ನವದೆಹಲಿ: “ಭಾರತವು ಸೆಮಿಕಂಡಕ್ಟರ್ ವಲಯದಲ್ಲಿ ತನ್ನ ಜಾಗತಿಕ ಜವಾಬ್ದಾರಿಯನ್ನು ಗುರುತಿಸಿ ಆ ಹಾದಿಯಲ್ಲಿ ಮುನ್ನಡೆಯುತ್ತಿದೆ. ಮುಂಬರುವ ಸಮಯವು ತಂತ್ರಜ್ಞಾನದಿಂದ ಚಾಲಿತವಾಗಿರುತ್ತದೆ. ಸೆಮಿಕಂಡಕ್ಟರ್ ‘ಡಿಜಿಟಲ್ ಯುಗ’ದ ಆಧಾರವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ಸಂಜೆ ದೆಹಲಿಯ ತಮ್ಮ ನಿವಾಸದಲ್ಲಿ ‘ಸೆಮಿಕಂಡಕ್ಟರ್ ಎಕ್ಸಿಕ್ಯೂಟಿವ್ಸ್ ರೌಂಡ್‌ಟೇಬಲ್’ ಅಧ್ಯಕ್ಷತೆ ವಹಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ.
ಸೆಮಿಕಂಡಕ್ಟರ್ ಉದ್ಯಮವು ಶೀಘ್ರದಲ್ಲೇ ಪ್ರತಿಯೊಬ್ಬರ ಮೂಲಭೂತ ಅವಶ್ಯಕತೆಗಳ ತಳಹದಿಯಾಗಲಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, “ಪ್ರಜಾಪ್ರಭುತ್ವ ಮತ್ತು ತಂತ್ರಜ್ಞಾನವು ಒಟ್ಟಾಗಿ ಮಾನವೀಯತೆಯ ಕಲ್ಯಾಣವನ್ನು ಖಚಿತಪಡಿಸುತ್ತದೆ” ಎಂದು ಹೇಳಿದರು. ಸಾಮಾಜಿಕ, ಡಿಜಿಟಲ್ ಮತ್ತು ಭೌತಿಕ ಮೂಲಸೌಕರ್ಯಗಳ ಅಭಿವೃದ್ಧಿ, ಅಂತರ್ಗತ ಅಭಿವೃದ್ಧಿಗೆ ಉತ್ತೇಜನ ನೀಡುವುದು, ಅನುಸರಣೆ ಹೊರೆಯನ್ನು ಕಡಿಮೆ ಮಾಡುವುದು, ಉತ್ಪಾದನೆ ಮತ್ತು ನಾವೀನ್ಯತೆಗಳಲ್ಲಿ ಹೂಡಿಕೆಯನ್ನು ಆಕರ್ಷಿಸುವುದು ಸೇರಿದಂತೆ ಅಭಿವೃದ್ಧಿಯ ಆಧಾರ ಸ್ತಂಭಗಳ ಕುರಿತು ಮೋದಿ ಮಾತನಾಡಿದರು.
VIDEO | PM Modi (@narendramodi) chairs the Semiconductor Executives’ Roundtable at his official residence in New Delhi, ahead of SEMICON India 2024 event to be held tomorrow.
(Source: Third Party) pic.twitter.com/MD5wyARXum
— Press Trust of India (@PTI_News) September 10, 2024
ಭಾರತವು ವೈವಿಧ್ಯಮಯ ಸೆಮಿಕಂಡಕ್ಟರ್ ಪೂರೈಕೆ ಸರಪಳಿಯಲ್ಲಿ ವಿಶ್ವಾಸಾರ್ಹ ಪಾಲುದಾರನಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಜಾಗತಿಕವಾಗಿ ಸ್ಪರ್ಧಾತ್ಮಕ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವುದರತ್ತ ಭಾರತ ಗಮನವನ್ನು ಕೇಂದ್ರೀಕರಿಸಿದೆ ಎಂದು ಹೇಳಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಅನುಸಂಧಾನ್ ನ್ಯಾಷನಲ್ ರಿಸರ್ಚ್ ಫೌಂಡೇಶನ್‌ನ ಮೊದಲ ಆಡಳಿತ ಮಂಡಳಿ ಸಭೆ
“ಭಾರತವು ಹೈಟೆಕ್ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ಉತ್ತಮ ಮಾರುಕಟ್ಟೆಯಾಗಿದೆ. ಇಂದು ಸೆಮಿಕಂಡಕ್ಟರ್ ವಲಯದ ನಾಯಕರು ಹಂಚಿಕೊಂಡ ಉತ್ಸಾಹವು ಈ ವಲಯಕ್ಕಾಗಿ ಹೆಚ್ಚು ಶ್ರಮಿಸಲು ಸರ್ಕಾರವನ್ನು ಪ್ರೇರೇಪಿಸುತ್ತದೆ” ಎಂದು ಅವರು ಹೇಳಿದರು.
ಇದೇ ವೇಳೆ ಸಿಇಒಗಳು ಸೆಮಿಕಂಡಕ್ಟರ್ ವಲಯದ ಬೆಳವಣಿಗೆಗೆ ಭಾರತದ ಬದ್ಧತೆಯನ್ನು ಶ್ಲಾಘಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