ಕೇರಳ: ಅಪಹರಣಕ್ಕೊಳಗಾದ 6ರ ಹರೆಯದ ಬಾಲಕಿ 21 ಗಂಟೆಗಳ ನಂತರ ಪತ್ತೆ
ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಅಪಹರಣಕ್ಕೊಳಗಾದ 6ರ ಹರೆಯದ ಬಾಲಕಿ ಅಬಿಗೇಲ್ ಸಾರಾ ರೆಜಿ ಪತ್ತೆಯಾಗಿದ್ದಾಳೆ. ಬಾಲಕಿಯನ್ನು ಬಿಡುಗಡೆ ಮಾಡುವುದಕ್ಕೆ 10 ಲಕ್ಷ ನೀಡಬೇಕು ಎಂದು ಅಪಹರಣಕಾರರು ಬೇಡಿಕೆಯೊಡ್ಡಿದ್ದರು. ಕೇರಳ ಪೊಲೀಸರ ತ್ವರಿತ ಕಾರ್ಯಾಚರಣೆಯ ಫಲವಾಗಿ 21 ಗಂಟೆಗಳ ನಂತರ ಅಪಹರಣಕಾರರು ಬಾಲಕಿಯನ್ನು ಆಶ್ರಮ ಮೈದಾನದಲ್ಲಿ ಬಿಟ್ಟು ಓಡಿ ಹೋಗಿದ್ದಾರೆ.
ಕೊಲ್ಲಂ (ಕೇರಳ) ನವೆಂಬರ್ 28: ಒಂದು ದಿನದ ಹಿಂದೆ ದಕ್ಷಿಣ ಕೇರಳದ (Kerala) ಪುಯಪ್ಪಳ್ಳಿಯಿಂದ (Pooyappally )ಆರು ವರ್ಷದ ಬಾಲಕಿ ಅಬಿಗೇಲ್ ಸಾರಾ ರೆಜಿಯನ್ನು (Abigail sara reji) ಅಪಹರಿಸಿದ 21 ಗಂಟೆಗಳ ನಂತರ, ಮಗು ಮಂಗಳವಾರ ಮಧ್ಯಾಹ್ನ ಇಲ್ಲಿನ ಸಾರ್ವಜನಿಕ ಮೈದಾನದಲ್ಲಿ ಪತ್ತೆಯಾಗಿದೆ. ಅಪಹರಣಕಾರರು ಬಾಲಕಿಯನ್ನು ಉಪೇಕ್ಷಿಸಿದ್ದು, ಆಕೆಯನ್ನು ಪೊಲೀಸರು ಸುರಕ್ಷಿತವಾಗಿ ಕರೆ ತಂದಿದ್ದಾರೆ. ಪೊಲೀಸರು ಮತ್ತು ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಮಗು ಪತ್ತೆಯಾಗಿದ್ದು, ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.
ಟಿವಿ ಚಾನೆಲ್‌ಗಳಲ್ಲಿನ ದೃಶ್ಯಗಳು ಪೊಲೀಸ್ ಅಧಿಕಾರಿಗಳು ಬಾಲಕಿಯನ್ನು ಎತ್ತಿಕೊಂಡು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿರುವುದನ್ನು ತೋರಿಸಿವೆ. ಬಾಲಕಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿರುವಾಗಲೇ ಕೊಲ್ಲಂನ ಆಶ್ರಮ ಮೈದಾನದಲ್ಲಿ ಮಗುವನ್ನು ಬಿಟ್ಟು ಹೋಗಿರುವ ಬಗ್ಗೆ ಮಾಹಿತಿ ಲಭಿಸಿದೆ. ರಾಜ್ಯ ಸಚಿವರು ಪೊಲೀಸ್ ತನಿಖೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರೆ, ಬಾಲಕಿಯನ್ನು ರಕ್ಷಿಸುವಲ್ಲಿ ವಿಳಂಬವಾದ ಬಗ್ಗೆ ಪುಯಪ್ಪಳ್ಳಿ ಪೊಲೀಸ್ ಠಾಣೆಯ ಹೊರಗೆ ಕಾಂಗ್ರೆಸ್ ಯುವ ಘಟಕ ಮೌನ ಪ್ರತಿಭಟನೆ ನಡೆಸಿತ್ತು.
ನಾಪತ್ತೆಯಾಗಿರುವ ಮಗುವಿನ ಪತ್ತೆಗೆ ಎಲ್ಲಾ ರೀತಿಯಲ್ಲಿಯೂ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದು, ಶಂಕಿತ ಅಪಹರಣಕಾರನ ರೇಖಾಚಿತ್ರವನ್ನೂ ಬಿಡುಗಡೆ ಮಾಡಿದ್ದಾರೆ. ಬಾಲಕಿ ತನ್ನ ಎಂಟು ವರ್ಷದ ಸಹೋದರನೊಂದಿಗೆ ಟ್ಯೂಷನ್ ತರಗತಿಗೆ ತೆರಳುತ್ತಿದ್ದಾಗ ಮಹಿಳೆ ಸೇರಿದಂತೆ ನಾಲ್ವರಿರಬಹುದು ಎಂದು ಶಂಕಿಸಲಾದ ಅಪಹರಣಕಾರರು ಬಿಳಿ ಕಾರಿನಲ್ಲಿ ಬಂದು ಬಾಲಕಿಯನ್ನು ಅಪಹರಿಸಿದ್ದಾರೆ ಎಂದು ಬಾಲಕ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಪಹರಣಕಾರರನ್ನು ತಡೆಯಲು ಹುಡುಗ ಪ್ರಯತ್ನಿಸಿದಾಗ, ಅವರು ಅವನನ್ನು ಪಕ್ಕಕ್ಕೆ ತಳ್ಳಿ, ಹುಡುಗಿಯನ್ನು ಕಾರಿನಲ್ಲಿ ಅಪಹರಣ ಮಾಡಿದರು ಎಂದು ಪುಯಪ್ಪಳ್ಳಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ತಂಗಿಯನ್ನು ರಕ್ಷಿಸಲು ಯತ್ನಿಸಿದಾಗ ಬಾಲಕನ ಮೊಣಕಾಲುಗಳಿಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಸಂಜೆ 4 ರಿಂದ 4.30 ರ ನಡುವೆ ಈ ಘಟನೆ ನಡೆದಿದೆ.
