ಶೀನಾ ಬೋರಾ ಪ್ರಕರಣದಲ್ಲಿ(Sheena Bora Case) ಅವರ ತಾಯಿ ಮತ್ತು ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ (Indrani Mukerjea) ತಮ್ಮ ಮಗಳು ಬದುಕಿದ್ದಾಳೆ. ತನಿಖಾ ಸಂಸ್ಥೆ ಕಾಶ್ಮೀರದಲ್ಲಿ ಅವಳನ್ನು ಹುಡುಕಬೇಕು ಎಂದು ಕೇಂದ್ರ ತನಿಖಾ ದಳಕ್ಕೆ ( Central Bureau of Investigation)ತಿಳಿಸಿದ್ದಾರೆ. ಮಾಜಿ ಮಾಧ್ಯಮ ಕಾರ್ಯನಿರ್ವಾಹಕರಾಗಿದ್ದ ಮುಖರ್ಜಿ ಅವರು ಇತ್ತೀಚೆಗೆ ಕಾಶ್ಮೀರದಲ್ಲಿ ಶೀನಾ ಬೋರಾ ಅವರನ್ನು ಭೇಟಿಯಾದರು ಎಂದು ಹೇಳಿದ ಮಹಿಳೆಯೊಬ್ಬರು ಜೈಲಿನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಇಂದ್ರಾಣಿ ಮುಖರ್ಜಿ ಅವರು ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಶೀಘ್ರದಲ್ಲೇ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಬೋರಾ (24) ರನ್ನು ಇಂದ್ರಾಣಿ ಮುಖರ್ಜಿ ಆಕೆಯ ಆಗಿನ ಚಾಲಕ ಶ್ಯಾಮ್ವರ್ ರಾಯ್ (Shyamvar Rai) ಮತ್ತು ಖನ್ನಾ ಅವರು ಏಪ್ರಿಲ್ 2012 ರಲ್ಲಿ ಕಾರಿನಲ್ಲಿ ಕತ್ತು ಹಿಸುಕಿ ಕೊಂದಿದ್ದರು. ಆಕೆಯ ದೇಹವನ್ನು ಸುಟ್ಟುಹಾಕಿ ನೆರೆಯ ರಾಯಗಡ ಜಿಲ್ಲೆಯ ಕಾಡಿನಲ್ಲಿ ಎಸೆಯಲಾಯಿತು. ಇಂದ್ರಾಣಿ ಮುಖರ್ಜಿ ಅವರನ್ನು ಆಗಸ್ಟ್ 2015 ರಲ್ಲಿ ಬಂಧಿಸಲಾಯಿತು. ಮಾಜಿ ಮಾಧ್ಯಮ ಬ್ಯಾರನ್ ಪೀಟರ್ ಮುಖರ್ಜಿಯವರನ್ನೂ ನಂತರ ಕೊಲೆಯ ಸಂಚಿನ ಭಾಗವೆಂದು ಆರೋಪಿಸಿ ಬಂಧಿಸಲಾಯಿತು. ಅವರು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಇದನ್ನು ಬಾಂಬೆ ಹೈಕೋರ್ಟ್ ಮಂಜೂರು ಮಾಡಿದೆ. ಈ ಕೊಲೆ ಪ್ರಕರಣವು ಅನೇಕ ತಿರುವುಗಳನ್ನು ಕಂಡಿದೆ. ದೇಶವನ್ನು ಬೆಚ್ಚಿ ಬೀಳಿಸಿದ ಇಂಥದ್ದೇ ಪ್ರಕರಣಗಳು ಇಲ್ಲಿವೆ
ಆರುಷಿ ತಲ್ವಾರ್
ಹದಿನಾಲ್ಕು ವರ್ಷದ ಆರುಷಿಯು 2008ರ ಮೇ ತಿಂಗಳಲ್ಲಿ ತಲ್ವಾರ್ ಕುಟುಂಬದ ನೋಯ್ಡಾ ನಿವಾಸದಲ್ಲಿ ತನ್ನ ಕೊಠಡಿಯೊಳಗೆ ಆಕೆಯ ಗಂಟಲು ಸೀಳಿ ಶವವಾಗಿ ಪತ್ತೆಯಾಗಿತ್ತು. ಅನುಮಾನ ಆರಂಭದಲ್ಲಿ 45 ವರ್ಷದ ಹೇಮರಾಜ್ ಕಡೆಗೆ ಹೋಗಿತ್ತು. ಆದರೆ ಅವರು ನಾಪತ್ತೆಯಾಗಿದ್ದರು. ಎರಡು ದಿನಗಳ ನಂತರ ಮನೆಯ ತಾರಸಿಯಿಂದ ಹೇಮರಾಜ್ ಶವ ಪತ್ತೆಯಾಗಿತ್ತು. ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದ್ದ ಪ್ರಕರಣದ ಕಳಪೆ ತನಿಖೆಯ ಬಗ್ಗೆ ಉತ್ತರ ಪ್ರದೇಶ ಪೊಲೀಸರು ತೀವ್ರ ಟೀಕೆಗೆ ಗುರಿಯಾಗುತ್ತಿದ್ದಂತೆ, ಅಂದಿನ ಮುಖ್ಯಮಂತ್ರಿ ಮಾಯಾವತಿ ಅವರ ಶಿಫಾರಸಿನ ಮೇರೆಗೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ಸುದೀರ್ಘ ತನಿಖೆಯ ನಂತರ ಆರುಷಿಯ ಪೋಷಕರು, ಡಾ ರಾಜೇಶ್ ಮತ್ತು ನೂಪುರ್ ತಲ್ವಾರ್, ಅವರ ಮಗಳು ಮತ್ತು ಹೇಮರಾಜ್ ಹತ್ಯೆಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಆದಾಗ್ಯೂ, ಅಲಹಾಬಾದ್ ಹೈಕೋರ್ಟ್ ಸಾಕ್ಷ್ಯಾಧಾರಗಳ ಕೊರತೆಯಿಂದ ದಂತವೈದ್ಯ ದಂಪತಿಯನ್ನು ಖುಲಾಸೆಗೊಳಿಸಿದೆ.
ಸುನಂದಾ ಪುಷ್ಕರ್
ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರು ಜನವರಿ 17, 2014 ರಂದು ನಗರದ ಐಷಾರಾಮಿ ಹೋಟೆಲ್‌ನ ಸೂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಆತ್ಮಹತ್ಯೆಯ ಶಂಕೆ ಮತ್ತು ಮಾದಕವಸ್ತು ಸೇವನೆಯ ಸಾಧ್ಯತೆಯ ಬಗ್ಗೆ ತನಿಖೆ ನಡೆಸಲಾಯಿತು. ಅಕ್ಟೋಬರ್ 2014 ರಲ್ಲಿ ಆಕೆಯ ಸಾವಿನ ಬಗ್ಗೆ ತನಿಖೆ ನಡೆಸಿದ ವೈದ್ಯಕೀಯ ತಂಡವು ಅವರು ವಿಷಪ್ರಾಶನದಿಂದ ಸಾವನ್ನಪ್ಪಿದ್ದಾರೆ ಎಂದು ತೀರ್ಮಾನಿಸಿದರು, ನಂತರ ಪೊಲೀಸರು ಸುನಂದಾ ಕೊಲೆಯಾಗಿದ್ದಾಳೆ ಎಂದು ವರದಿ ಮಾಡಿದರು. ಈ ವರ್ಷದ ಆಗಸ್ಟ್‌ನಲ್ಲಿ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರನ್ನು ಕೊಲೆ ಪ್ರಕರಣದ ಆರೋಪದಿಂದ ಮುಕ್ತಗೊಳಿಸಿತು.
ರಿಜ್ವಾನುರ್ ರೆಹಮಾನ್
ರಿಜ್ವಾನುರ್ ರೆಹಮಾನ್ ಕೊಲೆ ನಿಗೂಢ ಪ್ರಕರಣವು ದುರಂತ ಪ್ರೇಮಕಥೆಯಾಗಿದ್ದು ಅದು ಹೆಚ್ಚು ಗಮನ ಸೆಳೆದಿತ್ತು. ಕೈಗಾರಿಕೋದ್ಯಮಿ ಅಶೋಕ್ ತೋಡಿ ಅವರ ಮಗಳನ್ನು ಮದುವೆಯಾಗಿದ್ದ ರೆಹಮಾನ್, 2007 ರಲ್ಲಿ ರೈಲ್ವೇ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದರು.ಅವರ ಮದುವೆಯನ್ನು ರದ್ದುಗೊಳಿಸುವಂತೆ ಪತ್ನಿಯ ಕುಟುಂಬ ಮತ್ತು ಕೆಲವು ಪೊಲೀಸ್ ಅಧಿಕಾರಿಗಳು ಒತ್ತಡ ಹೇರಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಅಶೋಕ್ ತೋಡಿ ರೆಹಮಾನ್ ಹತ್ಯೆಗೆ ಕುಮ್ಮಕ್ಕು ನೀಡಿದ್ದ ಎಂದು ಶಂಕಿಸಲಾಗಿತ್ತು. ಆದಾಗ್ಯೂ, ಹೆಚ್ಚಿನ ತನಿಖೆ ಮತ್ತು ಪ್ರತಿಭಟನೆಯ ನಂತರ ಅವರ ಸಾವು ಆತ್ಮಹತ್ಯೆ ಎಂದು ನಿರ್ಧರಿಸಲಾಯಿತು.
