Sasikala Returns to Tamil Nadu: ಕಿಕ್ಕಿರಿದು ತುಂಬಿದ ಅಭಿಮಾನಿಗಳಿಂದ ಹೂಮಳೆ, ದಾರಿಯುದ್ದಕ್ಕೂ ಶಶಿಕಲಾಗೆ ಭರ್ಜರಿ ಸ್ವಾಗತ

ನಾಲ್ಕು ವರ್ಷಗಳ ಜೈಲು ವಾಸ ಮುಗಿಸಿ ತಮಿಳರ ಚಿನ್ನಮ್ಮ ಶಶಿಕಲಾ ನಟರಾಜನ್ ಚೆನ್ನೈಗೆ ಎಂಟ್ರಿ ಕೊಟ್ಟಿದ್ದಾರೆ. ಶಶಿಕಲಾ ಎಂಟ್ರಿ ಕೊಟ್ಟ ರೇಂಜ್‌ ಹೇಗಿತ್ತು ಅಂದ್ರೆ, ದ್ರಾವಿಡ ರಾಜ್ಯದ ರಾಜಕೀಯದಲ್ಲಿ ಬಿರುಗಾಳಿಯೇ ಎದ್ದಿದೆ.

Sasikala Returns to Tamil Nadu: ಕಿಕ್ಕಿರಿದು ತುಂಬಿದ ಅಭಿಮಾನಿಗಳಿಂದ ಹೂಮಳೆ, ದಾರಿಯುದ್ದಕ್ಕೂ ಶಶಿಕಲಾಗೆ ಭರ್ಜರಿ ಸ್ವಾಗತ
VK ಶಶಿಕಲಾ ನಟರಾಜನ್
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 10, 2021 | 3:04 PM

ಬೆಂಗಳೂರು: ಹೆಜ್ಜೆ ಹೆಜ್ಜೆಗೂ ಹೂಮಳೆ.. ದಾರಿಯುದ್ದಕ್ಕೂ ಸಾಲುಗಟ್ಟಿ ನಿಂತಿದ್ದ ಜನಸ್ತೋಮ.. ಅಮ್ಮಾ ವಾಳ್ಗೆ.. ಅಮ್ಮಾ ವಾಳ್ಗೆ ಅನ್ನೋ ಉದ್ಘೋಷ. ದೇವನಹಳ್ಳಿಯ ರೆಸಾರ್ಟ್‌ನಿಂದ ಶುರುವಾದ ತಮಿಳರ ಚಿನ್ನಮ್ಮ ಶಶಿಕಲಾ ಮೆರವಣಿಗೆ, ಚೆನ್ನೈ ತಲುಪುವವರೆಗೆ ರಾತ್ರಿಯೆಲ್ಲಾ ಬಿಡುವಿಲ್ಲದೆ ಸಾಗಿತ್ತು. ಮಧ್ಯರಾತ್ರಿ ಒಂದು ಗಂಟೆ ಕಳೆಯಿತು. ಎರಡು ಗಂಟೆ ಕಳೆಯಿತು, ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಬೆಂಬಲಿಗರ ಸಾಲು ಕಡಿಮೆ ಆಗಲೇ ಇಲ್ಲ. ಅದೇನು ಅಬ್ಬರ, ಅದೇನು ಆರ್ಭಟ.. ಶಶಿಕಲಾ ತಮಿಳುನಾಡಿಗೆ ಎಂಟ್ರಿ ಕೊಟ್ಟಿದ್ದೇ ಒಂದು ರೋಚಕ ದೃಶ್ಯ. ನಿನ್ನೆ ಬೆಳಗ್ಗೆ 8ಗಂಟೆಯ ವೇಳೆಗೆ ದೇವನಹಳ್ಳಿಯ ರೆಸಾರ್ಟ್‌ನಿಂದ ಹೊರಟ ಶಶಿಕಲಾ, ಇಡೀ ರಾತ್ರಿ ರೋಡ್‌ ಶೋ ನಡೆಸಿದ್ರು. ಪ್ರತಿ ಏರಿಯಾದಲ್ಲೂ ಹೂಮಳೆ, ಜನಸಾಗರ. ಎಲ್ಲಿ ನೋಡಿದ್ರೂ ಜೈಕಾರ ಕಂಡು ಬರುತ್ತಿತ್ತು.

ಇಡೀ ದಿನ ತಮಿಳರ ‘ಚಿನ್ನಮ್ಮ’ ಶಶಿಕಲಾ ‘ಮೆರವಣಿಗೆ’
ತಮಿಳುನಾಡಿನಲ್ಲಿ ಶಶಿಕಲಾ ಮೆರವಣಿಗೆಗೆ ಅವಕಾಶವಿರಲ್ಲ, ಸರಳವಾಗಿ ಹೋಗಬೇಕಾಗುತ್ತೆ ಎನ್ನಲಾಗ್ತಿತ್ತು. ಆದ್ರೆ, ಆ ಎಲ್ಲಾ ಸುದ್ದಿಗಳೂ ಸುಳ್ಳಾಗಿವೆ. ದಾರಿಯುದ್ದಕ್ಕೂ ಒಂದು ರೀತಿಯ ಉತ್ಸವ ನಡೀದಿದೆ. ಪೂಜೆ ಪುನಸ್ಕಾರ, ಆರತಿ, ಪಟಾಕಿ ಸಿಡಿತ. ಅಮ್ಮನ ಉತ್ತರಾಧಿಕಾರಿ ನಾನೇ ಎನ್ನುತ್ತಿರುವ ಶಶಿಕಲಾ, ಎದುರಾಳಿ ಪಡೆಗೆ ದೊಡ್ಡ ಸಂದೇಶವನ್ನೇ ರವಾನೆ ಮಾಡಿದ್ದಾರೆ.

