ನವದೆಹಲಿ: ಎನ್ಸಿಬಿಯ ಮಾಜಿ ಅಧಿಕಾರಿ ಸಮೀರ್ ವಾಂಖೆಡೆ (Sameer Wankhede) ಮೂಲತಃ ಮುಸ್ಲಿಂ ಆಗಿದ್ದು, ಅವರು ನಕಲಿ ಜಾತಿ ಪ್ರಮಾಣಪತ್ರ ನೀಡಿ ಮೀಸಲಾತಿ ಕೋಟಾದಡಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ ಎಂದು ಮಹಾರಾಷ್ಟ್ರದ ಮಾಜಿ ಸಚಿವ ನವಾಬ್ ಮಲಿಕ್ ಆರೋಪಿಸಿದ್ದರು. ಆದರೆ, ಈ ಆರೋಪದಲ್ಲಿ ಸಮೀರ್ ವಾಂಖೆಡೆಗೆ ಜಾತಿ ಪರಿಶೀಲನಾ ಸಮಿತಿಯಿಂದ ಕ್ಲೀನ್ಚಿಟ್ ಸಿಕ್ಕಿದೆ. ಸಮೀರ್ ವಾಂಖೆಡೆ ಜನ್ಮತಃ ಮುಸ್ಲಿಂ ಅಲ್ಲ. ಅವರು ಮೂಲತಃ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಸಮೀರ್ ವಾಂಖೆಡೆ ಹಾಗೂ ಅವರ ತಂದೆ ಧ್ಯಾನೇಶ್ವರ್ ವಾಂಖೆಡೆ ಮುಸ್ಲಿಂ ಧರ್ಮಕ್ಕೆ ಮತಾಂತರದ ಯಾವುದೇ ಸಾಕ್ಷ್ಯ ಇಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಮುಂಬೈ ಎನ್‌ಸಿಬಿ ಮಾಜಿ ನಿರ್ದೇಶಕ ಸಮೀರ್ ವಾಂಖೆಡೆ ಜಾತಿ ಪರಿಶೀಲನಾ ಸಮಿತಿಯಿಂದ ಕ್ಲೀನ್ ಚಿಟ್ ಪಡೆದಿದ್ದಾರೆ. ಸಮೀರ್ ವಾಂಖೆಡೆ ಜನ್ಮತಃ ಮುಸ್ಲಿಂ ಅಲ್ಲ. ಅವರು ಮತ್ತು ಅವರ ತಂದೆ ಇಸ್ಲಾಂಗೆ ಮತಾಂತರಗೊಂಡಿರುವುದು ಸಾಬೀತಾಗಿಲ್ಲ. ಅವರು ಪರಿಶಿಷ್ಟ ಮಹಾರ್-37 ಸಮುದಾಯಕ್ಕೆ ಸೇರಿದವರು ಎಂಬುದು ಸಾಬೀತಾಗಿದೆ ಎಂದು ಜಾತಿ ಪರಿಶೀಲನಾ ಸಮಿತಿಯ ವರದಿಯಲ್ಲಿ ಹೇಳಲಾಗಿದೆ.
ಸದ್ಯಕ್ಕೆ ಮಹಾರಾಷ್ಟ್ರದಲ್ಲಿ ಅಧಿಕಾರ ಬದಲಾವಣೆ ಆಗಿದೆ. ಉದ್ಧವ್ ಠಾಕ್ರೆಯವರ ಸರ್ಕಾರ ಕೆಳಗುರುಳಿ, ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿದ್ದಾರೆ. ಮಹಾ ವಿಕಾಸ್ ಅಘಾಡಿ ಸರ್ಕಾರದ ಅವಧಿಯಲ್ಲಿ ಸಮೀರ್ ವಾಂಖೆಡೆ ಅವರ ನಿಖರವಾದ ಜಾತಿಯ ಬಗ್ಗೆ ಅವರು ಮುಸ್ಲಿಮರೆಂದು, ದಲಿತರೆಂದು ಅನೇಕ ವಾದಗಳನ್ನು ಮಾಡಲಾಗಿತ್ತು. ನವಾಬ್ ಮಲಿಕ್ ಈ ವಿಷಯವನ್ನು ಮುಂದಿಟ್ಟುಕೊಂಡು ಸಮೀರ್ ವಾಂಖೆಡೆ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಆದರೆ ಇದೀಗ ವಾಂಖೆಡೆಗೆ ಕ್ಲೀನ್ ಚಿಟ್ ಸಿಕ್ಕಿದೆ.
