ಉಕ್ರೇನ್​ನಲ್ಲಿ ರಷ್ಯನ್ನರ ದಾಳಿಗೆ ಬಲಿಯಾದ ಹಾವೇರಿ ವಿದ್ಯಾರ್ಥಿಯ ಪೋಷಕರಿಗೆ ಕರೆ ಮಾಡಿದ ಪ್ರಧಾನಿ ಮೋದಿ

ಉಕ್ರೇನ್​ನಲ್ಲಿ ರಷ್ಯನ್ನರ ದಾಳಿಗೆ ಬಲಿಯಾದ ಹಾವೇರಿ ವಿದ್ಯಾರ್ಥಿಯ ಪೋಷಕರಿಗೆ ಕರೆ ಮಾಡಿದ ಪ್ರಧಾನಿ ಮೋದಿ
ನವೀನ್

ಖಾರ್ಕಿವ್ ಶೆಲ್ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ ಸುದ್ದಿ ತಿಳಿದ ನಂತರ ಪ್ರಧಾನಿ ಮೋದಿ ನವೀನ್ ಅವರ ಕುಟುಂಬದೊಂದಿಗೆ ಮಾತನಾಡಿದ್ದಾರೆ.

TV9kannada Web Team

| Edited By: Sushma Chakre

Mar 01, 2022 | 7:50 PM

ಬೆಂಗಳೂರು: ಉಕ್ರೇನ್‌ನ ಖಾರ್ಕಿವ್‌ನಲ್ಲಿ ಮೃತಪಟ್ಟ ಕರ್ನಾಟಕದ ಹಾವೇರಿ ಮೂಲದ ವೈದ್ಯಕೀಯ ವಿದ್ಯಾರ್ಥಿ ನವೀನ್ (Naveen) ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಖಾರ್ಕಿವ್ ಶೆಲ್ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ ಸುದ್ದಿ ತಿಳಿದ ನಂತರ ಪ್ರಧಾನಿ ಮೋದಿ ನವೀನ್ ಅವರ ಕುಟುಂಬದೊಂದಿಗೆ ಮಾತನಾಡಿದ್ದಾರೆ. ಹಾಗೇ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕೂಡ ಮೃತ ನವೀನ್ ಕುಟುಂಬಸ್ಥರೊಂದಿಗೆ ಮಾತನಾಡಿ, ಸಾಂತ್ವನ ಹೇಳಿದ್ದಾರೆ. ಹಾವೇರಿ ಜಿಲ್ಲೆಯ ನವೀನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

ನವೀನ್ ಜ್ಞಾನಗೌಡರ ನಿಧನಕ್ಕೆ ಸಂತಾಪ ಸೂಚಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ನವೀನ್ ಅವರ ತಂದೆ ಶೇಖರಗೌಡ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಇದು ದೊಡ್ಡ ಆಘಾತವಾಗಿದೆ. ನವೀನ್ ಅವರಿಗೆ ಪರಮಾತ್ಮನು ಚಿರಶಾಂತಿಯನ್ನು ದಯಪಾಲಿಸಲಿ. ಈ ದುರಂತವನ್ನು ಸಹಿಸಿಕೊಳ್ಳಲು ನೀವು ಧೈರ್ಯದಿಂದಿರಬೇಕು. ನಿಮ್ಮ ಕುಟುಂಬಕ್ಕೆ ನನ್ನ ಆಳವಾದ ಸಂತಾಪ. ನವೀನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

“ಇಂದು ಬೆಳಿಗ್ಗೆ ಖಾರ್ಕಿವ್‌ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬರು ರಷ್ಯನ್ನರ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ನಾವು ಖಚಿತಪಡಿಸುತ್ತಿದ್ದೇವೆ. ಸಚಿವಾಲಯವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ. ಕುಟುಂಬಕ್ಕೆ ನಾವು ನಮ್ಮ ತೀವ್ರ ಸಂತಾಪವನ್ನು ತಿಳಿಸುತ್ತೇವೆ” ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ನವೀನ್ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ನವೀನ್ ಅವರ ತಂದೆಯೊಂದಿಗಿನ ಮಾತುಕತೆಯ ಸಂದರ್ಭದಲ್ಲಿ ಹೇಳಿದ್ದಾರೆ.

