AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ವಿದೇಶಾಂಗ ಸಚಿವಾಲಯದಿಂದ ಇಂಟರ್ನ್‌ಶಿಪ್: ಪದವೀಧರರಿಗೆ ಸುವರ್ಣಾವಕಾಶ, 10,000 ರೂ. ಸ್ಟೈಫಂಡ್‌

ಕೇಂದ್ರ ವಿದೇಶಾಂಗ ಸಚಿವಾಲಯವು ಯುವಜನರಿಗೆ ಆಕರ್ಷಕ ಇಂಟರ್ನ್‌ಶಿಪ್‌ಗೆ ಅರ್ಜಿ ಆಹ್ವಾನಿಸಿದೆ. ಇದು ಭಾರತದ ವಿದೇಶಾಂಗ ನೀತಿ, ಸಚಿವಾಲಯದ ಕಾರ್ಯವೈಖರಿ ಕುರಿತು ಪ್ರಾಯೋಗಿಕ ಅನುಭವ ನೀಡುತ್ತದೆ. ಮಾಸಿಕ 10,000 ರೂ. ಸ್ಟೈಫಂಡ್, ವಿಮಾನ ಪ್ರಯಾಣ ವೆಚ್ಚ ಲಭ್ಯ. ಪದವಿ ಪೂರ್ಣಗೊಳಿಸಿದ/ಅಂತಿಮ ವರ್ಷದ ವಿದ್ಯಾರ್ಥಿಗಳು ಸೆಪ್ಟೆಂಬರ್ 27ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. 25 ವರ್ಷ ವಯೋಮಿತಿ.

ಕೇಂದ್ರ ವಿದೇಶಾಂಗ ಸಚಿವಾಲಯದಿಂದ ಇಂಟರ್ನ್‌ಶಿಪ್: ಪದವೀಧರರಿಗೆ ಸುವರ್ಣಾವಕಾಶ, 10,000 ರೂ. ಸ್ಟೈಫಂಡ್‌
ವಿದೇಶಾಂಗ ಸಚಿವಾಲಯದಿಂದ ಉಚಿತ ಇಂಟರ್ನ್‌ಶಿಪ್Image Credit source: foundit.in
ಅಕ್ಷತಾ ವರ್ಕಾಡಿ
|

Updated on: Sep 22, 2026 | 3:40 PM

Share

ಕೇಂದ್ರ ವಿದೇಶಾಂಗ ಸಚಿವಾಲಯವು (MEA) ಯುವಜನರಿಗಾಗಿ ಆಕರ್ಷಕ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಿದೆ. ಭಾರತದ ವಿದೇಶಾಂಗ ನೀತಿಯ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವುದು, ಸಚಿವಾಲಯದ ಕಾರ್ಯವೈಖರಿಯ ಪ್ರಾಯೋಗಿಕ ಅನುಭವ ನೀಡುವುದು ಹಾಗೂ ವಿವಿಧ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 27 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ.

ಇಂಟರ್ನ್‌ಶಿಪ್‌ ಅವಧಿ ಹಾಗೂ ಲಭ್ಯವಾಗುವ ಸೌಲಭ್ಯಗಳು:

ಸಚಿವಾಲಯವು ವರ್ಷದಲ್ಲಿ ಎರಡು ಹಂತಗಳಲ್ಲಿ (ಏಪ್ರಿಲ್ – ಸೆಪ್ಟೆಂಬರ್ ಮತ್ತು ಅಕ್ಟೋಬರ್ – ಮಾರ್ಚ್) ಈ ಇಂಟರ್ನ್‌ಶಿಪ್ ನಡೆಸುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 10,000 ರೂ. ಸ್ಟೈಫಂಡ್ ನೀಡಲಾಗುತ್ತದೆ. ಜೊತೆಗೆ, ಅಭ್ಯರ್ಥಿಯ ರಾಜ್ಯದ ರಾಜಧಾನಿಯಿಂದ ದೆಹಲಿಗೆ ತೆರಳಲು ವಿಮಾನ ಪ್ರಯಾಣದ ವೆಚ್ಚವನ್ನು ನಿಗದಿತ ಮಿತಿಯವರೆಗೆ ಸಚಿವಾಲಯವೇ ಭರಿಸುತ್ತದೆ. ಈ ಇಂಟರ್ನ್‌ಶಿಪ್‌ ಅವಧಿಯು ಕನಿಷ್ಠ 1 ತಿಂಗಳಿಂದ ಗರಿಷ್ಠ 3 ತಿಂಗಳವರೆಗೆ ಇರಲಿದ್ದು, ದೆಹಲಿಯಲ್ಲಿ ತಂಗಲು ವಸತಿ ಮತ್ತು ಊಟದ ವ್ಯವಸ್ಥೆಯನ್ನು ಅಭ್ಯರ್ಥಿಗಳೇ ಸ್ವತಃ ಮಾಡಿಕೊಳ್ಳಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಇರಬೇಕಾದ ವಯೋಮಿತಿ ಮತ್ತು ಶೈಕ್ಷಣಿಕ ಅರ್ಹತೆಗಳು:

ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿದ ಅಥವಾ ಪ್ರಸ್ತುತ ಅಂತಿಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ನಾಗರಿಕರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇಂಟರ್ನ್‌ಶಿಪ್ ಪೂರ್ಣಗೊಳ್ಳುವ ವರ್ಷದ ಡಿಸೆಂಬರ್ 31 ಕ್ಕೆ ಅಭ್ಯರ್ಥಿಯ ವಯಸ್ಸು 25 ವರ್ಷ ಮೀರಿರಬಾರದು ಎಂಬ ನಿಯಮವನ್ನು ವಿಧಿಸಲಾಗಿದೆ.