ಇದನ್ನೂ ಓದಿ: Nawab Malik: ಸಮೀರ್ ವಾಂಖೆಡೆ ವಿರುದ್ಧದ ಹೇಳಿಕೆಗೆ ಬಾಂಬೆ ಹೈಕೋರ್ಟ್ಗೆ ಬೇಷರತ್ ಕ್ಷಮೆ ಯಾಚಿಸಿದ ನವಾಬ್ ಮಲಿಕ್
ನಕಲಿ ಜಾತಿ ಪ್ರಮಾಣ ಪತ್ರ ತೋರಿಸಿ ಸಮೀರ್ ವಾಂಖೆಡೆ ಕೆಲಸ ಗಿಟ್ಟಿಸಿಕೊಂಡಿದ್ದಾರೆ ಎಂದು ಅಂದಿನ ಅಲ್ಪಸಂಖ್ಯಾತ ಸಚಿವ ನವಾಬ್ ಮಲಿಕ್ ಆರೋಪಿಸಿದ್ದರು. ಸಮೀರ್ ವಾಂಖೆಡೆ ಮುಸ್ಲಿಂ. ಆದರೆ, ದಲಿತನೆಂಬ ನಕಲಿ ಜಾತಿ ಸರ್ಟಿಫಿಕೇಟ್ ತೋರಿಸಿ ಮೀಸಲಾತಿ ಲಾಭ ಪಡೆದು ಕೆಲಸ ಗಿಟ್ಟಿಸಿಕೊಂಡಿದ್ದಾರೆ ಎಂದು ನವಾಬ್ ಮಲಿಕ್ ಹೇಳಿದ್ದರು.
Caste scrutiny committee gives clean chit to ex-NCB Zonal Director Sameer Wankhede. The order reads that Wankhede wasn’t a Muslim by birth; also states that it’s not proven that Wankhede&his father converted to Islam but it’s proven that they belonged to Mahar -37 Scheduled Caste pic.twitter.com/XcOEcKvB8d
— ANI (@ANI) August 13, 2022
ಸಮೀರ್ ವಾಂಖೆಡೆ ಅವರ ಜಾತಿ ಪ್ರಮಾಣ ಪತ್ರವನ್ನು ಮುಂಬೈ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಪರಿಶೀಲಿಸಿತ್ತು. ಸಮೀರ್ ವಾಂಖೆಡೆ ಸಲ್ಲಿಸಿರುವ ದಾಖಲೆಗಳನ್ನೂ ಪರಿಶೀಲಿಸಲಾಗಿತ್ತು. ಈ ಎಲ್ಲಾ ಪರಿಶೀಲನೆಯ ನಂತರ ಜಾತಿ ಪರಿಶೀಲನಾ ಸಮಿತಿಯು ಸಮೀರ್ ವಾಂಖೆಡೆ ಮುಸ್ಲಿಂ ಎಂದು ಪತ್ತೆ ಮಾಡಿತ್ತು. ಇದರಿಂದಾಗಿ ಏಪ್ರಿಲ್ 29ರಂದು ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಸಮೀರ್ ವಾಂಖೆಡೆ ಅವರ ಜಾತಿ ಪ್ರಮಾಣ ಪತ್ರವನ್ನು ಏಕೆ ಮುಟ್ಟುಗೋಲು ಹಾಕಿಕೊಳ್ಳಬಾರದು ಅಥವಾ ರದ್ದುಗೊಳಿಸಬಾರದು ಎಂದು ಕೋರಿ ಸಮೀರ್ ವಾಂಖೆಡೆ ಅವರಿಗೆ ಶೋಕಾಸ್ ನೋಟಿಸ್ ಕಳುಹಿಸಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ಜಾತಿ ಪರಿಶೀಲನಾ ಸಮಿತಿಯಿಂದ ಸಮೀರ್ ವಾಂಖೆಡೆ ಕ್ಲೀನ್ ಚಿಟ್ ಪಡೆದಿದ್ದಾರೆ.
ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ನನ್ನು ಬಂಧಿಸಿದ ನಂತರ ಸಮೀರ್ ವಾಂಖೆಡೆ ವಿರುದ್ಧ ಆರೋಪಗಳು ಕೇಳಿಬಂದಿತ್ತು. ಸಮೀರ್ ವಾಂಖೆಡೆ ವಿರುದ್ಧದ ನಕಲಿ ಜಾತಿ ಪ್ರಮಾಣಪತ್ರ ಪ್ರಕರಣದ ತನಿಖೆ ನಡೆಸುವುದಾಗಿ ಅಂದಿನ ಮಹಾರಾಷ್ಟ್ರ ಸರ್ಕಾರ ಹೇಳಿತ್ತು. ಇತ್ತೀಚೆಗಷ್ಟೇ ಆರ್ಯನ್ ಖಾನ್ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಸಿಗದ ಕಾರಣ ಕ್ಲೀನ್ ಚಿಟ್ ನೀಡಲಾಗಿತ್ತು.
Published On - 1:40 pm, Sat, 13 August 22