ನವೀನ್ ಅವರ ತಂದೆ, ಗೌಡ ಅವರು ಸಿಎಂ ಬೊಮ್ಮಾಯಿ ಅವರ ಜೊತೆ ಬೆಳಿಗ್ಗೆ ತಮ್ಮ ಮಗನೊಂದಿಗೆ ಫೋನ್ ಮೂಲಕ ಮಾತನಾಡಿದ್ದಾಗಿ ತಿಳಿಸಿದ್ದಾರೆ. ನಾನು ಪ್ರತಿದಿನ ಎರಡು ಅಥವಾ ಮೂರು ಬಾರಿ ಮಗನಿಗೆ ಕರೆ ಮಾಡುತ್ತಿದ್ದೆ ಎಂದು ಅವರು ಸಿಎಂಗೆ ಹೇಳಿದ್ದಾರೆ.

ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಮಂಗಳವಾರ ಬೆಳಗ್ಗೆ ರಷ್ಯಾದ ಪಡೆ ನಡೆಸಿದ ದಾಳಿಯಲ್ಲಿ ಹಾವೇರಿ ಜಿಲ್ಲೆಯ ಕರ್ನಾಟಕದ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ರಷ್ಯಾದ ಪಡೆಗಳು ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವನ್ನು ಪ್ರವೇಶಿಸಿ, ಉಕ್ರೇನ್ ಸರ್ಕಾರದ ಮೇಲೆ ಒತ್ತಡವನ್ನು ಹೇರಲು ಕಳೆದ ಎರಡು ದಿನಗಳಿಂದ ನಾಗರಿಕರ ಮೇಲೂ ದಾಳಿ ನಡೆಸುತ್ತಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಶೇಖರಪ್ಪ ಜ್ಞಾನಗೌಡರ್ (21) ಕಳೆದ ನಾಲ್ಕು ವರ್ಷಗಳಿಂದ ಉಕ್ರೇನ್​ನಲ್ಲಿರುವ ಖಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದರು. ಇಂದು ಬೆಳಗ್ಗೆ ಅರ್ಖಿಟೆಕ್ಟೋರಾ ಬೆಕೆಟೋವಾ ಮೆಟ್ರೋ ನಿಲ್ದಾಣದ ಬಂಕರ್‌ನಿಂದ ದಿನಸಿ ವಸ್ತುಗಳನ್ನು ತರಲು ಹೊರಟ ನವೀನ್ ಮೇಲೆ ಖಾರ್ಕಿವ್‌ನ ಬೀದಿಯಲ್ಲಿ ಶೆಲ್ ದಾಳಿ ನಡೆಸಲಾಗಿದೆ. ಇದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪ್ರಥಮ ವರ್ಷದ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ರಾಣೆಬೆನ್ನೂರಿನ ಪ್ರವೀಣ್ ಅವರ ಸ್ನೇಹಿತರೊಬ್ಬರು ನವೀನ್​ನ ಕುಟುಂಬದ ಸದಸ್ಯರಿಗೆ ಈ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ: ಶಿವರಾತ್ರಿ ದಿನ ವಿದ್ಯಾರ್ಥಿ ನವೀನ್ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ, ಸರಣಿ ಟ್ವೀಟ್ ಮೂಲಕ ಹೆಚ್ಡಿ ಕುಮಾರಸ್ವಾಮಿ ಸಂತಾಪ

ನವೀನ್​ ಸಾವಿನ ಬೆನ್ನಲ್ಲೇ ಕೇಂದ್ರ ಸರ್ಕಾರ ಫುಲ್ ಅಲರ್ಟ್​; ರಷ್ಯಾ, ಉಕ್ರೇನ್​ ರಾಯಭಾರಿಗಳನ್ನು ಕರೆಸಿ ಚರ್ಚೆ

Follow us on

Related Stories

Most Read Stories

Click on your DTH Provider to Add TV9 Kannada