ಸೋಷಿಯಲ್ ಮೀಡಿಯಾಕ್ಕೆ ಮಾರ್ಗದರ್ಶಿ ಸೂತ್ರಗಳ ಕಡಿವಾಣ: ದೂರು ಪ್ರಾಧಿಕಾರ ರಚಿಸಲು ಕೇಂದ್ರ ಸರ್ಕಾರ ಸೂಚನೆ
ದೇಶದ ಸಾರ್ವಭೌಮತೆ ಮತ್ತು ಮಹಿಳೆಯರು-ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವುದು ಈ ಮಾರ್ಗದರ್ಶಿ ಸೂತ್ರಗಳ ಮುಖ್ಯ ಉದ್ದೇಶ. ಈ ಸೂತ್ರಗಳನ್ನು 3 ತಿಂಗಳ ಒಳಗೆ ಜಾರಿ ಮಾಡಲಾಗುವುದು ಎಂದು ಕೇಂದ್ರ ಕಾನೂನು ವ್ಯವಹಾರಗಳ ಸಚಿವ ರವಿಶಂಕರ್ ಪ್ರಸಾದ್ ಮಾಹಿತಿ ನೀಡಿದ್ದಾರೆ.
ದೆಹಲಿ: ಕೇಂದ್ರ ಸರ್ಕಾರವು ಗುರುವಾರ (ಫೆ.25) ಸಾಮಾಜಿಕ ಮಾಧ್ಯಮಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ಘೋಷಿಸಿದೆ. ಕೇಂದ್ರ ಕಾನೂನು ವ್ಯವಹಾರಗಳ ಸಚಿವ ರವಿಶಂಕರ್ ಪ್ರಸಾದ್ ಮಾರ್ಗದರ್ಶಿ ಸೂತ್ರಗಳ ವಿವರಗಳನ್ನು ಮಾಧ್ಯಮಗಳಿಗೆ ನೀಡಿದರು. ಸುಪ್ರೀಂಕೋರ್ಟ್ ಸೂಚನೆ ಮತ್ತು ರಾಜ್ಯಸಭೆಯ ನಿರ್ಣಯಕ್ಕೆ ಅನುಗುಣವಾಗಿ ಈ ಮಾರ್ಗದರ್ಶಿ ಸೂಚನೆಗಳನ್ನು ರಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ದೇಶದ ಸಾರ್ವಭೌಮತೆ ಮತ್ತು ಮಹಿಳೆಯರು-ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವುದು ಈ ಮಾರ್ಗದರ್ಶಿ ಸೂತ್ರಗಳ ಮುಖ್ಯ ಉದ್ದೇಶ ಎಂದು ಸಚಿವರು ಹೇಳಿದ್ದಾರೆ. ಈ ಸೂತ್ರಗಳನ್ನು 3 ತಿಂಗಳ ಒಳಗೆ ಜಾರಿ ಮಾಡಲಾಗುವುದು ಎಂದು ಘೋಷಿಸಿದರು.
ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಭಯೋತ್ಪಾದಕರು ಸಾಫ್ಟ್ಟಚ್ ಓವರ್ಸೈಟ್ ಮೆಕಾನಿಸಂ ಮಾರ್ಗ ಅನುಸರಿಸುತ್ತಿದ್ದಾರೆ. ಭಾರತದಲ್ಲಿ 53 ಕೋಟಿ ಮಂದಿ ವಾಟ್ಸಾಪ್, 44.8 ಕೋಟಿ ಮಂದಿ ಯುಟ್ಯೂಬ್, 41 ಕೋಟಿ ಮಂದಿ ಫೇಸ್ಬುಕ್, 21 ಕೋಟಿ ಮಂದಿ ಇನ್ಸ್ಟಾಗ್ರಾಂ, 1.5 ಕೋಟಿ ಮಂದಿ ಟ್ವಿಟರ್ ಬಳಸುತ್ತಿದ್ದಾರೆ. ಈ ಸಾಮಾಜಿಕ ಜಾಲತಾಣಗಳನ್ನು ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ಬಳಸ್ತಾ ಇದ್ದಾರೆ ಎನ್ನುವ ಬಗ್ಗೆ ನಮಗೆ ಖುಷಿಯಿದೆ. ಆದರೆ, ಇದೇ ಸೋಷಿಯಲ್ ಮೀಡಿಯಾಗಳ ದುರ್ಬಳಕೆ ಬಗ್ಗೆ ಖೇದವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಸಾಮಾಜಿಕ ಮಾಧ್ಯಮ ಕ್ರಾಂತಿ ಆಗಿದೆ. ಕೆಲವರು ರಾತ್ರೋರಾತ್ರಿ ಪ್ರಕಾಶಕರಾಗಿದ್ದಾರೆ. ಕೋರ್ಟ್ಗಳಲ್ಲಿ ಇದ್ದಂತೆ ಫ್ಯಾಕ್ಟ್ಚೆಕ್ ಮಿಷನ್ ಆಗಿ ಬಳಸ್ತಾ ಇದ್ದಾರೆ. ಈಗ ತರಲಾಗುತ್ತಿರುವ ಸೂತ್ರಗಳು ಕೆಲವು ಪ್ರಮುಖ ವಿಚಾರಗಳನ್ನು ಒಳಗೊಂಡಿವೆ. ಅದರಲ್ಲಿನ ಮುಖ್ಯ ಅಂಶಗಳ ಪೈಕಿ ಸೋಷಿಯಲ್ ಮೀಡಿಯಾ ಇಂಟರ್ಮೀಡಿಯರಿ ಹಾಗೂ ಸಿಗ್ನಿಫಿಕೆಂಟ್ ಸೋಷಿಯಲ್ ಮೀಡಿಯಾ ಇಂಟರ್ಮೀಡಿಯರಿ ಎಂಬ ಎರಡು ವಿಂಗಡನೆಗಳಿವೆ. ಎರಡನೆಯದರಲ್ಲಿ ಹೆಚ್ಚುವರಿ ನಿಬಂಧನೆಗಳು ಇರುತ್ತವೆ. ಇದಕ್ಕೆ ದೂರು ಪರಿಹಾರ ವಿಧಾನವನ್ನು ರೂಪಿಸುತ್ತೇವೆ. ದೂರನ್ನು 24 ಗಂಟೆಯ ಒಳಗೆ ನೀಡಬೇಕು ಹಾಗೂ ಆ ದೂರನ್ನು 15 ದಿನಗಳ ಒಳಗೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ದೂರಿದ್ದರೆ ಒಂದೇ ದಿನದಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಹೇಳಿದರು.
ಎಲ್ಲ ಸಾಮಾಜಿಕ ಮಾಧ್ಯಮಗಳೂ ಮುಖ್ಯ ದೂರು ಪ್ರಾಧಿಕಾರ ಅಧಿಕಾರಿಯನ್ನು ಹೊಂದಿರಬೇಕು. ಅವರು ಭಾರತೀಯ ಪ್ರಜೆಯೇ ಆಗಿರಬೇಕು. ಪ್ರತಿ ತಿಂಗಳು ಎಲ್ಲ ಸಾಮಾಜಿಕ ಮಾಧ್ಯಮಗಳೂ ಸಲ್ಲಿಕೆಯಾದ ದೂರುಗಳ ಬಗ್ಗೆ ಮಾಹಿತಿ ಪ್ರಕಟಿಸಬೇಕು. ದೂರುಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.
Published On - 2:28 pm, Thu, 25 February 21