ಅರ್ಜಿಗಳ ಸ್ಕ್ರೀನಿಂಗ್ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ವಿವರ:

ಇಂಟರ್ನ್‌ಶಿಪ್‌ಗೆ ಆಯ್ಕೆಯನ್ನು ಅರ್ಜಿಗಳ ಪ್ರಾಥಮಿಕ ಸ್ಕ್ರೀನಿಂಗ್ ಹಾಗೂ ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ನಡೆಸಲಾಗುತ್ತದೆ. ಪ್ರತಿಯೊಂದು ಹಂತದಲ್ಲೂ ಗರಿಷ್ಠ 30 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಒಟ್ಟು 30 ಸ್ಥಾನಗಳಲ್ಲಿ 14 ರಾಜ್ಯಗಳಿಂದ 26 ಅಭ್ಯರ್ಥಿಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಿಂದ ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಹಿಂದುಳಿದ (TADP) ಜಿಲ್ಲೆಗಳ ಇಬ್ಬರು ಅಭ್ಯರ್ಥಿಗಳಿಗೆ ವಿಶೇಷ ಅವಕಾಶವಿರಲಿದ್ದು, ಒಟ್ಟು ಖಾಲಿ ಹುದ್ದೆಗಳಲ್ಲಿ ಕನಿಷ್ಠ 30 ಪ್ರತಿಶತವನ್ನು ಮಹಿಳೆಯರಿಗೆ ಕಾಯ್ದಿರಿಸಲಾಗಿದೆ.

ಅಂಕಗಳ ತೂಕ ಮತ್ತು ಮೀಸಲಾತಿ ಆದ್ಯತೆಗಳು:

ಪಿಯುಸಿ ಮತ್ತು ಪದವಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ರಾಜ್ಯವಾರು ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಪ್ರಾಥಮಿಕ ಸ್ಕ್ರೀನಿಂಗ್‌ನಲ್ಲಿ TADP ಜಿಲ್ಲೆಗಳ ಅಭ್ಯರ್ಥಿಗಳಿಗೆ ಹಾಗೂ ಸಂದರ್ಶನದ ಹಂತದಲ್ಲಿ SC, ST, OBC ಮತ್ತು EWS ವರ್ಗಗಳ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಖಾಲಿ ಹುದ್ದೆಗಳ ಸಂಖ್ಯೆಗೆ 1:3 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆನ್‌ಲೈನ್ ವೀಡಿಯೊ ಕಾನ್ಫರೆನ್ಸ್ ಸಂದರ್ಶನಕ್ಕೆ ಕರೆಯಲಾಗುತ್ತದೆ.

ಇದನ್ನೂ ಓದಿ: ಕಾಲೇಜಿನಲ್ಲಿ ರಾತ್ರಿ ಕಾವಲುಗಾರನ ಕೆಲಸ ಮಾಡುತ್ತಲೇ ಓದಿ ಸತತ 3 ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡ ಸಾಧಕ!

ಇಂಟರ್ನ್‌ಶಿಪ್ ಕಾರ್ಯಕ್ರಮದ ಪ್ರಮುಖ ದಿನಾಂಕಗಳು:

ಈ ಇಂಟರ್ನ್‌ಶಿಪ್‌ಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 27 ಕೊನೆಯ ದಿನಾಂಕವಾಗಿದೆ. ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಅಕ್ಟೋಬರ್ 7, 2026 ರಂದು ಪ್ರಕಟಿಸಲಾಗುತ್ತದೆ. ತದನಂತರ ಅಕ್ಟೋಬರ್ 17 ರಂದು ಆನ್‌ಲೈನ್ ಸಂದರ್ಶನ ನಡೆಯಲಿದ್ದು, ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಅಕ್ಟೋಬರ್ 23 ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ನೋಂದಣಿ, ಅರ್ಜಿ ಸಲ್ಲಿಕೆ, ಸ್ಕ್ರೀನಿಂಗ್, ಮತ್ತು ವಿಭಾಗೀಯ ಹಂಚಿಕೆ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ವಿದೇಶಾಂಗ ಸಚಿವಾಲಯದ ಅಧಿಕೃತ ಇಂಟರ್ನ್‌ಶಿಪ್ ಪೋರ್ಟಲ್ ಮೂಲಕವೇ ಆನ್‌ಲೈನ್‌ನಲ್ಲಿ ನಡೆಯುತ್ತವೆ. ವಿದೇಶಾಂಗ ನೀತಿ, ಅಂತರರಾಷ್ಟ್ರೀಯ ಸಂಬಂಧಗಳು ಹಾಗೂ ಸಾರ್ವಜನಿಕ ವ್ಯವಹಾರಗಳಲ್ಲಿ ಆಸಕ್ತಿ ಹೊಂದಿರುವ ಯುವಜನರು ಮೊದಲು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು ಸೆಪ್ಟೆಂಬರ್ 27ರೊಳಗೆ ಅರ್ಜಿಯನ್ನು ಪೂರ್ಣಗೊಳಿಸಬೇಕಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us