ಕೆಲವರು ಮತ ನೀಡುತ್ತಾರೆ, ಇನ್ನು ಕೆಲವರು ಕಪಾಳಕ್ಕೆ ಹೊಡೆಯುತ್ತಾರೆ: ಸಂಜಯ್ ರಾವತ್
ಕೆಲವರು ಮತ ನೀಡ್ತಾರೆ, ಇನ್ನು ಕೆಲವರು ಕಪಾಳಮೋಕ್ಷ ಮಾಡುತ್ತಾರೆ. ಅಸಲಿಗೆ ಏನಾಯಿತೋ ಗೊತ್ತಿಲ್ಲ.ಅಮ್ಮ ಕೂಡ ಕುಳಿತಿದ್ದರು ಎಂದು ಕಾನ್ ಸ್ಟೇಬಲ್ ಹೇಳಿದ್ದರೆ ನಿಜ. ರೈತರ ಆಂದೋಲನದಲ್ಲಿ ಅವರ ತಾಯಿ ಭಾಗವಹಿಸಿದ್ದು, ಯಾರಾದರೂ ಅವರ ಬಗ್ಗೆ ಮಾತನಾಡಿದರೆ ಕೋಪ ಬರದೇ ಇರುತ್ತದೆಯೇ ಎಂದ ಸಂಜಯ್ ರಾವತ್.
ದೆಹಲಿ ಜೂನ್ 07: ಗುರುವಾರ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಸಿಐಎಸ್‌ಎಫ್ ಕಾನ್ಸ್‌ಟೇಬಲ್ ನಟಿ, ರಾಜಕಾರಣಿ ಕಂಗನಾ ರಣಾವತ್ಗೆ (Kangana Ranaut) ಕಪಾಳಮೋಕ್ಷ ಮಾಡಿದ ಪ್ರಕರಣ ಬಗ್ಗೆ ಶಿವಸೇನಾ (UBT) ಸಂಸದ ಸಂಜಯ್ ರಾವತ್ (Sanjay Raut) ಪ್ರತಿಕ್ರಿಯಿಸಿದ್ದಾರೆ. ಕೆಲವರು ಮತ ನೀಡ್ತಾರೆ, ಇನ್ನು ಕೆಲವರು ಕಪಾಳಮೋಕ್ಷ ಮಾಡುತ್ತಾರೆ. ಅಸಲಿಗೆ ಏನಾಯಿತೋ ಗೊತ್ತಿಲ್ಲ.ಅಮ್ಮ ಕೂಡ ಕುಳಿತಿದ್ದರು ಎಂದು ಕಾನ್ ಸ್ಟೇಬಲ್ ಹೇಳಿದ್ದರೆ ನಿಜ. ರೈತರ ಆಂದೋಲನದಲ್ಲಿ ಅವರ ತಾಯಿ ಭಾಗವಹಿಸಿದ್ದು, ಯಾರಾದರೂ ಅವರ ಬಗ್ಗೆ ಮಾತನಾಡಿದರೆ ಕೋಪ ಬರದೇ ಇರುತ್ತದೆಯೇ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ರಾವತ್ ಹೇಳಿದ್ದಾರೆ.
“ಆದರೆ ಪ್ರಧಾನಿ ಮೋದಿಯವರು ಕಾನೂನಿನ ಆಳ್ವಿಕೆ ಇರಬೇಕೆಂದು ಹೇಳಿದರೆ, ಅದನ್ನು ಕೈಗೆ ತೆಗೆದುಕೊಳ್ಳಬಾರದು.ರೈತರ ಆಂದೋಲನದಲ್ಲಿ ಜನರು ಭಾರತದ ಪುತ್ರರು ಮತ್ತು ಹೆಣ್ಣುಮಕ್ಕಳಾಗಿದ್ದರು. ಯಾರಾದರೂ ಭಾರತ ಮಾತೆಯನ್ನು ಅವಮಾನಿಸಿದರೆ ಮತ್ತು ಅದರಿಂದ ಯಾರಾದರೂ ಮನನೊಂದಿದ್ದರೆ ಅದು ಯೋಚಿಸಬೇಕಾದ ವಿಷಯ. ಕಂಗನಾ ಬಗ್ಗೆ ನನಗೆ ಸಹಾನುಭೂತಿ ಇದೆ. ಈಗ ಸಂಸದೆ. ಸಂಸದರ ಮೇಲೆ ದಾಳಿ ಮಾಡಬಾರದು. ಆದರೆ ರೈತರನ್ನೂ ಗೌರವಿಸಬೇಕು ಎಂದು ರಾವತ್ ಹೇಳಿದ್ದಾರೆ.
