
ನವದೆಹಲಿ, ಸೆಪ್ಟೆಂಬರ್ 02: ಬಾಂಗ್ಲಾದೇಶ(Bangladesh)ದಲ್ಲಿ ನಡೆದ ಕ್ಷಿಪ್ರ ರಾಜಕೀಯ ಕ್ರಾಂತಿಯ ನಂತರ ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ(Sheikh Hasina), ಇದೇ ಡಿಸೆಂಬರ್ ತಿಂಗಳ ವೇಳೆಗೆ ತಮ್ಮ ತಾಯ್ನಾಡಿಗೆ ಮರಳುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದ ಪ್ರಸ್ತುತ ಬಿಎನ್‌ಪಿ (BNP) ಸರ್ಕಾರದ ಪ್ರಧಾನಿ ತಾರಿಕ್ ರೆಹಮಾನ್ ಅವರ ಭಾರತ ಭೇಟಿಗೆ ತಮ್ಮ ಹಸ್ತಾಂತರವನ್ನು (Extradition) ಷರತ್ತಾಗಿ ವಿಧಿಸಿರುವುದನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. “ನನ್ನ ದೇಶಕ್ಕೆ ಮರಳುವುದು ನನ್ನ ಸ್ವಂತ ನಿರ್ಧಾರ. ಜೀವಮಾನವಿಡೀ ವಿದೇಶದಲ್ಲಿ ಉಳಿಯುವ ಉದ್ದೇಶ ನನಗಿಲ್ಲ. ದಿನಾಂಕ ಮತ್ತು ಸಮಯವನ್ನು ಶೀಘ್ರದಲ್ಲೇ ಪ್ರಕಟಿಸುತ್ತೇನೆ” ಎಂದು ಖಡಕ್ ಆಗಿ ಹೇಳಿದ್ದಾರೆ.
ಅವಾಮಿ ಲೀಗ್ ಕಾರ್ಯಕರ್ತರ ಮೇಲೆ ದೌರ್ಜನ್ಯ: ಅವಾಮಿ ಲೀಗ್ ಪಕ್ಷದ ನಾಯಕರು, ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿ, ಹಿಂಸೆ ನೀಡಲಾಗುತ್ತಿದೆ. ನ್ಯಾಯಾಂಗವನ್ನು ರಾಜಕೀಯ ಸೇಡಿನ ಅಸ್ತ್ರವನ್ನಾಗಿ ಮಾಡಿಕೊಂಡು ತಮ್ಮ ವಿರುದ್ಧವೇ 600ಕ್ಕೂ ಹೆಚ್ಚು ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಸಿದ ಆರ್ಥಿಕತೆ: ತಮ್ಮ ಅಧಿಕಾರಾವಧಿಯಲ್ಲಿ 70 ಬಿಲಿಯನ್ ಡಾಲರ್ನಿಂದ 459 ಡಾಲರ್ಗೆ ಬಿಲಿಯನ್‌ಗೆ ಬೆಳೆದಿದ್ದ ದೇಶದ ಆರ್ಥಿಕತೆಯು, ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ದರ ಶೇ. 6.70 ರಿಂದ ಶೇ. 2.22ಕ್ಕೆ ಕುಸಿದಿದೆ. 54 ವರ್ಷಗಳಲ್ಲಿ ಮೊದಲ ಬಾರಿಗೆ ಕೈಗಾರಿಕಾ ಬೆಳವಣಿಗೆ ನಕಾರಾತ್ಮಕ ಹಂತಕ್ಕೆ ತಲುಪಿದೆ ಎಂದು ಅಂಕಿಅಂಶಗಳ ಸಮೇತ ವಿವರಿಸಿದರು.
ಮತ್ತಷ್ಟು ಓದಿ:
Sheikh Hasina: ಶೇಖ್ ಹಸೀನಾಗೆ ಮರಣದಂಡನೆ, ಬಾಂಗ್ಲಾಗೆ ಕಳುಹಿಸಿ ಎಂದಿದ್ದಕ್ಕೆ ಭಾರತ ಕೊಟ್ಟ ಪ್ರತಿಕ್ರಿಯೆ ಏನು?