ಇನ್ನು ಕಾರಿನ ಮೇಲೆ AIADMK ಬಾವುಟ ಹಾಕಿಕೊಂಡಿದ್ದಕ್ಕೆ ಪೊಲೀಸರು ಅಡ್ಡಿಪಡಿಸಿದರು. ಶಶಿಕಲಾರ ಕಾರನ್ನ ತಡೆದಾಗ, ಕೆಲಕಾಲ ಗೊಂದಲ ಉಂಟಾಯಿತು. ನಂತರ, ಕಾರನ್ನೇ ಬದಲಾಯಿಸಿ ಚಿನ್ನಮ್ಮ ಟಾಂಗ್​ ಕೊಟ್ರು. ಎಐಎಡಿಎಂಕೆ ಬಾವುಟವಿರೋ ಅದೇ ಪಕ್ಷದ ಸದಸ್ಯನ ಕಾರನ್ನು ಶಶಿಕಲಾ ಹತ್ತುತ್ತಿದ್ದಂತೆ, ಪೊಲೀಸರು ತೆಪ್ಪಗಾದ್ರು.

ಹಾಗೇ, ಚಿನ್ನಮ್ಮಗೆ ಭರ್ಜರಿ ಸ್ವಾಗತ ಕೋರಲು ಬೆಂಬಲಿಗರು ಪಟಾಕಿ ತಂದಿದ್ರು. ಆದ್ರೆ, ಕಾರಿನಲ್ಲಿದ್ದ ಪಟಾಕಿ ಸಿಡಿದು ಎರಡು ಕಾರುಗಳು ಭಸ್ಮವಾಗಿವೆ. ರಸ್ತೆ ಬದಿಯಲ್ಲೇ ಬೆಂದು ಹೋದವು. ಇನ್ನು, ರಸ್ತೆ ಮಧ್ಯೆ ಅಡ್ಡಲಾಗಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು ನುಗ್ಗಿದ್ದಾರೆ.

ರಾತ್ರಿ 9.30ರ ಸುಮಾರಿಗೆ ರಾಣಿಪೇಟೆ ಜಿಲ್ಲೆಯ ಆರ್ಕಟ್‌ನಲ್ಲಿ ಊಟಕ್ಕೆಂದು ಎ2ಬಿ ಹೋಟೆಲ್‌ ಬಳಿ ಕಾರು ನಿಲ್ಲಿಸಿದ್ರು. ಟಿಟಿ ವಾಹನ ಹತ್ತಿ ಊಟ ಮಾಡಿದ್ರು. ಊಟ ಮಾಡಿ ರಾತ್ರಿ ಒಂದು ಗಂಟೆಯ ಸುಮಾರಿಗೆ ಕಾಂಚೀಪುರಂ ತಲುಪಿದ್ರು. ಎರಡು ಗಂಟೆಯ ಸುಮಾರಿಗೆ ಶ್ರೀಪೆರಂಬದೂರು ತಲುಪಿದ್ರು. ಅಲ್ಲೂ ಕೂಡಾ ಜನಸ್ತೋಮ ಶಶಿಕಲಾ ಕಾರಿಗೆ ಮುಗಿಬಿತ್ತು.

ಒಟ್ನಲ್ಲಿ, ನಾಲ್ಕು ವರ್ಷದ ಬಳಿಕ ಶಶಿಕಲಾ ಭರ್ಜರಿಯಾಗೇ ತಮಿಳುನಾಡಿಗೆ ಎಂಟ್ರಿಕೊಟ್ಟಿದ್ದಾರೆ. ವಿಧಾನಸಭೆ ಚುನಾವಣೆ ಹೊತ್ತಲ್ಲಿ ಜಯಲಲಿತಾ ಆಪ್ತೆ ಆಗಮಿಸಿದ್ದು, ನೆರೆ ರಾಜ್ಯದಲ್ಲಿ ರಾಜಕೀಯ ಬಿರುಗಾಳಿ ಎದ್ದಿದೆ.

Sasikala: ದ್ರಾವಿಡ ನಾಡಿನಲ್ಲಿ ಸಂಚಲನ ಸೃಷ್ಟಿಸಿದ ಚಿನ್ನಮ್ಮ; ಶಶಿಕಲಾ ಮುಂದಿನ ಪ್ಲ್ಯಾನ್‌ ಏನು?

Published On - 7:26 am, Tue, 9 February 21