ದೆಹಲಿ: ‘ಬಿಟ್ಟೇನೆಂದರೂ ಬಿಡದು ಈ ಹುದ್ದೆ..’ ಈ ವಾಕ್ಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಯವರ ಪಾಲಿಗೆ ತುಂಬ ಸೂಕ್ತ ಎಂಬಂತಾಗಿದೆ. 2024ರ ಲೋಕಸಭಾ ಚುನಾವಣೆಯವರೆಗೂ ಸೋನಿಯಾ ಗಾಂಧಿಯವರೇ ಕಾಂಗ್ರೆಸ್ (Congress) ನ ಮಧ್ಯಂತರ ಅಧ್ಯಕ್ಷೆಯಾಗಿ ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ 2019ರ ಲೋಕಸಭೆ ಚುನಾವಣೆ(Lok Sabha Election) ಮುಗಿದ ಬಳಿಕ ಕಾಂಗ್ರೆಸ್ ಸೋಲಿನ ಹೊಣೆ ಹೊತ್ತು ರಾಹುಲ್ ಗಾಂಧಿ(Rahul Gandhi)ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದಾದ ಬಳಿಕ ಮತ್ತೆ ಸೋನಿಯಾ ಗಾಂಧಿಯವರೇ ಆ ಸ್ಥಾನ ಏರಿದ್ದರು.
2017ರ ಡಿಸೆಂಬರ್ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷನ ಪಟ್ಟಕ್ಕೇರಿದ್ದ ರಾಹುಲ್ ಗಾಂಧಿ 2019ರಲ್ಲಿ ಅದನ್ನು ತೊರೆದಿದ್ದರು. ಅದಕ್ಕೆ ಕಾರಣ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿತ್ತು. ಕಾಂಗ್ರೆಸ್ನ ಅಧ್ಯಕ್ಷ ಸ್ಥಾನವನ್ನು ಯಾರಿಗಾದರೂ ವಹಿಸುವವರೆಗೆ ಸೋನಿಯಾ ಗಾಂಧಿಯವರೇ ಮಧ್ಯಂತರ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಹಲವು ಬಾರಿ ಸೋನಿಯಾ ಗಾಂಧಿ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಅದೇಕೋ ಆ ಪಕ್ಷಕ್ಕೆ ಒಬ್ಬ ಸಮರ್ಥ ನಾಯಕನನ್ನು ಹುಡುಕಲು ಸಾಧ್ಯವಾಗುತ್ತಿಲ್ಲ. ಹೊಸ ಅಧ್ಯಕ್ಷನ ಆಯ್ಕೆ ಸಂಬಂಧ ಹಲವು ಸಭೆಗಳು ನಡೆದರೂ ಪ್ರಯೋಜನವಾಗಿಲ್ಲ. ಈ ಮಧ್ಯೆ ಕಾಂಗ್ರೆಸ್ನ ಹಲವು ನಾಯಕರು ಮತ್ತೆ ಅಧ್ಯಕ್ಷನ ಸ್ಥಾನವನ್ನು ರಾಹುಲ್ ಗಾಂಧಿಯವರೇ ವಹಿಸಿಕೊಳ್ಳಲಿ ಎಂದೂ ಹೇಳುತ್ತಿದ್ದಾರೆ.
ಇದೀಗ ಮೂಲಗಳಿಂದ ಲಭ್ಯವಾದ ಮಾಹಿತಿಯ ಪ್ರಕಾರ ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್ ಅಧ್ಯಕ್ಷನ ಸ್ಥಾನದ ಜವಾಬ್ದಾರಿ ಹೊರುವುದಿಲ್ಲ. 2024ರ ಲೋಕಸಭಾ ಚುನಾವಣೆವರೆಗೂ ಸೋನಿಯಾ ಗಾಂಧಿಯವರೇ ಆ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಈ ಮಧ್ಯೆ ರಾಹುಲ್ ಗಾಂಧಿಗೆ ಆಪ್ತರಾಗಿರುವ ಕೆಲವು ಯುವ ಕಾಂಗ್ರೆಸ್ಸಿಗರು ತುಂಬ ಪ್ರಮುಖ ಸ್ಥಾನಗಳನ್ನು ಪಡೆಯಲಿದ್ದಾರೆ ಎನ್ನಲಾಗಿದೆ. ಸೋನಿಯಾ ಗಾಂಧಿಯವರು ಮುಂದಿನ ಲೋಕಸಭಾ ಚುನಾವಣೆಯವರೆಗೂ ಕಾಂಗ್ರೆಸ್ ಅಧ್ಯಕ್ಷೆಯಾಗಿ ಮುಂದುವರಿಯಲಿದ್ದಾರೆ. ಅವರಿಗೆ ಸಹಾಯ ಮಾಡಲು ಪಕ್ಷ ನಾಲ್ವರು ಕಾರ್ಯಕಾರಿ ಅಧ್ಯಕ್ಷರನ್ನು ನೇಮಕ ಮಾಡಿಕೊಳ್ಳಲಿದೆ. ಗುಲಾಂ ನಬಿ ಆಜಾದ್, ಕುಮಾರಿ ಸೆಲ್ಜಾ, ಮುಕುಲ್ ವಾಸ್ನಿಕ್, ರಮೇಶ್ ಚೆನ್ನಿತಾಲಾ, ಸಚಿನ್ ಪೈಲಟ್ ಈ ಕಾರ್ಯಕಾರಿ ಅಧ್ಯಕ್ಷರಾಗಲಿದ್ದು, ಇವರು ಪ್ರಮುಖ ವಿಚಾರಗಳ ಚರ್ಚೆ, ನಿರ್ಣಯದ ವೇಳೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರೊಟ್ಟಿಗೆ ಇರುತ್ತಾರೆ ಎಂದು ಕಾಂಗ್ರೆಸ್ನ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಸದ್ಯ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾಗೆ ಯಾವ ಸ್ಥಾನ ಒಲಿಯಲಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ಉತ್ತರಪ್ರದೇಶದಲ್ಲಿ ಮುಂಬರುವ ಚುನಾವಣೆ ಹೊಣೆ ಇವರ ಮೇಲೆ ಬೀಳುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: Temple Hundi: ಲಾಕ್ಡೌನ್ ಬಳಿಕ ತಿಮ್ಮಪ್ಪನ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆ ಹಣ ಎಷ್ಟು ಗೊತ್ತಾ?
Sonia Gandhi to continue as Congress president till 2024 lok Sabha Election