
ನವದೆಹಲಿ, ಅಕ್ಟೋಬರ್ 11: ಹರಿಯಾಣದ ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ (Puran Kumar) ಅವರ ಆತ್ಮಹತ್ಯೆ ಪ್ರಕರಣದಲ್ಲಿ ಹೆಸರು ಕೇಳಿ ಬಂದ ನಂತರ ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿ ನರೇಂದ್ರ ಬಿಜಾರ್ನಿಯಾ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ನರೇಂದ್ರ ಬಿಜಾರ್ನಿಯಾ ಅವರ ಬದಲಾಗಿ ರೋಹ್ಟಕ್‌ನ ಎಸ್‌ಪಿಯಾಗಿ ಸುರೀಂದರ್ ಸಿಂಗ್ ಭೋರಿಯಾ ಅವರನ್ನು ನೇಮಿಸಲಾಗಿದೆ. ಬಿಜಾರ್ನಿಯಾಗೆ ಇದುವರೆಗೆ ಯಾವುದೇ ಹುದ್ದೆ ನೀಡಿಲ್ಲ.
ಪೂರಣ್ ಕುಮಾರ್ ಅವರ ಪತ್ನಿಯಾದ ಐಎಎಸ್ ಅಧಿಕಾರಿ ಅಮ್ನೀತ್ ಪೂರಣ್ ಕುಮಾರ್ ಅವರು ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಹರಿಯಾಣ ಡಿಜಿಪಿ ಶತ್ರುಜೀತ್ ಕಪೂರ್, ರೋಹ್ಟಕ್ ಎಸ್‌ಎಸ್‌ಪಿ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಕಿರುಕುಳ ಮತ್ತು ಪ್ರಚೋದನೆಯ ಆರೋಪ ಹೊರಿಸಿ ದೂರು ದಾಖಲಿಸಲಾಗಿದೆ.
ಪೂರಣ್ ಕುಮಾರ್ ಅವರ ಸೂಸೈಡ್ ನೋಟ್ನಲ್ಲಿ ಹೆಸರಿಸಲಾದ ಹಿರಿಯ ಅಧಿಕಾರಿಗಳ ಎಫ್‌ಐಆರ್‌ಗಳು ಮತ್ತು ಬಂಧನಗಳು, ಅವರ ಕುಟುಂಬಕ್ಕೆ ಭದ್ರತೆ ಮತ್ತು ಅವರ ಹಕ್ಕುಗಳ ರಕ್ಷಣೆಗೆ ಅವರು ಒತ್ತಾಯಿಸಿದ್ದಾರೆ. ಅಮ್ನೀತ್ ಅವರ ದೂರಿನ ಮೇರೆಗೆ 13 ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ಹರಿಯಾಣದ ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಸಾವಿನ ತನಿಖೆಗೆ 6 ಸದಸ್ಯರ ಎಸ್‌ಐಟಿ ರಚನೆ
ಹರಿಯಾಣ ಡಿಜಿಪಿ ಶತ್ರುಜೀತ್ ಕಪೂರ್ ಅವರನ್ನು ವಜಾಗೊಳಿಸುವವರೆಗೆ ಮರಣೋತ್ತರ ಪರೀಕ್ಷೆ ನಡೆಸಲಾಗುವುದಿಲ್ಲ ಎಂದು 31 ಸದಸ್ಯರ ಸಮಿತಿ ಘೋಷಿಸಿದೆ. ಐಪಿಎಸ್ ಅಧಿಕಾರಿಗೆ ನ್ಯಾಯ ಮತ್ತು ಆರೋಪಿ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಗುರುದ್ವಾರದಲ್ಲಿ ಮಹಾಪಂಚಾಯತ್ ನಡೆಸಲು ಸಮಿತಿ ಕರೆ ನೀಡಿದೆ.