ಗುರುವಾರ, ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಸಂಸದರಾಗಿ ಚುನಾಯಿತರಾಗಿರುವ ಕಂಗನಾ ರಣಾವತ್ ಅವರಿಗೆ ಭದ್ರತಾ ತಪಾಸಣೆಯ ವೇಳೆ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಕಪಾಳಮೋಕ್ಷ ಮಾಡಿದ್ದರು.
ಈ ಘಟನೆ ನಡೆದ ನಂತರ ವಿಡಿಯೊ ಸಂದೇಶ ನೀಡಿದ ಕಂಗನಾ, “ನಾನು ಸುರಕ್ಷಿತವಾಗಿದ್ದೇನೆ. ನಾನು ಚೆನ್ನಾಗಿದ್ದೇನೆ. ಭದ್ರತಾ ತಪಾಸಣೆ ವೇಳೆ ಈ ಘಟನೆ ನಡೆದಿದೆ. ನಾನು ಭದ್ರತಾ ತಪಾಸಣೆಯನ್ನು ಪೂರ್ಣಗೊಳಿಸಿದ ನಂತರ, CISF ನ ಮಹಿಳಾ ಕಾನ್‌ಸ್ಟೆಬಲ್ ಕ್ಯಾಬಿನ್ ಮೂಲಕ ನಾನು ಹಾದುಹೋಗಲು ಕಾಯುತ್ತಿದ್ದರು. ನಂತರ, ಆಕೆ ನನ್ನ ಕಡೆಗೆ ಬಂದು ನನ್ನ ಮುಖಕ್ಕೆ ಹೊಡೆದು ಬೈಯಲು ಶುರು ಮಾಡಿದರು ಎಂದು ಹೇಳಿದ್ದಾರೆ.
ಈಗ ರದ್ದಾದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಪೈಕಿ ನಮ್ಮ ಅಮ್ಮನೂ ಇದ್ದರು ಎಂದು ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಹೇಳಿದ್ದಾರೆ.
ಇದನ್ನೂ ಓದಿ: ಈಗ ಇವಿಎಂ ಸರಿಯಾಗಿದೆಯೇ? ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಟೀಕೆ
“ರೈತರು ₹ 100 ಪಡೆದು ಅಲ್ಲಿ ಕುಳಿತಿದ್ದಾರೆ ಎಂದು ಕಂಗನಾ ಹೇಳಿದ್ದಾರೆ. ಅವರಿಗೆ ಅಷ್ಟೇ ದುಡ್ಡು ಕೊಟ್ಟರೆ ಅವರು ಅಲ್ಲಿಗೆ ಹೋಗಿ ಕುಳಿತುಕೊಳ್ಳುತ್ತಾರೆಯೇ? ಆಕೆ ಈ ರೀತಿ ಹೇಳಿಕೆ ನೀಡಿದಾಗ ನನ್ನ ತಾಯಿ ಅಲ್ಲಿ ಕುಳಿತು ಪ್ರತಿಭಟಿಸುತ್ತಿದ್ದರು” ಎಂದು ಘಟನೆಯ ನಂತರ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕೌರ್ ಮಾತನಾಡಿರುವ ವಿಡಿಯೊ ವೈರಲ್ ಆಗಿದೆ. ಕುಲ್ವಿಂದರ್ ಕೌರ್ ವಿರುದ್ಧ ಸಿಐಎಸ್‌ಎಫ್ ಕ್ರಮ ಕೈಗೊಂಡಿದ್ದು ಆಕೆಯನ್ನು ಅಮಾನತುಗೊಳಿಸಿದೆ. ಪ್ರಕರಣ ಬಗ್ಗೆ ತನಿಖೆ ನಡೆಯುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:57 pm, Fri, 7 June 24