ಒಮಿಕ್ರಾನ್ ಸೋಂಕು ಹೆಚ್ಚಾದ ಬೆನ್ನಲ್ಲೇ ಭಾರತ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದರಲ್ಲೂ ಒಮಿಕ್ರಾನ್ ಹೈ ರಿಸ್ಕ್ ದೇಶಗಳು ಎಂದು ವಿಂಗಡಿಸಿಕೊಂಡು, ಅಂಥ ದೇಶಗಳಿಂದ ಭಾರತಕ್ಕೆ ಬರುವವರು ಕಡ್ಡಾಯವಾಗಿ ಕೆಲವು ನಿಯಮಗಳ ಪಾಲನೆ ಮಾಡಬೇಕಿದೆ. ಆದರೆ ಈಗೊಂದು ಆತಂಕ ಎದುರಾಗಿದೆ. ಒಮಿಕ್ರಾನ್ ಹೈರಿಸ್ಕ್ ಇರುವ ದೇಶಗಳಿಂದ ಬುಧವಾರ ಒಟ್ಟಾರೆ 3 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಭಾರತಕ್ಕೆ ಬಂದಿದ್ದು, ಅವರಲ್ಲಿ ಆರು ಮಂದಿಯಲ್ಲಿ ಬುಧವಾರ ಕೊವಿಡ್ 19 ವೈರಸ್ ದೃಢಪಟ್ಟಿದೆ. ಇದು ಒಮಿಕ್ರಾನ್ ಸೋಂಕಿರಬಹುದಾ ಎಂದು ಪತ್ತೆ ಹಚ್ಚಲು ಸೋಂಕಿತರ ಮಾದರಿಯನ್ನು ಜಿನೋಮಿಕ್ ಸಿಕ್ವೆನ್ಸಿಂಗ್ಗೆ ಕಳಿಸಲಾಗಿದೆ.
ಬುಧವಾರ ಮಧ್ಯಾಹ್ನ 4ಗಂಟೆಯವರೆಗೆ ಒಟ್ಟು 11 ಅಂತಾರಾಷ್ಟ್ರೀಯ ವಿಮಾನಗಳು ಭಾರತದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಲ್ಯಾಂಡ್ ಆಗಿವೆ. ಇವುಗಳಿಂದ 3476 ಪ್ರಯಾಣಿಕರು ಆಗಮಿಸಿದ್ದಾರೆ. ಹೀಗೆ ತಲುಪಿದ ಎಲ್ಲ ಪ್ರಯಾಣಿಕರಿಗೂ ನಿಯಮದಂತೆ ಆರ್ಟಿಪಿಸಿಆರ್ ಟೆಸ್ಟ್ ಮಾಡಲಾಗಿದೆ. ಅದರಲ್ಲಿ 6ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ನೆದರ್ಲ್ಯಾಂಡ್ ಮತ್ತು ಯುಕೆಯಿಂದ ದೆಹಲಿಗೆ ಬಂದ ಒಟ್ಟು ನಾಲ್ವರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಇವೆರಡೂ ಕೂಡ ಒಮಿಕ್ರಾನ್ ಹೈರಿಸ್ಕ್ ದೇಶಗಳ ಪಟ್ಟಿಗೇ ಸೇರುತ್ತವೆ. ಹೀಗೆ ಕೊರೊನಾ ದೃಢಪಟ್ಟವರನ್ನು ಸದ್ಯ ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೇ, ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆ ವಿಚಾರದಲ್ಲಿ ಗಮನಹರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರದ ಜತೆಗೆ ಕೆಲವು ರಾಜ್ಯಸರ್ಕಾರಗಳೂ ಕೂಡ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಪಡಿಸಿವೆ. ಈ ಸಾಲಿನಲ್ಲಿ ಮಹಾರಾಷ್ಟ್ರವೂ ಒಂದು. ಮಹಾರಾಷ್ಟ್ರಕ್ಕೆ ಹೈರಿಸ್ಕ್ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರು ಕಡ್ಡಾಯವಾಗಿ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾಗಬೇಕು. 2, 4 ಮತ್ತು 7ನೇ ದಿನ ಆರ್ಟಿಪಿಸಿಆರ್ ಟೆಸ್ಟ್ ಆಗಬೇಕು. ಈ ಮೂರು ಟೆಸ್ಟ್ಗಳಲ್ಲಿ ಒಂದು ಟೆಸ್ಟ್ನಲ್ಲಿ ವರದಿ ಪಾಸಿಟಿವ್ ಬಂದರೂ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗುವುದು ಎಂದು ಮಹಾ ಸರ್ಕಾರ ಹೇಳಿದೆ. ಕರ್ನಟಕ ಕೂಡ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನಿಯಮ ಪ್ರಕಟಿಸಿದೆ. ಒಮಿಕ್ರಾನ್ ಹೈರಿಸ್ಕ್ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಆರ್ಟಿಸಿಪಿಆರ್ ಟೆಸ್ಟ್ ಮಾಡಲಾಗುವುದು. ಯಾರಲ್ಲೇ ಕೊವಿಡ್ 19 ಕಂಡುಬಂದರೂ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗುವುದು. ಯಾರಲ್ಲಾದರೂ ನೆಗೆಟಿವ್ ಬಂದರೂ ಕೂಡ ಅವರು ಏಳು ದಿನಗಳ ಕಾಲ ಮನೆಯಲ್ಲೇ ಕ್ವಾರಂಟೈನ್ ಆಗಬೇಕು. ಕ್ವಾರಂಟೈನ್ನ 5ನೇ ದಿನಕ್ಕೆ ಒಂದು ಆರ್ಟಿಪಿಸಿಆರ್ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ಇದನ್ನೂ ಓದಿ: Karnataka Weather Today: ಇಂದಿನಿಂದ 3 ದಿನ ಕರ್ನಾಟಕದಲ್ಲಿ ವ್ಯಾಪಕ ಮಳೆ; ಆಂಧ್ರ ಪ್ರದೇಶ, ಒಡಿಶಾದಲ್ಲಿ ಚಂಡಮಾರುತದ ಭೀತಿ
Published On - 7:34 am, Thu, 2 December 21