ಮುಂಬೈ: ಹಿಂದಿ ಕಿರುತೆರೆಯ ನಟರೊಬ್ಬರ ಮಗ ಶನಿವಾರ ಬೆಳಗಿನ ಜಾವ ಮದ್ಯದ ಅಮಲಿನಲ್ಲಿ ಮುಂಬೈ ಮಹಾನಗರದ ಪೊಲೀಸ್ ಕಂಟ್ರೋಲ್ ರೂಮಿಗೆ ಫೋನ್ ಮಾಡಿ ತನ್ನೊಂದಿಗೆ ವಿಡಿಯೋ ಚಾಟ್ ನಲ್ಲಿ ಮಾತಾಡುತ್ತಿದ್ದ ವ್ಯಕ್ತಿಯೊಬ್ಬ ಮುಂಬೈನಲ್ಲಿ ಬಾಂಬ್ ಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ ಅಂತ ದೂರಿದ್ದಾರೆ. ಪೊಲೀಸರು ಅವರ ಹೇಳಿಕೆಯನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಟನ 26-ವರ್ಷ ವಯಸ್ಸಿನ ಮಗ ಅಂಧೇರಿಯ ವರ್ಮ ನಗರದಲ್ಲಿ ವಾಸವಾಗಿದ್ದಾರೆ. ಶುಕ್ರವಾರ ತಡರಾತ್ರಿ ತಾನು ಮದ್ಯ ಸೇವಿಸಿದ್ದ ವಿಷಯವನ್ನು ಅವರು ಪೋಲಿಸರಿಗೆ ಬಹಿರಂಗಪಡಿಸಿದ್ದಾರೆ.
ಪೊಲೀಸರು ರೆಕಾರ್ಡ್ ಮಾಡಿಕೊಂಡಿರುವ ಹೇಳಿಕೆಯಲ್ಲಿ ನಟನ ಮಗ ಬೆದರಿಕೆ ಹಾಕಿದ ವ್ಯಕ್ತಿ ವಿಡಿಯೊ ಚ್ಯಾಟ್ ಆ್ಯಪ್ ಮೂಲಕ ತನ್ನ ಸಂಪರ್ಕಕ್ಕೆ ಬಂದನೆಂದು ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ಟಿ20 ವಿಶ್ವಕಪ್ ಪಂದ್ಯದ ಬಗ್ಗೆ ಅವರ ನಡುವೆ ಸಂಭಾಷಣೆ ಆರಂಭವಾದ ಬಳಿಕ ಅವನು ಭಾರತ ಪಂದ್ಯ ಸೋತ ಬಗ್ಗೆ ಪದೇಪದೆ ಮೂದಲಿಸಿದನಂತೆ. ಆಗ ಕೋಪಗೊಂಡ ಇವರು ಅವನನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡರಂತೆ.
ಅದಾದ ನಂತರವೇ ಆ ವ್ಯಕ್ತಿ ಮುಂಬೈನಲ್ಲಿ ಬಾಂಬ್ ಗಳನ್ನು ಸ್ಫೋಟಿಸುವ ಬೆದರಿಕೆ ಹಾಕಿದನಂತೆ. ಆದರೆ ಎಲ್ಲಿ, ಯಾವಾಗ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲವಂತೆ.
ಅವನೊಂದಿಗೆ ಸಂಭಾಷಣೆ ಕೊನೆಗೊಂಡ ನಂತರ ಅಂದರೆ ಶನಿವಾರದ ಬೆಳಗಿನ ಜಾವ ನಟನ ಮಗ ಪೊಲೀಸ್ ಕಂಟ್ರೋಲ್ ರೂಮಿಗೆ ಫೋನ್ ಮಾಡಿದ್ದಾರೆ. ಕೂಡಲೇ ಪೊಲೀಸ್ ತಂಡವೊಂದು ಅವರ ಮನೆಗೆ ತೆರಳಿ ಹೇಳಿಕೆಯನ್ನು ದಾಖಲಿಸಿಕೊಂಡಿದೆ.
ಇದನ್ನೂ ಓದಿ: ಮುಂಬಯಿಯಲ್ಲಿ ಗುರುವಾರದಿಂದ ಗರ್ಭಿಣಿ ಮಹಿಳೆಯರಿಗೂ ಕೊವಿಡ್ ಲಸಿಕೆ ನೀಡುವ ಅಭಿಯಾನ ಆರಂಭ