ಚೀನಾದಿಂದ ಜೆಟ್ ಖರೀದಿ ಪ್ರಶ್ನಿಸಿದ ಹಸೀನಾ: ದೇಶದಲ್ಲಿ ವಿದ್ಯುತ್ ಉತ್ಪಾದನೆಗೆ ಇಂಧನವಿಲ್ಲದೆ, ಗ್ಯಾಸ್ ಕೊರತೆಯಿಂದ 6 ರಸಗೊಬ್ಬರ ಕಾರ್ಖಾನೆಗಳಲ್ಲಿ5 ಮುಚ್ಚಲ್ಪಟ್ಟಿವೆ. ಇಂತಹ ಆರ್ಥಿಕ ಮುಗ್ಗಟ್ಟಿನಲ್ಲೂ ಚೀನಾದಿಂದ 2.3 ಬಿಲಿಯನ್ ಡಾಲರ್ ವೆಚ್ಚದಲ್ಲಿ J-10CE ಯುದ್ಧ ವಿಮಾನಗಳನ್ನು ಖರೀದಿಸಲು ಸರ್ಕಾರ ಮುಂದಾಗಿರುವುದರ ಹಿಂದಿನ ಔಚಿತ್ಯವೇನು ಎಂದು ಪ್ರಶ್ನಿಸಿದರು.
ಉಗ್ರವಾದದ ಪುನರುತ್ಥಾನ: ಬಾಂಗ್ಲಾದೇಶವು ‘ಮತ್ತೊಂದು ಪಾಕಿಸ್ತಾನ’ ಆಗುವತ್ತ ಸಾಗುತ್ತಿದೆ ಎಂಬ ತಮ್ಮ ಪುತ್ರ ಸಜೀಬ್ ವಾಜೀದ್ ಜಾಯ್ ಅವರ ಎಚ್ಚರಿಕೆಯನ್ನು ಬೆಂಬಲಿಸಿದ ಹಸೀನಾ, ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು, ಹಿಂದೂ ದೇವಾಲಯಗಳು, ಸೂಫಿ ದರ್ಗಾಗಳು ಮತ್ತು ಸಾಂಸ್ಕೃತಿಕ ಕೇಂದ್ರಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಾದೇಶಿಕ ಭದ್ರತೆಗೆ ಆಪತ್ತು: ಬಾಂಗ್ಲಾದೇಶದಲ್ಲಿ ಮೂಲಭೂತವಾದ ಮತ್ತು ಭಯೋತ್ಪಾದಕ ಜಾಲಗಳು ಬಲಗೊಂಡರೆ, ಅದರ ನೇರ ಕೆಟ್ಟ ಪರಿಣಾಮ ಭಾರತ, ಮ್ಯಾನ್ಮಾರ್, ಬಂಗಾಳಕೊಲ್ಲಿ ವ್ಯಾಪ್ತಿಯ ಕಡಲ ವ್ಯಾಪಾರ ಮತ್ತು ಪ್ರಾದೇಶಿಕ ಭದ್ರತೆಯ ಮೇಲೆ ಬೀಳಲಿದೆ ಎಂದು ಎಚ್ಚರಿಸಿದರು.
ತಾರಿಕ್ ರೆಹಮಾನ್ ಭೇಟಿಗೆ ಆಹ್ವಾನ: ಭಾರತವು ಬಾಂಗ್ಲಾದೇಶದೊಂದಿಗೆ ರಚನಾತ್ಮಕ ಮತ್ತು ಪರಸ್ಪರ ಹಿತಾಸಕ್ತಿಯ ಸಂಬಂಧವನ್ನು ಬಯಸುತ್ತದೆ. ನವದೆಹಲಿ ಭೇಟಿಗಾಗಿ ಪ್ರಧಾನಿ ತಾರಿಕ್ ರೆಹಮಾನ್ ಅವರಿಗೆ ಭಾರತ ಸರ್ಕಾರ ಸೌಹಾರ್ದಯುತ ಆಹ್ವಾನ ನೀಡಿದ್ದರೂ, ಹಸೀನಾ ಅವರ ಉಪಸ್ಥಿತಿ ಮತ್ತು ಹಸ್ತಾಂತರದ ವಿಚಾರವು ಎರಡೂ ದೇಶಗಳ ರಾಜತಾಂತ್ರಿಕ ವಲಯದಲ್ಲಿ ದೊಡ್ಡ ಜಟಿಲತೆಯನ್ನು ಸೃಷ್ಟಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