ಶಿವರಾತ್ರಿ ದಿನ ವಿದ್ಯಾರ್ಥಿ ನವೀನ್ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ, ಸರಣಿ ಟ್ವೀಟ್ ಮೂಲಕ ಹೆಚ್ಡಿ ಕುಮಾರಸ್ವಾಮಿ ಸಂತಾಪ

ಶಿವರಾತ್ರಿ ದಿನ ವಿದ್ಯಾರ್ಥಿ ನವೀನ್ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ, ಸರಣಿ ಟ್ವೀಟ್ ಮೂಲಕ ಹೆಚ್ಡಿ ಕುಮಾರಸ್ವಾಮಿ ಸಂತಾಪ
ಹೆಚ್​​ ಡಿ ಕುಮಾರಸ್ವಾಮಿ

ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಇಂದು ಹಾವೇರಿ ಜಿಲ್ಲೆ ಚಳಗೇರಿಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಬಲಿ ಆಗಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ಯುದ್ಧದಿಂದ ತತ್ತರಿಸಿರುವ ಖಾರ್ಕೀವ್ ನಗರದಲ್ಲಿದ್ದ ಆ ವಿದ್ಯಾರ್ಥಿ ಶೆಲ್ ದಾಳಿಯಲ್ಲಿ ಅಸುನೀಗಿದ್ದಾರೆಂಬ ಸುದ್ದಿ ಶಿವರಾತ್ರಿ ದಿನ ಬರಸಿಡಿಲಿನಂತೆ ಅಪ್ಪಳಿಸಿದೆ.

TV9kannada Web Team

| Edited By: Ayesha Banu

Mar 01, 2022 | 7:26 PM

ಬೆಂಗಳೂರು: ಉಕ್ರೇನ್‌ ಮೇಲೆ ರಷ್ಯಾ(Russia Ukraine War) ನಡೆಸುತ್ತಿರುವ ದಾಳಿಯಲ್ಲಿ ಕರ್ನಾಟಕದ ಹಾವೇರಿಯ ವಿದ್ಯಾರ್ಥಿ ಉಕ್ರೇನ್ನ ಖಾರ್ಕಿವ್‌ನಲ್ಲಿ ಬಲಿಯಾಗಿದ್ದಾರೆ(Karnataka Student Died in Ukraine). ರಷ್ಯಾ ದಾಳಿಗೆ ನವೀನ್ ಶೇಖರಪ್ಪ ಗ್ಯಾನಗೌಡರ್ (21) ಬಲಿಯಾದ ವಿಷಯ ತಿಳಿಯುತ್ತಿದ್ದಂತೆ ಸಿಎಂ, ಪ್ರಧಾನಿ ಸೇರಿದಂತೆ ಗಣ್ಯರು ನವೀನ್ ಕುಟುಂಬಸ್ಥರಿಗೆ ಕರೆ ಮಾಡಿ ಸಂತಾಪ ಸೂಚಿಸಿದ್ದಾರೆ. ವೈದ್ಯನಾಗುವ ಕನಸು ಕಂಡು ದೂರದ ಊರಿಗೆ ಹೋಗಿದ್ದ ಮಗನ ಸ್ಥಿತಿಗೆ ಕುಟುಂಬಸ್ಥರು ಮರುಗುತ್ತಿದ್ದಾರೆ. ಸದ್ಯ ಈ ಬಗ್ಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಸರಣಿ ಟ್ವೀಟ್ಗಳನ್ನು ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

ಹೆಚ್ಡಿ ಕುಮಾರಸ್ವಾಮಿ ಅವರ ಸರಣಿ ಟ್ವೀಟ್ಗಳು ಈ ರೀತಿ ಇದೆ. ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಇಂದು ಹಾವೇರಿ ಜಿಲ್ಲೆ ಚಳಗೇರಿಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಬಲಿ ಆಗಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ಯುದ್ಧದಿಂದ ತತ್ತರಿಸಿರುವ ಖಾರ್ಕೀವ್ ನಗರದಲ್ಲಿದ್ದ ಆ ವಿದ್ಯಾರ್ಥಿ ಶೆಲ್ ದಾಳಿಯಲ್ಲಿ ಅಸುನೀಗಿದ್ದಾರೆಂಬ ಸುದ್ದಿ ಶಿವರಾತ್ರಿ ದಿನ ಬರಸಿಡಿಲಿನಂತೆ ಅಪ್ಪಳಿಸಿದೆ.

ವೈದ್ಯನಾಗಬೇಕು ಎಂಬ ಕನಸು ಹೊತ್ತು ನವೀನ್ ಅಲ್ಲಿಗೆ ಹೋಗಿದ್ದರು. ಭಾರತದಲ್ಲಿ, ದುಬಾರಿ ವೈದ್ಯ ಶಿಕ್ಷಣ ಕೈಗೆಟುಕದೇ ಅವರು ಉಕ್ರೇನ್ʼಗೆ ತೆರಳಿದ್ದರು. ಯುದ್ಧವು ಅವರ ಕನಸನ್ನು ನುಚ್ಚುನೂರು ಮಾಡಿದೆ. ಇಂಥ ಅನೇಕ ವಿದ್ಯಾರ್ಥಿಗಳು ಇನ್ನೂ ಖಾರ್ಕೀವ್ ನಗರದಲ್ಲೇ ಸಿಲುಕೊಂಡಿದ್ದಾರೆ.