ಕೇರಳದ ಸುದ್ದಿ ವಾಹಿನಿಗಳಲ್ಲಿ ತೋರಿಸಲಾದ ದೃಶ್ಯಗಳ ಪ್ರಕಾರ, ಅಪಹರಣಕಾರರು ಆರಂಭದಲ್ಲಿ ₹ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು ನಂತರ 10 ಲಕ್ಷದ ಬೇಡಿಕೆಯಿರಿಸಿದ್ದರು. ಎರಡನೇ ಬಾರಿ ಕರೆ ಮಾಡಿದ ಅಪಹರಣಕಾರರು ಬಾಲಕಿ ಸುರಕ್ಷಿತವಾಗಿದ್ದು, ಆಕೆಗೆ ಯಾವುದೇ ಹಾನಿ ಆಗಿಲ್ಲ. ಮಂಗಳವಾರ ಬೆಳಿಗ್ಗೆ ₹ 10 ಲಕ್ಷ ಪಾವತಿಸಿದರೆ ಆಕೆಯನ್ನು ಹಿಂತಿರುಗಿಸಲಾಗುವುದು ಎಂದು ಹೇಳಿದ್ದರು. ಪೊಲೀಸರಿಗೆ ಮಾಹಿತಿ ನೀಡದಂತೆ ಅಪಹರಣಕಾರರು ಪೋಷಕರಿಗೆ ಎಚ್ಚರಿಕೆಯನ್ನೂ ನೀಡಿದ್ದರು. ಅದಕ್ಕೂ ಮುನ್ನ ಅಪಹರಣವಾದ ಕೆಲವೇ ಗಂಟೆಗಳಲ್ಲಿ ಪೋಷಕರಿಗೆ ₹ 5 ಲಕ್ಷ ಬೇಡಿಕೆಯ ಕರೆ ಬಂದಿತ್ತು.
ಇದನ್ನೂ ಓದಿ: ಕೇರಳ: ಕುಸಾಟ್ ಟೆಕ್ ಫೆಸ್ಟ್ ವೇಳೆ ಕಾಲ್ತುಳಿತ; 4 ವಿದ್ಯಾರ್ಥಿಗಳು ಸಾವು
ಕೊಲ್ಲಂ, ಪತ್ತನಂತಿಟ್ಟ ಮತ್ತು ತಿರುವನಂತಪುರಂನ ದಕ್ಷಿಣ ಜಿಲ್ಲೆಗಳ ಎಲ್ಲಾ ಪ್ರಮುಖ ಮತ್ತು ಚಿಕ್ಕ ರಸ್ತೆಗಳಲ್ಲಿ ವಾಹನಗಳನ್ನು ತಪಾಸಣೆ ಮಾಡುವ ಮೂಲಕ ಪೊಲೀಸರು ಬಾಲಕಿಯ ಹುಡುಕಾಟವನ್ನು ತೀವ್ರಗೊಳಿಸಿದ್ದರು. ಬಾಲಕಿಯ ಪೋಷಕರು ಎರಡು ಪ್ರತ್ಯೇಕ ಖಾಸಗಿ ಆಸ್ಪತ್ರೆಗಳಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.
ಆಶ್ರಮ ಮೈದಾನದಲ್ಲಿ ಮಗುವನ್ನು ಬಿಟ್ಟು ಹೋಗಿದ್ದ ಅಪಹರಣಕಾರರು
ಆಶ್ರಮ ಮೈದಾನದಲ್ಲಿ ಸ್ಥಳೀಯರು ಮೊದಲು ಅಬಿಗೈಲ್ ಸಾರಾಳನ್ನು ನೋಡಿದ್ದಾರೆ. ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿದ ಚಿತ್ರಗಳ ಮೂಲಕ ಮಗುವನ್ನು ಗುರುತಿಸಲಾಗಿದೆ. ಮಗುವನ್ನು ನೆಲದ ಮೇಲೆ ಕೂರಿಸಿದ ಬಳಿಕ ಜೊತೆಯಲ್ಲಿದ್ದ ಮಹಿಳೆ ಓಡಿ ಹೋಗುವುದನ್ನು ನೋಡಿದ್ದೇನೆ ಎಂದು ಮಗುವನ್ನು ಮೊದಲು ನೋಡಿದ ಯುವತಿ ಧನಂಜಯಾ ಹೇಳಿದ್ದಾರೆ. ಒಂದು ಮಗು ಮತ್ತು ಮಹಿಳೆ ಮಾತ್ರ ಅಲ್ಲಿದ್ದು, ಅವರೊಂದಿಗೆ ಯಾವುದೇ ಪುರುಷರು ಇರಲಿಲ್ಲ ಎಂದು ಕೊಲ್ಲಂನ ಎಸ್‌ಎನ್ ಕಾಲೇಜಿನ ವಿದ್ಯಾರ್ಥಿ ಧನಂಜಯಾ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