ನವದೆಹಲಿ: ಆಂದೋಲನ ಜೀವಿಯಾಗಿದ್ದಕ್ಕೆ ನಾನು ಹೆಮ್ಮೆ ಪಡುತ್ತೇನೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನೇತಾರ ಪಿ.ಚಿದಂಬರಂ ಹೇಳಿದ್ದಾರೆ. ಎರಡು ದಿನಗಳ ಹಿಂದೆ ರಾಜ್ಯಸಭೆಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಆಂದೋಲನ ಜೀವಿಗಳು ಪ್ರತೀ ಪ್ರತಿಭಟನೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಿದ್ದರು. ಪ್ರಧಾನಿಯವರು ಉಲ್ಲೇಖಿಸಿದ ‘ಆಂದೋಲನ ಜೀವಿ’ ಎಂಬ ಪದದ ಬಗ್ಗೆ ವ್ಯಾಪಕ ಚರ್ಚೆ ಆಗಿತ್ತು.
ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಚಿದಂಬರಂ ನಾನು ಆಂದೋಲನ ಜೀವಿ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಮಹಾತ್ಮ ಗಾಂಧೀಜಿ ಶ್ರೇಷ್ಠ ಆಂದೋಲನ ಜೀವಿ ಎಂದು ಟ್ವೀಟ್ ಮಾಡಿ #iamanandolanjeevi ಎಂಬ ಹ್ಯಾಷ್ಟ್ಯಾಗ್ ಬಳಸಿದ್ದಾರೆ.
ಸೋಮವಾರ ಸಂಸತ್ತಿನಲ್ಲಿ ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದ ಅರ್ಪಿಸಿ ಮಾತನಾಡಿದ ನರೇಂದ್ರ ಮೋದಿ ಇದೀಗ ಹೊಸ ವರ್ಗದ ಜನರು ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲಿ ಪ್ರತಿಭಟನೆ ನಡೆಯುತ್ತಿರುತ್ತೋ ಅಲ್ಲಿ ಅವರು ಕಾಣಿಸುತ್ತಾರೆ. ಅದು ವಕೀಲರ ಪ್ರತಿಭಟನೆ, ವಿದ್ಯಾರ್ಥಿಗಳ ಪ್ರತಿಭಟನೆ ಅಥವಾ ಕಾರ್ಮಿಕರದ್ದೇ ಪ್ರತಿಭಟನೆಯಾಗಿರಲಿ. ಅಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ. ಪ್ರತಿಭಟನೆಗಳನ್ನು ಬಿಟ್ಟು ಅವರು ಬದುಕುವುದೇ ಇಲ್ಲ. ನಾವು ಅಂಥವರನ್ನು ಗುರುತಿಸಿ, ದೇಶವನ್ನು ಅವರಿಂದ ರಕ್ಷಿಸಬೇಕಿದೆ. ಅವರು ಒಂದು ರೀತಿಯ ಪರಾವಲಂಬಿ ಜೀವಿಗಳು ಎಂದು ಹೇಳಿದ್ದರು.
ದೆಹಲಿಯ ಗಡಿಪ್ರದೇಶವಾದ ಸಿಂಘು , ಟಿಕ್ರಿ ಮತ್ತು ಗಾಜಿಪುರ್ ನಲ್ಲಿ ಸಾವಿರಾರು ರೈತರು ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ 11 ಬಾರಿ ಮಾತುಕತೆ ನಡೆಸಿದರೂ ಸಫಲವಾಗಿಲ್ಲ.
ಪಿ.ಚಿದಂಬರಂ ಟ್ವೀಟ್ ಇಲ್ಲಿದೆ..
I am a proud andolan jeevi. The quintessential andolan jeevi was Mahatma Gandhi.#iamanandolanjeevi
— P. Chidambaram (@PChidambaram_IN) February 10, 2021
ಇದನ್ನೂ ಓದಿ: ಏನಿದು ಆಂದೋಲನ ಜೀವಿ? ಪ್ರಧಾನಿ ಮೋದಿ ಬಳಕೆ ಮಾಡಿದ ಹೊಸ ಶಬ್ದದ ಅರ್ಥವೇನು?
Published On - 3:56 pm, Wed, 10 February 21