ಪೂರಣ್ ಕುಮಾರ್ ಅವರ ಸಾವು ಹಿರಿಯ ದಲಿತ ಅಧಿಕಾರಿಗಳು ಸಹ ಸಾಮಾಜಿಕ ಸಮಾನತೆಯಿಂದ ವಂಚಿತರಾಗಿದ್ದಾರೆ ಎಂಬುದನ್ನು ನೆನಪಿಸುತ್ತದೆ ಎಂದು ಸೋನಿಯಾ ಗಾಂಧಿ ಅಮ್ನೀತ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಭೂಪಿಂದರ್ ಸಿಂಗ್ ಹೂಡಾ, ರಣದೀಪ್ ಸುರ್ಜೇವಾಲಾ ಮತ್ತು ರಾಹುಲ್ ಗಾಂಧಿ ಸೇರಿದಂತೆ ನಾಯಕರು ತಕ್ಷಣದ ನ್ಯಾಯಕ್ಕಾಗಿ ಕರೆ ನೀಡಿದ್ದಾರೆ. ದಲಿತ ಸಂಘಟನೆಗಳು ಮುಖ್ಯಮಂತ್ರಿ ನಿವಾಸದ ಹೊರಗೆ ಜಮಾಯಿಸಿ, ಡಿಜಿಪಿ, ಎಸ್‌ಎಸ್‌ಪಿ ಮತ್ತು ಇತರ ಹಿರಿಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದು, ಕ್ರಮ ತೆಗೆದುಕೊಳ್ಳುವುದು ವಿಳಂಬವಾದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಐಪಿಎಸ್ ಅಧಿಕಾರಿ ಆತ್ಮಹತ್ಯೆ, ಹರಿಯಾಣ ಡಿಜಿಪಿ ವಿರುದ್ಧ ಪೂರಣ್ ಪತ್ನಿ ದೂರು
ಅಕ್ಟೋಬರ್ 7ರಂದು ಹರಿಯಾಣದ ಹಿರಿಯ ಐಪಿಎಸ್ ಅಧಿಕಾರಿ ವೈ ಪೂರಣ್ ಕುಮಾರ್ ತಮ್ಮ ಚಂಡೀಗಢದ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 9 ಪುಟಗಳ ಸೂಸೈಡ್ ನೋಟ್ನಲ್ಲಿ 12 ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿ, ಅವರ ಮೇಲೆ ಮಾನಸಿಕ ಕಿರುಕುಳದ ಆರೋಪ ಹೊರಿಸಲಾಗಿತ್ತು. ಪೂರಣ್ ಕುಮಾರ್ ಅವರ ಸೂಸೈಡ್ ನೋಟ್ನಲ್ಲಿ ತಮ್ಮ ಎಲ್ಲಾ ಆಸ್ತಿಯನ್ನು ತಮ್ಮ ಪತ್ನಿಗೆ ನೀಡುವ ವಿಲ್ ಕೂಡ ಸೇರಿತ್ತು.
ಮೂಲಗಳ ಪ್ರಕಾರ, ಡಿಜಿಪಿ ಶ್ರೇಣಿಯ ಅಧಿಕಾರಿಯೊಬ್ಬರು ಅನಗತ್ಯ ನೋಟಿಸ್‌ಗಳನ್ನು ನೀಡುವ ಮೂಲಕ ಪದೇ ಪದೇ ಕಿರುಕುಳ ಪೂರಣ್ ಕುಮಾರ್ ಅವರಿಗೆ ನೀಡುತ್ತಿದ್ದಾರೆ ಎಂದು ಸೂಸೈಡ್ ನೋಟ್ನಲ್ಲಿ ಆರೋಪಿಸಲಾಗಿತ್ತು. ಹರಿಯಾಣದ ಎಡಿಜಿಪಿ ವೈ ಪೂರಣ್ ಕುಮಾರ್ ಅವರ ಆತ್ಮಹತ್ಯೆಯ ತನಿಖೆಗಾಗಿ ಚಂಡೀಗಢ ಪೊಲೀಸರು ಐಜಿ ಪುಷ್ಪೇಂದ್ರ ಕುಮಾರ್ ನೇತೃತ್ವದಲ್ಲಿ 6 ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