ಆಪರೇಶನ್​ ಗಂಗಾ; ಉಕ್ರೇನ್​​ನಿಂದ ಮಧ್ಯರಾತ್ರಿ ಆಗಮಿಸಿದ 250 ಭಾರತೀಯರು; ಮುಂಜಾನೆಯೇ ಬುಡಾಪೆಸ್ಟ್​​ನಿಂದ ಹೊರಟಿದೆ ಇನ್ನೊಂದು ಫ್ಲೈಟ್​

ಉಕ್ರೇನ್​​ನ ವಾಯುಮಾರ್ಗಗಳೆಲ್ಲ ಕ್ಲೋಸ್ ಆದ ಕಾರಣ ಅಲ್ಲಿರುವ ಭಾರತೀಯರು ಉಕ್ರೇನ್​-ರೊಮೇನಿಯಾ ಮತ್ತು ಉಕ್ರೇನ್​-ಹಂಗೇರಿ  ಗಡಿಭಾಗಗಳಿಗೆ ರಸ್ತೆ ಮಾರ್ಗದ ಮೂಲಕ ಆಗಮಿಸುತ್ತಿದ್ದಾರೆ.

ಆಪರೇಶನ್​ ಗಂಗಾ; ಉಕ್ರೇನ್​​ನಿಂದ ಮಧ್ಯರಾತ್ರಿ ಆಗಮಿಸಿದ 250 ಭಾರತೀಯರು; ಮುಂಜಾನೆಯೇ ಬುಡಾಪೆಸ್ಟ್​​ನಿಂದ ಹೊರಟಿದೆ ಇನ್ನೊಂದು ಫ್ಲೈಟ್​
ಬುಡಾಪೆಸ್ಟ್​​ನಿಂದ ಹೊರಟ ಮೂರನೇ ವಿಮಾನದಲ್ಲಿದ್ದ ಭಾರತೀಯರು (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Lakshmi Hegde

Updated on: Feb 27, 2022 | 9:30 AM

ಯುದ್ಧಭೂಮಿ ಉಕ್ರೇನ್​​ನಿಂದ ಭಾರತೀಯರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗುತ್ತಿದೆ. 250 ಭಾರತೀಯರನ್ನು ಹೊತ್ತ ಏರ್​ ಇಂಡಿಯಾದ ವಿಮಾನವು ರೊಮೇನಿಯಾದ ರಾಜಧಾನಿ ಬುಕಾರೆಸ್ಟ್​​ನಿಂದ ಇಂದು ಮುಂಜಾನೆ ದೆಹಲಿಗೆ ಬಂದು ತಲುಪಿದೆ. ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಉಕ್ರೇನ್​​ನಿಂದ ಬಂದವರನ್ನು ಗುಲಾಬಿ ಹೂವು ಕೊಟ್ಟು ಸ್ವಾಗತಿಸಿದ್ದಾರೆ. ಹಾಗೇ, ಹಂಗೇರಿಯ ಬುಡಾಪೆಸ್ಟ್​​ನಿಂದ ಇನ್ನೊಂದು ವಿಮಾನವೂ ಹೊರಟಿದ್ದು, ಅದರಲ್ಲಿ 240 ಮಂದಿ ಭಾರತೀಯರು ಇದ್ದಾರೆ. ಈ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​.ಜೈಶಂಕರ್​ ಟ್ವೀಟ್​ ಮಾಡಿ, ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಇಂದು ಮುಂಜಾನೆ ವಿಮಾನ ಹೊರಟಿದ್ದು, ರಾತ್ರಿ ಹೊತ್ತಿಗೆ ದೆಹಲಿ ತಲುಪಲಿದೆ. ಉಕ್ರೇನ್​​ನಿಂದ ಭಾರತೀಯರನ್ನು ರಕ್ಷಿಸಿ ಕರೆತರುವ ಕಾರ್ಯಾಚರಣೆಗೆ ಆಪರೇಶನ್​ ಗಂಗಾ ಎಂದು ಹೆಸರಿಡಲಾಗಿದೆ.