ಶೆಲ್‌ ದಾಳಿಗೆ ತುತ್ತಾಗುವ ಮುನ್ನ 2 ಸಲ ತಮ್ಮ ಪೋಷಕರಿಗೆ ನವೀನ್‌ ಕರೆ ಮಾಡಿದ್ದರು, ಅದಾದ ಸ್ವಲ್ಪ ಹೊತ್ತಿನಲ್ಲೇ ಅಸುನೀಗಿದ್ದಾರೆ ಎಂಬುದನ್ನು ನೆನೆದರೆ ಬಹಳ ನೋವಾಗುತ್ತದೆ. ಬಾಂಬ್‌, ಕ್ಷಿಪಣಿ, ಶೆಲ್‌ ಸ್ಫೋಟಗಳಿಂದ ಅವರೆಲ್ಲರೂ ಖಾರ್ಕೀವ್‌ ನಗರದಲ್ಲಿ ತತ್ತರಿಸುತ್ತಿದ್ದಾರೆ. ಮೊದಲೇ ಇಲ್ಲಿ ಸಿಲುಕಿರುವವರನ್ನು ರಕ್ಷಿಸಬೇಕಿತ್ತು.

ಆ ವಿದ್ಯಾರ್ಥಿಳೆಲ್ಲರೂ 6 ದಿನಗಳಿಂದ ಬಂಕರ್‌ʼನಲ್ಲೇ ಇದ್ದಾರೆ. ಅವರೀಗ ಕೇವಲ ಚಾಕೋಲೇಟ್‌, ಬಿಸ್ಕೆಟ್‌, ಸ್ನೀಕರ್‌ʼಗಳನ್ನು ತಿನ್ನುತ್ತಾ ಬದುಕುಳಿದಿದ್ದಾರೆ. ನೀರು-ಆಹಾರಕ್ಕೆ ತತ್ವಾರವಾಗಿದೆ ಎಂದು ಅಲ್ಲಿನ ಕನ್ನಡ ವಿದ್ಯಾರ್ಥಿಗಳು ಮಾಧ್ಯಮಗಳ ಮೂಲಕ ಅಳಲು ತೋಡಿಕೊಳ್ಳುತ್ತಿದ್ದಾರೆ.

ಕೇಂದ್ರ ಸರಕಾರ ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಬೇಕು. ಕನ್ನಡಿಗರ ರಕ್ಷಣೆಗೆ ರಾಜ್ಯ ಸರಕಾರವೂ ಮತ್ತಷ್ಟು ಕ್ಷಿಪ್ರವಾಗಿ ಕೆಲಸ ಮಾಡಬೇಕು. ಇನ್ನೊಂದು ಜೀವ ಹೋಗಲೂ ಬಿಡಬಾರದು. ಉಕ್ರೇನ್‌ ಭಾರತೀಯ ರಾಯಭಾರ ಕಚೇರಿ ಸೂಕ್ತವಾಗಿ ಸ್ಪಂದಿಸುತ್ತಿವಲ್ಲವೆಂಬ ಆರೋಪವೂ ಕೇಳಿಬರುತ್ತಿದೆ.

ವಿದ್ಯಾರ್ಥಿ ನವೀನ್‌ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಮಗನನ್ನು ಕಳೆದುಕೊಂಡು ಅತೀವ ದುಃಖದಲ್ಲಿರುವ ಅವರ ಪೋಷಕರಿಗೆ ನನ್ನ ಪ್ರಗಾಢ ಸಂತಾಪಗಳು. ನವೀನ್‌ ಅವರ ಪಾರ್ಥೀವ ಶರೀರವನ್ನು ಆದಷ್ಟು ಬೇಗ ಅವರ ಕುಟುಂಬಕ್ಕೆ ತಲುಪಿಸುವ ಕೆಲಸ ಸರಕಾರದಿಂದ ಆಗಬೇಕು.

ಇದನ್ನೂ ಓದಿ: Manipur Polls 2022: ಕಾಂಗ್ರೆಸ್ ಮಣಿಪುರವನ್ನು ಸಂಪೂರ್ಣ ಲೂಟಿ ಮಾಡಿದೆ; ವಿಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ

ನವೀನ್​ ಸಾವಿನ ಬೆನ್ನಲ್ಲೇ ಕೇಂದ್ರ ಸರ್ಕಾರ ಫುಲ್ ಅಲರ್ಟ್​; ರಷ್ಯಾ, ಉಕ್ರೇನ್​ ರಾಯಭಾರಿಗಳನ್ನು ಕರೆಸಿ ಚರ್ಚೆ

Follow us on

Related Stories

Most Read Stories

Click on your DTH Provider to Add TV9 Kannada