ಭೂಪಾಲ್: ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿರುವ ತನ್ನ ಮನೆಗೆ ಮರಳಿದ ವೈದ್ಯಕೀಯ ವಿದ್ಯಾರ್ಥಿನಿ ಉಕ್ರೇನ್‌ನಲ್ಲಿ (Ukraine) ಭಾರತೀಯರ ಮೇಲಾಗುತ್ತಿರುವ ದಬ್ಬಾಳಿಕೆ, ಕಿರುಕುಳದ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಪರಿಸ್ಥಿತಿ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿರುವ ಆಕೆ, ಉಕ್ರೇನ್ ಮೇಲೆ ದಾಳಿ ನಡೆಸಿರುವ ರಷ್ಯಾ (Russia) ಸೇನೆಯಿಂದ ಹಾಗೂ ಯುದ್ಧ ವಲಯದಿಂದ ಪಲಾಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಗಾರ್ಡ್ಗಳು ಥಳಿಸುತ್ತಿದ್ದರು ಎಂದು ಹೇಳಿದ್ದಾರೆ.
ಉಕ್ರೇನ್ನ ಭದ್ರತಾ ಅಧಿಕಾರಿಯೊಬ್ಬರು ವಿದ್ಯಾರ್ಥಿಗೆ ಹೊಡೆಯುವ ವೀಡಿಯೊಗಳು ವೈರಲ್ ಆದ ಬೆನ್ನಲ್ಲೇ ಇವಾನೊ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯ ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಶ್ರುತಿ ನಾಯಕ್ ಅವರ ಈ ಹೇಳಿಕೆಯು ಆತಂಕ ಮೂಡಿಸಿದೆ. ಏರ್ ಇಂಡಿಯಾ ವಿಮಾನದ ಮೂಲಕ ಉಕ್ರೇನ್‌ನಿಂದ ಭಾರತಕ್ಕೆ ಮರಳಿದ ಶ್ರುತಿ ಗುನಾದಲ್ಲಿರುವ ತನ್ನ ಮನೆಗೆ ತಲುಪಿದ್ದಾರೆ.
ಉಕ್ರೇನ್‌ನಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. “ಯುದ್ಧ ವಲಯದಿಂದ ಪಲಾಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಉಕ್ರೇನಿಯನ್ ಸಿಬ್ಬಂದಿ ಕಿರುಕುಳ ನೀಡುತ್ತಿದ್ದರು ಮತ್ತು ಅವರನ್ನು ಥಳಿಸಿದ್ದಾರೆ” ಎಂದು ಶ್ರುತಿ ನಾಯಕ್ ಹೇಳಿದ್ದಾರೆ. “ನಾನು ಭಾರತಕ್ಕೆ ಬಂದಿದ್ದೇನೆ ಮತ್ತು ಈಗ ಕುಟುಂಬ ಸದಸ್ಯರನ್ನು ಭೇಟಿಯಾದ ನಂತರ ನಾನು ಸಾಕಷ್ಟು ಅದೃಷ್ಟವಂತೆ ಎನಿಸುತ್ತಿದೆ” ಎಂದು ಅವರು ಹೇಳಿದ್ದಾರೆ. ಶ್ರುತಿ ನಾಯಕ್ ಅವರು ಫೆಬ್ರವರಿ 16ಕ್ಕೆ ಉಕ್ರೇನ್‌ನಿಂದ ರಿಟರ್ನ್ ಟಿಕೆಟ್ ಬುಕ್ ಮಾಡಿದ್ದರು. ಆದರೆ ಆ ವಿಮಾನ ರದ್ದಾಗಿತ್ತು.
ನಂತರ ಅವರು ಮಾರ್ಚ್ 3ಕ್ಕೆ ಟಿಕೆಟ್ ಕಾಯ್ದಿರಿಸಿದ್ದರು. ಆದರೆ ಅದು ಸಹ ರದ್ದುಗೊಂಡಿತ್ತು ಎಂದು ಅವರು ಹೇಳಿದ್ದಾರೆ. ಶ್ರುತಿ ನಾಯಕ್ ನಂತರ ಫೆಬ್ರವರಿ 26ರಂದು ರೊಮೇನಿಯಾ ತಲುಪಲು ಬಸ್‌ನಲ್ಲಿ 400 ಕಿಮೀ ಪ್ರಯಾಣಿಸಿದರು. ಅಲ್ಲಿನ ಸರ್ಕಾರವು ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದೆ ಎಂದು ಅವರು ಹೇಳಿದರು. ಅವರು ಫೆಬ್ರವರಿ 27ರಂದು ರೊಮೇನಿಯಾದಿಂದ ಸ್ಥಳಾಂತರಿಸುವವರಿಗೆ ವಿಶೇಷ ಏರ್ ಇಂಡಿಯಾ ವಿಮಾನವನ್ನು ಹತ್ತಿದರು ಮತ್ತು ಅದೇ ದಿನ ಸಂಜೆ 6.30ಕ್ಕೆ ನವದೆಹಲಿಯನ್ನು ತಲುಪಿದರು.
ಉಕ್ರೇನ್‌ನಲ್ಲಿ ಸಿಲುಕಿರುವ 180ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಜ್ಯ ಸರ್ಕಾರ ತೆರೆದಿರುವ ಸಹಾಯವಾಣಿಯನ್ನು ಸಂಪರ್ಕಿಸಿದ್ದಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಹಿಂದೆ ಹೇಳಿದ್ದರು. ಇಲ್ಲಿಯವರೆಗೆ, ಮಧ್ಯಪ್ರದೇಶದ 29 ಜನರು ಉಕ್ರೇನ್‌ನಿಂದ ಮರಳಿದ್ದಾರೆ ಎಂದು ಚೌಹಾಣ್ ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನ್‌ನಲ್ಲಿ ರಷ್ಯನ್ನರ ದಾಳಿಗೆ ಬಲಿಯಾದ ಹಾವೇರಿ ವಿದ್ಯಾರ್ಥಿಯ ಪೋಷಕರಿಗೆ ಕರೆ ಮಾಡಿದ ಪ್ರಧಾನಿ ಮೋದಿ
Russia-Ukraine War: ಮುಗಿಯದ ಯುದ್ಧ; ರಷ್ಯಾ, ಉಕ್ರೇನ್ ನಡುವೆ ಮಾ. 2ಕ್ಕೆ ಎರಡನೇ ಸುತ್ತಿನ ಮಾತುಕತೆ