ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) ಇತರ ರಾಜ್ಯಗಳಿಂದ ಬಂದಿರುವ ವಲಸೆ ಕಾರ್ಮಿಕರು (Migrant Workers) ಮತ್ತು ಹಿಂದೂಗಳ ಹತ್ಯೆ ಮುಂದುವರಿದಿದೆ. ಶೋಪಿಯಾನ್ ಜಿಲ್ಲೆಯಲ್ಲಿ ಶುಕ್ರವಾರ ಇಬ್ಬರು ವಲಸೆ ಕಾರ್ಮಿಕರ ಮೇಲೆ ಉಗ್ರಗಾಮಿಗಳು ಗ್ರೆನೇಡ್ ದಾಳಿ (Grenade Attack) ನಡೆಸಿದ್ದಾರೆ. ‘ಆಗ್ಲಾರ್ ಝೈನಾಪೋರಾ ಸಮೀಪ ಭಯೋತ್ಪಾದಕರು ಗ್ರೆನೇಡ್ ದಾಳಿ ಮಾಡಿದ್ದಾರೆ. ಘಟನೆಯಲ್ಲಿ ಇಬ್ಬರು ವಲಸೆ ಕಾರ್ಮಿಕರಿಗೆ ಗಾಯಗಳಾಗಿವೆ. ಪ್ರಸ್ತುತ ಇಡೀ ಪ್ರದೇಶದಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ’ ಎಂದು ಪೊಲೀಸ್ ವಕ್ತಾರರು ಟ್ವೀಟ್ ಮಾಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಭಯೋತ್ಪಾದಕರ ಪತ್ತೆಗೆ ಬಲೆ ಬೀಸಲಾಗಿದೆ. ನಿನ್ನೆಯಷ್ಟೇ ಕಾಶ್ಮೀರದಲ್ಲಿ ವಲಸೆ ಕಾರ್ಮಿಕನೊಬ್ಬನನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದರು.
ಜಮ್ಮುವಿನತ್ತ ಪಂಡಿತ ಸಮುದಾಯ ವಲಸೆ
ಭಯೋತ್ಪಾದಕರು ಹಿಂದೂಗಳನ್ನು ಪ್ರತ್ಯೇಕಿಸಿ, ಬೆನ್ನಟ್ಟಿ ಹತ್ಯೆ ಮಾಡುವ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಾಶ್ಮೀರದಿಂದ (Jammu Kashmir) ಪಂಡಿತ ಸಮುದಾಯಕ್ಕೆ ಸೇರಿದವರು ಜಮ್ಮುವಿನತ್ತ ವಲಸೆ ಹೋಗುತ್ತಿದ್ದಾರೆ. ಕಳೆದ ಒಂದು ವಾರದಲ್ಲಿಯೇ 100ಕ್ಕೂ ಹೆಚ್ಚು ಕುಟುಂಬಗಳು ಕಾಶ್ಮೀರ ಕಣಿವೆ ತೊರೆದು, ಜಮ್ಮುವಿಗೆ ವಲಸೆ ಬಂದಿವೆ. ಕುಲ್ಗಾಮ್ನಲ್ಲಿ ಶಿಕ್ಷಕಿ ರಜನಿ ಬಾಲಾ ಹತ್ಯೆಯ ನಂತರ ಪಂಡಿತ ಸಮುದಾಯದಲ್ಲಿ ಭೀತಿ ಆವರಿಸಿದ್ದು, ಭದ್ರತೆ ಹೆಚ್ಚಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.
ಬಾರಾಮುಲ್ಲಾದ ಕಾಶ್ಮೀರಿ ಪಂಡಿತ್ ಕಾಲೊನಿಯಲ್ಲಿ ನೆಲೆಸಿದ್ದ 300 ಹಿಂದೂ ಕುಟುಂಬಗಳ ಪೈಕಿ ಅರ್ಧದಷ್ಟು ಜನರು ಈಗಾಗಲೇ ಕಾಶ್ಮೀರ ತೊರೆದಿದ್ದಾರೆ. ಕಳೆದ 26 ದಿನಗಳಲ್ಲಿ 8 ಮಂದಿಯನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ.
ಗುರಿಯಾಗಿಸಿ ಕೊಲ್ಲುವ ಸಂಚು ವಿಫಲಗೊಳಿಸುವುದು ಮತ್ತು ಕಾಶ್ಮೀರಿ ಪಂಡಿತ ಸಮುದಾಯದಲ್ಲಿ ಧೈರ್ಯ ತುಂಬಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ದೆಹಲಿಯಲ್ಲಿ ನಿನ್ನೆ (ಜೂನ್ 3) ಉನ್ನತ ಮಟ್ಟದ ಸಭೆ ನಡೆಯಿತು. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚರ್ಚೆ ನಡೆಸಿದರು. ಸಭೆಯಲ್ಲಿ ಜಮ್ಮು-ಕಾಶ್ಮೀರದ ಡಿಜಿಪಿ, ಗೃಹ ಇಲಾಖೆ ಅಧಿಕಾರಿಗಳು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಬಾಲ್ ಸಹ ಭಾಗವಹಿಸಿದ್ದರು.