇಕರಿದ್ದಾರೆ. ಜೈವಿಕವಾಗಿ ಪುರುಷ ಮತ್ತು ಮಹಿಳೆಯಾಗಿದ್ದರೆ ಮಾತ್ರ ಮದುವೆಯಾಗಬಹುದೇ? ಇದು ಸಮಾನತೆ, ಘನತೆ ಮತ್ತು ಒಳಗೊಳ್ಳುವಿಕೆಯ ನಮ್ಮ ಸಾಂವಿಧಾನಿಕ ಆಶಯವನ್ನು ಉಲ್ಲಂಘಿಸಿದಂತೆ ಅಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಟೀಕೆಗಳ ಮೂಲಕ ನೀವು ಎಲ್ಜಿಬಿಟಿ ಸಮುದಾಯಕ್ಕೆ ಉಂಟುಮಾಡಿದ ನೋವಿಗೆ ಸಮುದಾಯದ ಕ್ಷಮೆ ಯಾಚಿಸುವಂತೆ ಒತ್ತಾಯಿಸುತ್ತೇವೆ ಎಂದು ಅವರು ಉಲ್ಲೇಖಿಸಿದ್ದಾರೆ.
ಸಲಿಂಗ ವಿವಾಹದ ಬಗ್ಗೆ ಏನು ಹೇಳಿದ್ದರು ಸುಶೀಲ್ ಕುಮಾರ್ ಮೋದಿ?
ರಾಜ್ಯಸಭೆ ಕಲಾಪದ ಸಂದರ್ಭ ಶೂನ್ಯ ವೇಳೆಯಲ್ಲಿ ಮಾತನಾಡಿದ್ದ ಸುಶೀಲ್ ಕುಮಾರ್ ಮೋದಿ ಸಲಿಂಗ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಕೆಲವು ಮಂದಿ ಉದಾರವಾದಿಗಳು ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ದೊರಕಿಸಿಕೊಡಲು ಹೋರಾಟ ಮಾಡುತ್ತಿದ್ದಾರೆ. ಇಂಥ ಕಾನೂನು ರೂಪಿಸುವುದರಿಂದ ದೇಶದ ಸಂಸ್ಕೃತಿಗೆ ಧಕ್ಕೆಯಾಗಲಿದೆ. ಹೀಗಾಗಿ ಈ ವಿಚಾರವಾಗಿ ನ್ಯಾಯಾಂಗವು ಯಾವುದೇ ತೀರ್ಪು ನೀಡಬಾರದು ಎಂದು ಹೇಳಿದ್ದರು. ಜತೆಗೆ, ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ದೊರಕಿಸಿಕೊಡಲು ನಡೆಯುವ ಹೋರಾಟವನ್ನು ಸರ್ಕಾರ ತೀವ್ರವಾಗಿ ವಿರೋಧಿಸಬೇಕು. ಈ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಬೇಕು. ಬಿಜೆಪಿಯಂತೂ ಸಲಿಂಗ ವಿವಾಹವನ್ನು ಒಪ್ಪುವುದಿಲ್ಲ ಎಂದು ಹೇಳಿದ್ದರು.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:05 pm, Sat, 24 December 22