ಉಕ್ರೇನ್​ ಮೇಲೆ ರಷ್ಯಾ ಸಮರ ಸಾರಿದ ಬೆನ್ನಲ್ಲೇ ಅಲ್ಲಿ ವಾಯುಮಾರ್ಗಗಳೆಲ್ಲ ಕ್ಲೋಸ್ ಆಗಿವೆ. ಹಾಗಿದ್ದಾಗ್ಯೂ ಭಾರತ ಸರ್ಕಾರ ಅಲ್ಲಿರುವ ನಮ್ಮ ದೇಶದವರ ರಕ್ಷಣೆಗೆ ಪರ್ಯಾಯ ವ್ಯವಸ್ಥೆ ಮಾಡಿದೆ. ಹೀಗಾಗಿ ರೋಮೇನಿಯಾ, ಹಂಗೇರಿಗಳಿಂದ ವಿಮಾನ ವ್ಯವಸ್ಥೆ ಮಾಡಲಾಗಿದೆ. ಅಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೂ ನಿರಂತರವಾಗಿ ಶ್ರಮಿಸುತ್ತಿದೆ. ಉಕ್ರೇನ್​​ನಲ್ಲಿರುವ ಭಾರತೀಯರನ್ನು ಕರೆತರಲು ಮೊದಲು ಹೋದ ಏರ್​ ಇಂಡಿಯಾ ವಿಮಾನ AI1944. ಇದರಲ್ಲಿ 219 ಮಂದಿ ವಾಪಸ್​ ಬಂದಿದ್ದಾರೆ. ಎರಡನೇ ವಿಮಾನ  AI1942 ಆಗಿದ್ದು, 250 ಭಾರತೀಯರು ವಾಪಸ್ ಬಂದಿದ್ದಾರೆ. ಮೂರನೇ ವಿಮಾನ AI1940ರಲ್ಲಿ 240 ಜನರು ಆಗಮಿಸುತ್ತಿದ್ದಾರೆ.

ಉಕ್ರೇನ್​​ನ ವಾಯುಮಾರ್ಗಗಳೆಲ್ಲ ಕ್ಲೋಸ್ ಆದ ಕಾರಣ ಅಲ್ಲಿರುವ ಭಾರತೀಯರು ಉಕ್ರೇನ್​-ರೊಮೇನಿಯಾ ಮತ್ತು ಉಕ್ರೇನ್​-ಹಂಗೇರಿ  ಗಡಿಭಾಗಗಳಿಗೆ ರಸ್ತೆ ಮಾರ್ಗದ ಮೂಲಕ ಆಗಮಿಸುತ್ತಿದ್ದಾರೆ. ಅದಕ್ಕೆ ಕೂಡ ಭಾರತ ಸರ್ಕಾರ ಅಲ್ಲಿರುವ ರಾಯಭಾರಿ ಕಚೇರಿ ಮೂಲಕ ವ್ಯವಸ್ಥೆ ಮಾಡಿದೆ.  ರಷ್ಯಾದ ಆಕ್ರಮಣದ ತೀವ್ರತೆ ಕ್ಷಣಕ್ಷಣಕ್ಕೂ ಉಕ್ರೇನ್​​ನಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಭಾರತೀಯರ ಸುರಕ್ಷತೆಯನ್ನೂ ಎಷ್ಟು ಸಾಧ್ಯವೋ ಅಷ್ಟು ಬೇಗ ಮಾಡಬೇಕಾಗುತ್ತದೆ. ಇಲ್ಲಿಂದ ಭಾರತೀಯರನ್ನು ವಾಪಸ್​ ಕಳಿಸುವ ಕಾರ್ಯಾಚರಣೆಯನ್ನು ನಿರಂತರವಾಗಿ ಗಮನಿಸಲಾಗುತ್ತಿದೆ ಎಂದು ತಿಳಿಸಿದೆ.  ಅಷ್ಟೇ ಅಲ್ಲ, ಭಾರತೀಯರು ಸಾಧ್ಯವಾದಷ್ಟು ಶಾಂತಿಯಿಂದ, ಸಮಾಧಾನವಾಗಿ ಇರಬೇಕು ಎಂದೂ ಮನವಿ ಮಾಡಿದೆ.

ಇದನ್ನೂ ಓದಿ: ಉಕ್ರೇನ್​ನಲ್ಲಿ ಸಿಲುಕಿರುವ ಕರ್ನಾಟಕದ ಜನರನ್ನು ಸುರಕ್ಷಿತವಾಗಿ ಕರೆತರಲಾಗುತ್ತದೆ: ಸಿಎಂ ಬೊಮ್ಮಾಯಿ ಭರವಸೆ