ಖಡಕ್ ಅಧಿಕಾರಿ ಸಮೀರ್ ವಾಂಖೆಡೆಗೆ ಶಾಕ್ ಕೊಟ್ಟ ಎನ್ಸಿಬಿ; ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ ವಾಪಸ್
Sameer Wankhede: ತಮ್ಮ ವಿರುದ್ಧದ ಆರೋಪಗಳಿಗೆಲ್ಲ ಸಮೀರ್ ವಾಂಖೆಡೆ ದಿಟ್ಟವಾಗಿ ಉತ್ತರ ಕೊಡುತ್ತಲೇ ಬಂದಿದ್ದರು. ತಮ್ಮ ವೈಯಕ್ತಿಕ ವಿಚಾರಕ್ಕೆ ಬರಬೇಡಿ ಎಂದು ಎನ್ಸಿಪಿ ನಾಯಕನಿಗೆ ತಿರುಗೇಟು ನೀಡಿದ್ದರು.
ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (NCB)ದ ಮುಂಬೈ ವಲಯ ನಿರ್ದೇಶಕರಾಗಿದ್ದ, ಇತ್ತೀಚೆಗೆ ಒಂದಷ್ಟು ವಿವಾದದ ಸುಳಿಗೆ ಸಿಲುಕಿದ್ದ ಖಡಕ್ ಐಆರ್ಎಸ್ ಅಧಿಕಾರಿ (Indian Revenue Service) ಸಮೀರ್ ವಾಂಖೆಡೆಯವರ ಆಡಳಿತ ಅವಧಿ ಎನ್ಸಿಬಿಯಲ್ಲಿ ಮುಕ್ತಾಯವಾಗಿದ್ದು, ಅವರೀಗ ಕಂದಾಯ ಗುಪ್ತಚರ ನಿರ್ದೇಶನಾಲಯ (Directorate of Revenue Intelligence)ಕ್ಕೆ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ. ಎನ್ಸಿಬಿಯಲ್ಲಿ ವಾಂಖೆಡೆ ಅಧಿಕಾರ ಅವಧಿ 2021ರ ಡಿಸೆಂಬರ್ 31ಕ್ಕೆ ಅಂತ್ಯಗೊಂಡಿದೆ. ಇಲ್ಲಿ ಅವಧಿ ವಿಸ್ತರಣೆ ಮಾಡಿಕೊಡುವಂತೆ ಅವರು ಯಾವುದೇ ಮನವಿ ಸಲ್ಲಿಸಲಿಲ್ಲ. ಹೀಗಾಗಿ ಇಲ್ಲಿನ ಹುದ್ದೆಯಿಂದ ಮುಕ್ತಿ ನೀಡಲಾಗಿದೆ. ಅವರು ಡಿಆರ್ಐಗೆ ರಿಪೋರ್ಟ್ ಮಾಡಿಕೊಳ್ಳಬೇಕಾಗುತ್ತದೆ ಎಂದು ಎನ್ಸಿಬಿ ಪ್ರಕಟಣೆ ಹೊರಡಿಸಿದೆ. 2008ನೇ ಬ್ಯಾಚ್ನ ಐಆರ್ಎಸ್ ಅಧಿಕಾರಿಯಾಗಿದ್ದ ಅವರು, 2020ರ ಸೆಪ್ಟೆಂಬರ್ನಿಂದ ಎನ್ಸಿಬಿಯಲ್ಲಿ ಕೆಲಸ ಮಾಡುತ್ತಿದ್ದರು.
