Shraddha Walker: ಶ್ರದ್ಧಾ ವಾಕರ್ ಹತ್ಯೆ ಪ್ರಕರಣ, ಆಫ್ತಾಬ್ ಪೂನಾವಾಲಾ ವಿರುದ್ಧ ದೆಹಲಿ ಕೋರ್ಟ್ ಇಂದು ಆದೇಶ ನೀಡುವ ಸಾಧ್ಯತೆ
ದೆಹಲಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆಫ್ತಾಬ್ ಅಮೀನ್ ಪೂನಾವಾಲಾ ವಿರುದ್ಧ ಇಂದು (ಏ.29) ದೆಹಲಿ ನ್ಯಾಯಾಲಯವು ಆದೇಶವನ್ನು ಪ್ರಕಟಿಸುವ ಸಾಧ್ಯತೆಯಿದೆ .
ದೆಹಲಿ: ಭಾರತವನ್ನೇ ಬೆಚ್ಚಿಬಿಳಿಸಿದ ದೆಹಲಿ ಶ್ರದ್ಧಾ ವಾಕರ್ (Shraddha Walker) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಿವ್-ಇನ್ ಪಾಲುದಾರ ಹಾಗೂ ಶ್ರದ್ಧಾ ವಾಕರ್ನ್ನು ಕೊಂದು, ದೇಹದ ತುಂಡುಗಳನ್ನು ಫ್ರಿಜ್ನಲ್ಲಿಟ್ಟ ಆರೋಪಿ ಆಫ್ತಾಬ್ ಅಮೀನ್ ಪೂನಾವಾಲಾ ವಿರುದ್ಧ ಇಂದು (ಏ.29) ದೆಹಲಿ ನ್ಯಾಯಾಲಯವು ಆದೇಶವನ್ನು ಪ್ರಕಟಿಸುವ ಸಾಧ್ಯತೆಯಿದೆ . ಪೊಲೀಸರ ವಿಶೇಷ ಕಾರ್ಯಚರಣೆ ಮೂಲಕ ಆಕೆ ದೇಹದ ಭಾಗಗಳನ್ನು ಪತ್ತೆ ಮಾಡಿದ್ದು, ಇದೀಗ ಕುಟುಂಬದವರು ಸಂಪ್ರದಾಯ ಮತ್ತು ಸಂಸ್ಕೃತಿಗೆ ಅನುಗುಣವಾಗಿ ಅಂತಿಮ ವಿಧಿವಿಧಾನಗಳಿಗಾಗಿ ಆಕೆಯ ಅಸ್ಥಿಯನ್ನು ನಮಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿ ವಾಕರ್ ಅವರ ತಂದೆ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಗೆ ದೆಹಲಿ ಪೊಲೀಸರು ನಾಳೆ (ಏ.30) ಉತ್ತರವನ್ನು ಸಲ್ಲಿಸಲಿದ್ದಾರೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮನಿಷಾ ಖುರಾನಾ ಕಕ್ಕರ್ ಅವರು ಪ್ರಾಸಿಕ್ಯೂಷನ್ ವಕೀಲರು ಮತ್ತು ಆರೋಪಿ ವಿರುದ್ಧ ಸಲ್ಲಿಸಿರುವ ಆರೋಪಗಳ ಕುರಿತು ವಾದಗಳನ್ನು ಆಲಿಸಿದ ನಂತರ ಏಪ್ರಿಲ್ 15ರಂದು ಆದೇಶವನ್ನು ಕಾಯ್ದಿರಿಸಿದರು.
ಏಪ್ರಿಲ್ 15 ರಂದು ತನಿಖಾ ಸಂಸ್ಥೆಯು ವಾಕರ್ ಅವರ ತಂದೆಯ ಅರ್ಜಿಗೆ ಉತ್ತರವನ್ನು ಸಲ್ಲಿಸಲು ಸಮಯ ಕೋರಿತ್ತು. ಪೂನಾವಾಲಾ ವಿರುದ್ಧ ದೆಹಲಿ ಪೊಲೀಸರು ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 201 (ಅಪರಾಧದ ಸಾಕ್ಷ್ಯಾಧಾರ ಕಣ್ಮರೆಯಾಗಲು ಕಾರಣ) ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಿದ್ದಾರೆ.
ದೆಹಲಿ ಪೊಲೀಸರು ಜನವರಿ 24 ರಂದು ಪ್ರಕರಣದಲ್ಲಿ 6,629 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಕಳೆದ ವರ್ಷ ಮೇ 18 ರಂದು ವಾಕರ್ ಅವರನ್ನು ಪೂನಾವಾಲಾ ಕತ್ತು ಹಿಸುಕಿ ಹತ್ಯೆಗೈದರು, ನಂತರ ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ಆತನ ನಿವಾಸದಲ್ಲಿ ಸುಮಾರು ಮೂರು ವಾರಗಳ ಕಾಲ ಫ್ರಿಡ್ಜ್‌ನಲ್ಲಿ ಇರಿಸಿದ್ದ.
ಇದರಿಂದ ತಪ್ಪಿಸಿಕೊಳ್ಳಲು ಮತ್ತು ಯಾರಿಗೂ ಅನುಮಾನ ಬರದಂತೆ ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಆಕೆಯ ದೇಹದ ತುಂಡುಗಳನ್ನು ದೆಹಲಿಯ ಬೇರೆ ಬೇರೆ ಸ್ಥಳಗಳಲ್ಲಿ ಎಸೆದಿದ್ದಾನೆ ಎಂದು ಹೇಳಲಾಗಿತ್ತು, ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಇಂದು ತೀರ್ಪು ನೀಡಬಹುದು ಎಂದು ಹೇಳಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