ಕೊವಿಡ್ ರೋಗ ತಡೆಯಲು ಸೆಗಣಿ ಬಳಸುವುದನ್ನು ನೋಡಿ ಅಳಬೇಕೋ ನಗಬೇಕೋ: ಅಖಿಲೇಶ್ ಯಾದವ್
Akhilesh Yadav: ಶ್ರೀ ಸ್ವಾಮಿನಾರಾಯಣ ಗುರುಕುಲ್ ವಿಶ್ವವಿದ್ಯಾ ಪ್ರತಿಷ್ಠಾನಂ ಎಂಬ ಶಾಲೆಯಲ್ಲಿ ಜನರು ದೇಹಕ್ಕೆ ಸೆಗಣಿ ಮೆತ್ತಿಕೊಂಡಿರುವುದರ ಬಗ್ಗೆ ರಾಯಿಟರ್ಸ್ ಸಂಸ್ಥೆಯ ವರದಿಯ ವಿಡಿಯೊವನ್ನು ಅಖಿಲೇಶ್ ರೀಟ್ವೀಟ್ ಮಾಡಿದ್ದಾರೆ.
ದೆಹಲಿ: ಕೊವಿಡ್ ವಿರುದ್ಧ ಪ್ರತಿರೋಧ ಶಕ್ತಿ ಪಡೆಯಲು ಗುಜರಾತಿನ ಅಹಮದಾಬಾದ್ ನಲ್ಲಿ ಜನರು ದೇಹಕ್ಕೆ ಗೋಮೂತ್ರ ಬೆರೆಸಿ ಸೆಗಣಿ ಮೆತ್ತಿಕೊಂಡಿರುವ ವಿಡಿಯೊ ಬಗ್ಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಇದನ್ನು ನೋಡಿ ನಗಬೇಕೋ ಅಳಬೇಕೋ ಎಂದು ಟ್ವೀಟ್ ಮಾಡಿದ್ದಾರೆ. ಶ್ರೀ ಸ್ವಾಮಿನಾರಾಯಣ ಗುರುಕುಲ್ ವಿಶ್ವವಿದ್ಯಾ ಪ್ರತಿಷ್ಠಾನಂ ಎಂಬ ಶಾಲೆಯಲ್ಲಿ ಜನರು ದೇಹಕ್ಕೆ ಸೆಗಣಿ ಮೆತ್ತಿಕೊಂಡಿರುವುದರ ಬಗ್ಗೆ ರಾಯಿಟರ್ಸ್ ಸಂಸ್ಥೆಯ ವರದಿಯ ವಿಡಿಯೊವನ್ನು ಅಖಿಲೇಶ್ ರೀಟ್ವೀಟ್ ಮಾಡಿದ್ದಾರೆ.
अब इस पर हँसे या रोएं… pic.twitter.com/NJIbiXmSoX
— Akhilesh Yadav (@yadavakhilesh) May 12, 2021
ಈ ಶಾಲೆಯಲ್ಲಿ ಕೆಲವರು ವಾರಕ್ಕೊಮ್ಮೆ ಗೋವಿನ ಸಗಣಿ ಮತ್ತು ಮೂತ್ರವನ್ನು ತಮ್ಮ ದೇಹದ ಮೇಲೆ ಹಚ್ಚಿ, ಹಸುಗಳನ್ನು ತಬ್ಬಿಕೊಳ್ಳುತ್ತಾರ, ಯೋಗಾಭ್ಯಾಸ ಮಾಡುತ್ತಾರೆ.
ಸುಮಾರು ಒಂದು 12 ಮಂದಿ ಪುರುಷರು ಮೈದಾನದಲ್ಲಿ ಅಂಗಿ ಬಿಚ್ಚಿ ಬಕೆಟ್ ನಲ್ಲಿರುವ ದ್ರವರೂಪದ ಹಸುವಿನ ಸೆಗಣಿಯನ್ನು ಮೈಕೈಗೆ ಹಚ್ಚಿಕೊಳ್ಳುತ್ತಿರುವುದು ವಿಡಿಯೊದಲ್ಲಿದೆ. ಸೆಗಣಿ ಹಚ್ಚಿದ ನಂತರ ವೃತ್ತಾಕಾರದಲ್ಲಿ ನಿಂತು ಎಲ್ಲರೂ ಪ್ರಾರ್ಥನೆ ಮಾಡುತ್ತಾರೆ.
ಗುಜರಾತಿನಲ್ಲಿ ಕೆಲವರು ವಾರಕ್ಕೊಮ್ಮೆ ಗೋಶಾಲೆಗಳಿಗೆ ಹೋಗಿ ಗೋಮೂತ್ರ ಮತ್ತು ಸೆಗಣಿಯನ್ನು ಶರೀರಕ್ಕೆ ಹಚ್ಚಿಕೊಳ್ಳುತ್ತಾರೆ. ಇದರಿಂದ ದೇಹದಲ್ಲಿ ಪ್ರತಿರೋಧ ಶಕ್ತಿ ಹೆಚ್ಚುತ್ತದೆ, ಕೊರೊನಾವೈರಸ್ ನಿಂದ ಚೇತರಿಕೆಯಾಗುತ್ತದೆ ಎಂಬ ನಂಬಿಕೆ ಇಲ್ಲಿದೆ.