ಕಳೆದ ವರ್ಷ ಮುಂಬೈ-ಗೋವಾ ಐಷಾರಾಮಿ ಹಡಗಿನಲ್ಲಿ ನಡೆದ ಡ್ರಗ್ಸ್ ಪಾರ್ಟಿ ಮೇಲೆ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಕೂಡ ಸಿಕ್ಕಿಬಿದ್ದಿದ್ದರು. ಹೀಗೆ ಆರ್ಯನ್ ಖಾನ್ ಮತ್ತು ಇತರ 20 ಮಂದಿಯನ್ನು ಪ್ರಸ್ತುತ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಇದರಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದು ಇದೇ ಸಮೀರ್ ವಾಂಖೆಡೆ. ಆದರೆ ಅಂದಿನಿಂದಲೂ ಸಮೀರ್ ವಾಂಖೆಡೆ ಸುತ್ತಲೂ ವಿವಾದ ಹರಿದಾಡುತ್ತಲೇ ಇದೆ. ಎನ್ಸಿಪಿ ನಾಯಕ, ಸಚಿವ ನವಾಬ್ ಮಲ್ಲಿಕ್ ಅಂತೂ ಸಮೀರ್ ವಿರುದ್ಧ ಇನ್ನಿಲ್ಲದಷ್ಟು ಆರೋಪಗಳನ್ನು ಮಾಡಿದ್ದರು. ಸಮೀರ್ ವಾಂಖಡೆ ಜಾತಿಯ ಬಗ್ಗೆಯೂ ಮಾತುಗಳನ್ನಾಡಿದ್ದರು. ಶಾರುಖ್ ಪುತ್ರನ ಬಂಧನಕ್ಕೆ ಸಂಬಂಧಪಟ್ಟಂತೆ ಎನ್ಸಿಬಿ ಬಳಸಿದ ಸ್ವತಂತ್ರ್ಯ ಸಾಕ್ಷಿಯ ಬಗ್ಗೆ ಪ್ರಶ್ನೆ ಮಾಡಿದ್ದರು. ಇನ್ನು ಆರ್ಯನ್ ಖಾನ್ ಪ್ರಕರಣ ಮುಚ್ಚಿ ಹಾಕಲು, ಸಮೀರ್ ವಾಂಖಡೆ ಖಾಸಗಿ ಗುಪ್ತಚರ ಗೋಸಾವಿ ಎಂಬುವನ ಮೂಲಕ 25 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪವನ್ನೂ ಸಹ ಗೋಸಾವಿ ಸಹಚರನೊಬ್ಬ ಮಾಡಿದ್ದ. ಈ ಗೋಸಾವಿ ಆರ್ಯನ್ ಖಾನ್ ಜತೆ ಸೆಲ್ಫೀ ತೆಗೆಸಿಕೊಂಡಿದ್ದ ಫೋಟೋಗಳೂ ವೈರಲ್ ಆಗಿದ್ದವು.
ಆರೋಪ ನಿರಾಕರಿಸುತ್ತ ಬಂದಿದ್ದ ಸಮೀರ್ ವಾಂಖೆಡೆ ತಮ್ಮ ವಿರುದ್ಧದ ಆರೋಪಗಳಿಗೆಲ್ಲ ಸಮೀರ್ ವಾಂಖೆಡೆ ದಿಟ್ಟವಾಗಿ ಉತ್ತರ ಕೊಡುತ್ತಲೇ ಬಂದಿದ್ದರು. ತಮ್ಮ ವೈಯಕ್ತಿಕ ವಿಚಾರಕ್ಕೆ ಬರಬೇಡಿ ಎಂದು ಎನ್ಸಿಪಿ ನಾಯಕನಿಗೆ ತಿರುಗೇಟು ನೀಡಿದ್ದರು. ಹಾಗೇ, ನನ್ನ ವಿರುದ್ಧ ವೃಥಾ ಆರೋಪ ಮಾಡಲಾಗುತ್ತಿದೆ. ನಾನು ಹಣಕ್ಕೆ ಬೇಡಿಕೆಯಿಟ್ಟಿಲ್ಲ. ಸುಲಿಗೆಯನ್ನೂ ಮಾಡಿಲ್ಲ. ಪ್ರಾಮಾಣಿಕವಾಗಿ ತನಿಖೆ ನಡೆಸುತ್ತಿದ್ದ ನನ್ನ ವಿರುದ್ಧ ಕುತಂತ್ರ ಮಾಡಲಾಗಿದೆ ಎಂದು ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಮುಖ ರಾಜಕಾರಣಿಯ ಸಂಬಂಧಿಯೊಬ್ಬರನ್ನು ಡ್ರಗ್ಸ್ ಕೇಸ್ನಲ್ಲಿ ಬಂಧಿಸಿದ್ದೆ, ಆ ದ್ವೇಷ ತೀರಿಸಿಕೊಳ್ಳಲು ಹೀಗೆಲ್ಲ ಮಾಡಲಾಗುತ್ತಿದೆ ಎಂದಿದ್ದರು. ಆದರೆ ಆ ವಿಶೇಷ ನ್ಯಾಯಾಲಯ ಅರ್ಜಿ ವಿಚಾರಣೆ ನಡೆಸದೆ, ಹೈಕೋರ್ಟ್ಗೆ ಹೋಗುವಂತೆ ಸೂಚಿಸಿತ್ತು. ಇದೆಲ್ಲದ ಮಧ್ಯೆ ಸಮೀರ್ ವಾಂಖೆಡೆಯನ್ನು ಆರ್ಯನ್ ಖಾನ್ ಡ್ರಗ್ಸ್ ಕೇಸ್ ವಿಚಾರಣೆ, ತನಿಖೆ ಕೇಸ್ನಿಂದ ದೂರ ಇಡಲಾಗಿತ್ತು.
ಇದನ್ನೂ ಓದಿ: 15 ನಿಮಿಷಗಳ ಅಂತರದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ; ಮಕ್ಕಳು ಜನಿಸಿದ್ದು ಮಾತ್ರ ಬೇರೆ ಬೇರೆ ವರ್ಷದಲ್ಲಿ!