ನೈನಾ ಸಾಹ್ನಿ
‘ತಂದೂರ್ ಮರ್ಡರ್ ಕೇಸ್’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ನೈನಾ ಸಾಹ್ನಿಯ ಸಾವಿನ ಕಥೆಯು ದೇಶವು ಕಂಡ ಅತ್ಯಂತ ಭೀಕರವಾದದ್ದು. ಸುಶೀಲ್ ಕುಮಾರ್ ಶರ್ಮಾ 1995 ರಲ್ಲಿ ತನ್ನ ಪುರುಷ ಸ್ನೇಹಿತನೊಂದಿಗಿನ ಸಂಬಂಧವನ್ನು ವಿರೋಧಿಸಿ ತನ್ನ ಹೆಂಡತಿಯನ್ನು ಗುಂಡಿಕ್ಕಿ ಕೊಂದಿದ್ದ. ಬಳಿಕ ಆಕೆಯ ದೇಹವನ್ನು ತುಂಡು ಮಾಡಿ ರೆಸ್ಟೋರೆಂಟ್‌ನಲ್ಲಿ ಸುಡಲು ಯತ್ನಿಸಿದ್ದ. ತಂದೂರ್ (ಒಲೆಯಲ್ಲಿ) ಕೊಲೆ ಪ್ರಕರಣ ಎಂದು ಕರೆಯಲ್ಪಡುವ ಇದು ಭಾರತವನ್ನು ಬೆಚ್ಚಿಬೀಳಿಸಿದ ಪ್ರಕರಣಗಳಲ್ಲಿ ಒಂದಾಗಿದೆ, ಇದರಲ್ಲಿ ಡಿಎನ್‌ಎ ಪುರಾವೆಗಳು ಮತ್ತು ಎರಡನೇ ಶವಪರೀಕ್ಷೆಯನ್ನು ಆರೋಪಿಗಳ ಅಪರಾಧವನ್ನು ಸಾಬೀತುಪಡಿಸಲು ಬಳಸಲಾಯಿತು.
ಮಧುಮಿತಾ ಶುಕ್ಲಾ
ಮಧುಮಿತಾ ಶುಕ್ಲಾ ಎಂಬ ಕವಿಯನ್ನು ಮೇ 2003 ರಲ್ಲಿ ಲಖನೌನಲ್ಲಿ ಆಗಿನ ಸಚಿವ ಅಮರ್ ಮಣಿ ತ್ರಿಪಾಠಿ ಅವರ ಆಜ್ಞೆಯ ಮೇರೆಗೆ ಗುಂಡಿಕ್ಕಿ ಕೊಲ್ಲಲಾಯಿತು. ಕವಿಯ ಕೊಲೆಗೆ ತ್ರಿಪಾಠಿ ಮತ್ತು ಅವನ ಹೆಂಡತಿಗೆ ಶಿಕ್ಷೆ ವಿಧಿಸಲಾಯಿತು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಧುಮಿತಾ ಅವರು ಸಾಯುವ ವೇಳೆ ಗರ್ಭಿಣಿಯಾಗಿದ್ದರು ಎಂದು ತಿಳಿದುಬಂದಿದೆ. ಅಮರ್ ಮಣಿ ರಾಜ್ಯದಲ್ಲಿ ಪ್ರಬಲ ಮತ್ತು ಪ್ರಭಾವಿ ರಾಜಕೀಯ ನಾಯಕರಾಗಿದ್ದರಿಂದ ಕೊಲೆ ಪ್ರಕರಣವು ಭಾರೀ ಸುದ್ದಿಯಾಗಿತ್ತು. ಶುಕ್ಲಾ ಅವರು ತ್ರಿಪಾಠಿ ಅವರೊಂದಿಗೆ ಸಂಬಂಧ ಹೊಂದಿದ್ದರು ಮತ್ತು ಆಕೆಯ ಭ್ರೂಣದ ಡಿಎನ್‌ಎ ತ್ರಿಪಾಠಿಯೊಂದಿಗೆ ಹೊಂದಿಕೆಯಾಗಿದೆ ಎಂದು ನಂತರ ತಿಳಿದುಬಂದಿದೆ.
ಇದನ್ನೂ ಓದಿ: Sheena Bora Murder: ಶೀನಾ ಬೋರಾ ಕಾಶ್ಮೀರದಲ್ಲಿ ಜೀವಂತವಾಗಿದ್ದಾಳೆ; ಅಚ್ಚರಿಯ ವಿಷಯ ತಿಳಿಸಿದ ಇಂದ್ರಾಣಿ ಮುಖರ್ಜಿ