ಹಿಂದೂ ಸಂಸ್ಕೃತಿಯಲ್ಲಿ ಗೋವನ್ನು ಪವಿತ್ರ ಎಂದು ಪೂಜಿಸಲಾಗುತ್ತದೆ. ಸೆಗಣಿಯಲ್ಲಿ ಔಷಧೀಯ ಮತ್ತು ರೋಗಾಣು ಮುಕ್ತಗೊಳಿಸುವ ಗುಣವಿದೆ ಎಂದು ಮನೆಗಳನ್ನು ಶುದ್ಧಿಗೊಳಿಸಲು ಸೆಗಣಿ ಬಳಸಲಾಗುತ್ತದೆ. ವೈದ್ಯರು ಕೂಡಾ ಇಲ್ಲಿಗೆ ಬರುತ್ತಾರೆ. ಸೆಗಣಿ ಹಚ್ಚುವುದರಿಂದ ರೋಗ ಪ್ರತಿರೋಧ ಶಕ್ತಿ ಹೆಚ್ಚುತ್ತದೆ ಎಂದು ಅವರು ನಂಬುತ್ತಾರೆ ಎಂದು ಫಾರ್ಮಸ್ಯುಟಿಕಲ್ಸ್ ಕಂಪನಿಯ ಅಸೋಸಿಯೇಟ್ ಮ್ಯಾನೇಜರ್ ಮಣಿಲಾಲ್ ಬೊರಿಸಾ ಹೇಳುತ್ತಾರೆ. ಕಳೆದ ವರ್ಷಕೊವಿಡ್ ಬಂದಾಗ ಸೆಗಣಿ ಹಚ್ಚುವ ಮೂಲಕ ರೋಗದಿಂದ ಗುಣಮುಖನಾಗಿದ್ದೆ ಅಂತಾರೆ ಬೊರಿಸಾ.
ಅಂದಿನಿಂದ ಅವರು ಹಿಂದೂ ಸನ್ಯಾಸಿಗಳು ನಡೆಸುತ್ತಿರುವ ಶ್ರೀ ಸ್ವಾಮಿನಾರಾಯಣ ಗುರುಕುಲ್ ವಿಶ್ವವಿದ್ಯಾ ಪ್ರತಿಷ್ಠಾನದಲ್ಲಿ ನಿಯಮಿತವಾಗಿ ಭೇಟಿ ನೀಡುತ್ತಾರೆ. ಈ ಸಂಸ್ಥೆ ಭಾರತದಲ್ಲಿ ಕೊವಿಡ್ ಲಸಿಕೆ ನಿರ್ಮಿಸುವ ಜೈಡಸ್ ಕ್ಯಾಡಿಲಾದ ಪ್ರಧಾನ ಕಚೇರಿಯ ಬಳಿಯಲ್ಲಿಯೇ ಇದೆ.
ಇಲ್ಲಿ ದೇಹಕ್ಕೆ ಸೆಗಣಿ ಮತ್ತು ಗೋಮೂತ್ರ ಹಚ್ಚಿ ಅದು ಒಣಗುವವರೆಗೆ ಆಶ್ರಮದಲ್ಲಿರುವ ಹಸುಗಳನ್ನು ತಬ್ಬಕೊಳ್ಳುತ್ತಾರೆ. ದೇಹದ ಚೈತನ್ಯ ಹೆಚ್ಚಿಸಲು ಯೋಗ ಮಾಡುತ್ತಾರೆ. ದೇಹಕ್ಕೆ ಹಚ್ಚಿದ ಸೆಗಣಿಯನ್ನು ಹಾಲು ಅಥವಾ ಮಜ್ಜಿಗೆಯಿಂದ ತೊಳೆಯಲಾಗುತ್ತದೆ.
ಭಾರತ ಮತ್ತು ವಿಶ್ವದಾದ್ಯಂತದ ವೈದ್ಯರು ಮತ್ತು ವಿಜ್ಞಾನಿಗಳು ಕೊವಿಡ್ ಗಾಗಿ ಪರ್ಯಾಯ ಚಿಕಿತ್ಸೆಯನ್ನು ಅಭ್ಯಾಸ ಮಾಡುವುದರ ವಿರುದ್ಧ ಪದೇ ಪದೇ ಎಚ್ಚರಿಕೆ ನೀಡಿದ್ದು, ಇಂಥಾ ಅಭ್ಯಾಸಗಳು ಆರೋಗ್ಯ ಸಮಸ್ಯೆಗಳನ್ನು ಸಂಕೀರ್ಣಗೊಳಿಸಬಹುದು ಎಂದು ಹೇಳಿದ್ದಾರೆ.
ಕೊವಿಡ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸೆಗಣಿ ಅಥವಾ ಗೋಮೂತ್ರವು ಕೆಲಸ ಮಾಡುತ್ತದೆ ಎಂಬುದಕ್ಕೆ ಯಾವುದೇ ದೃಢವಾದ ವೈಜ್ಞಾನಿಕ ಪುರಾವೆಗಳಿಲ್ಲ, ಇದು ಸಂಪೂರ್ಣವಾಗಿ ನಂಬಿಕೆಯ ಮೇಲೆ ಆಧಾರಿತವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ಹೇಳಿದರು.
ಇದನ್ನೂ ಓದಿ: ದೇಹಕ್ಕೆ ಸೆಗಣಿ ಮೆತ್ತಿದರೆ ರೋಗ ಪ್ರತಿರೋಧ ಶಕ್ತಿ ಹೆಚ್ಚುತ್ತದೆ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯಗಳಿಲ್ಲ: ತಜ್ಞರು
ಖಾಲಿ ಹೊಟ್ಟೆಯಲ್ಲಿ ಗೋಮೂತ್ರ ಸೇವಿಸಿ, ಕೊರೊನಾದಿಂದ ದೂರವಿರಿ: ಉತ್ತರ ಪ್ರದೇಶದ ಬಿಜೆಪಿ ಶಾಸಕ
(Should We Cry Or Laugh Akhilesh Yadav tweets On video from Gujarat’s Ahmedabad that shows Cow Dung As Covid Cure)
Published On - 4:30 pm, Wed, 12 May 21