ಉಕ್ರೇನ್‌ನಲ್ಲಿ ಕರ್ನಾಟಕದ ವಿದ್ಯಾರ್ಥಿ ಸಾವನ್ನಪ್ಪಿದ ಬೆನ್ನಲ್ಲೇ 4ನೇ ಬಾರಿಗೆ ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ಮೋದಿ
ಉಕ್ರೇನ್ ಉದ್ವಿಗ್ನತೆಯ ನಡುವೆ ಸಿಲುಕಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವ ಪ್ರಯತ್ನಗಳನ್ನು ಕೇಂದ್ರವು ಚುರುಕುಗೊಳಿಸಿದೆ.
ನವದೆಹಲಿ: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರುವ ಪ್ರಯತ್ನಗಳನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಮತ್ತೊಂದು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ತೀವ್ರವಾದ ಶೆಲ್ ದಾಳಿಗೆ ತುತ್ತಾದ ಪೂರ್ವ ಉಕ್ರೇನಿಯನ್ ನಗರವಾದ ಖಾರ್ಕಿವ್‌ನಲ್ಲಿ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಉಕ್ರೇನ್ ಸಂಘರ್ಷದ ಕುರಿತು ಪ್ರಧಾನಿ ಮೋದಿ ನಾಲ್ಕನೇ ಬಾರಿಗೆ ಉನ್ನತ ಮಟ್ಟ ಸಭೆ ನಡೆಸಿದ್ದಾರೆ. ಉಕ್ರೇನ್‌ನಲ್ಲಿ ಕರ್ನಾಟಕದ ನವೀನ್ ಶೇಖರಪ್ಪ ಜ್ಞಾನಗೌಡರ್ (21) ರಷ್ಯನ್ನರ್ ಶೆಲ್ ದಾಳಿಗೆ ಬಲಿಯಾಗಿದ್ದಾರೆ. ಅವರು ಖಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು.
ಪ್ರಧಾನಿ ಮೋದಿ ಕರೆದ ಉನ್ನತ ಮಟ್ಟದ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಉಕ್ರೇನ್ ಉದ್ವಿಗ್ನತೆಯ ನಡುವೆ ಸಿಲುಕಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವ ಪ್ರಯತ್ನಗಳನ್ನು ಕೇಂದ್ರವು ಚುರುಕುಗೊಳಿಸಿದೆ. ಭಾರತೀಯ ಪ್ರಜೆಗಳ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಸಂಘಟಿಸಲು ಮತ್ತು ಮೇಲ್ವಿಚಾರಣೆ ಮಾಡಲು ಉಕ್ರೇನ್ ಗಡಿಯಲ್ಲಿರುವ ನಾಲ್ಕು ನೆರೆಯ ದೇಶಗಳಿಗೆ ಸರ್ಕಾರವು ‘ವಿಶೇಷ ರಾಯಭಾರಿಗಳನ್ನು’ ನಿಯೋಜಿಸಿದೆ.
ಇಂದು ಮುಂಜಾನೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು “ಇಂದು ಬೆಳಿಗ್ಗೆ ಖಾರ್ಕಿವ್‌ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬರು ರಷ್ಯನ್ನರ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ನಾವು ಖಚಿತಪಡಿಸುತ್ತಿದ್ದೇವೆ. ಸಚಿವಾಲಯವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ. ಕುಟುಂಬಕ್ಕೆ ನಾವು ನಮ್ಮ ತೀವ್ರ ಸಂತಾಪವನ್ನು ತಿಳಿಸುತ್ತೇವೆ” ಎಂದು ಟ್ವೀಟ್ ಮಾಡಿತ್ತು.
ಕರ್ನಾಟಕದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಶೇಖರಪ್ಪ ಜ್ಞಾನಗೌಡರ್ (21) ಕಳೆದ ನಾಲ್ಕು ವರ್ಷಗಳಿಂದ ಉಕ್ರೇನ್ನಲ್ಲಿರುವ ಖಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದರು. ಇಂದು ಬೆಳಗ್ಗೆ ಅರ್ಖಿಟೆಕ್ಟೋರಾ ಬೆಕೆಟೋವಾ ಮೆಟ್ರೋ ನಿಲ್ದಾಣದ ಬಂಕರ್‌ನಿಂದ ದಿನಸಿ ವಸ್ತುಗಳನ್ನು ತರಲು ಹೊರಟ ನವೀನ್ ಮೇಲೆ ಖಾರ್ಕಿವ್‌ನ ಬೀದಿಯಲ್ಲಿ ಶೆಲ್ ದಾಳಿ ನಡೆಸಲಾಗಿದೆ. ಇದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪ್ರಥಮ ವರ್ಷದ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ರಾಣೆಬೆನ್ನೂರಿನ ಪ್ರವೀಣ್ ಅವರ ಸ್ನೇಹಿತರೊಬ್ಬರು ನವೀನ್ನ ಕುಟುಂಬದ ಸದಸ್ಯರಿಗೆ ಈ ವಿಷಯ ತಿಳಿಸಿದ್ದಾರೆ.
ಸೋಮವಾರ ಉಕ್ರೇನ್ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ 3ನೇ ಬಾರಿಗೆ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಚಿವರಾದ ಹರ್ದೀಪ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ವಿ ಕೆ ಸಿಂಗ್, ವಿದೇಶಾಂಗ ಸಚಿವ ಎಸ್ ಜೈಶಂಕರ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಇತರ ಉನ್ನತ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಆಪರೇಷನ್ ಗಂಗಾ ಅಡಿಯಲ್ಲಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ಪ್ರಗತಿ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಮಹತ್ವದ ಸಭೆ ನಡೆಸಿದ್ದರು. 2 ದಿನಗಳಲ್ಲಿ ಇಂದು 4ನೇ ಬಾರಿಗೆ ಮೋದಿ ಉನ್ನತ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸಭೆ ನಡೆಸಿದ್ದಾರೆ.
ಇದನ್ನೂ ಓದಿ: Russia-Ukraine War: ಮುಗಿಯದ ಯುದ್ಧ; ರಷ್ಯಾ, ಉಕ್ರೇನ್ ನಡುವೆ ಮಾ. 2ಕ್ಕೆ ಎರಡನೇ ಸುತ್ತಿನ ಮಾತುಕತೆ
ನವೀನ್ ಸಾವಿನ ಬೆನ್ನಲ್ಲೇ ಕೇಂದ್ರ ಸರ್ಕಾರ ಫುಲ್ ಅಲರ್ಟ್; ರಷ್ಯಾ, ಉಕ್ರೇನ್ ರಾಯಭಾರಿಗಳನ್ನು ಕರೆಸಿ ಚರ್ಚೆ