ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಸೌರವ್ ಗಂಗೂಲಿಗೆ ಅವಕಾಶ ನೀಡಬೇಕು: ಪ್ರಧಾನಿಗೆ ಮಮತಾ ಬ್ಯಾನರ್ಜಿ ಮನವಿ

| Updated By: ರಶ್ಮಿ ಕಲ್ಲಕಟ್ಟ

Updated on: Oct 17, 2022 | 3:15 PM

ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಸೌರವ್ ಗಂಗೂಲಿಗೆ ಅವಕಾಶ ನೀಡಬೇಕೆಂದು ಪ್ರಧಾನಿಗೆ ಮನವಿ ಮಾಡಿದ ಮಮತಾ ಬ್ಯಾನರ್ಜಿ

ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಸೌರವ್ ಗಂಗೂಲಿಗೆ ಅವಕಾಶ ನೀಡಬೇಕು: ಪ್ರಧಾನಿಗೆ ಮಮತಾ ಬ್ಯಾನರ್ಜಿ ಮನವಿ
ಮಮತಾ ಬ್ಯಾನರ್ಜಿ
Follow us on

ಭಾರತೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ (Sourav Ganguly) ಅವರ ಅಧಿಕಾರವಧಿ ಮುಗಿದಿದ್ದು ಅವರ ಸ್ಥಾನಕ್ಕೆ ಬೇರೊಬ್ಬರು ಬರಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಗಂಗೂಲಿ “ವಂಚಿತರಾಗಿದ್ದಾರೆ” ಎಂದು ಹೇಳಿದ್ದಾರೆ. ಗಂಗೂಲಿ ಅವರನ್ನು ಐಸಿಸಿ (International Cricket Council) ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಮಮತಾ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಸೌರವ್ ಗಂಗೂಲಿ ಅವರನ್ನು “ಅನ್ಯಾಯವಾಗಿ ಹೊರಗಿಡಲಾಗಿದೆ” ಎಂದು ಬಂಗಾಳ ಮುಖ್ಯಮಂತ್ರಿ ಹೇಳಿದರು.
ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಮತಾ, ನನಗೆ ತುಂಬಾ ದುಃಖವಾಗಿದೆ. ಸೌರವ್ ಬಹಳ ಜನಪ್ರಿಯ ವ್ಯಕ್ತಿ. ಅವರು ಭಾರತ ತಂಡದ ನಾಯಕರಾಗಿದ್ದರು. ಅವರು ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಬಂಗಾಳದ ಹೆಮ್ಮೆ ಮಾತ್ರವಲ್ಲ, ಭಾರತದ ಹೆಮ್ಮೆ. ಅವರನ್ನು ಯಾಕೆ ಅನ್ಯಾಯವಾಗಿ ಹೊರಗಿಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ಅವರಿಗೆ ನನ್ನ ವಿನಯಪೂರ್ವಕ ನಮನಗಳು. ಸೌರವ್ ಗಂಗೂಲಿ ಅವರಿಗೆ ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಮಮತಾ ಹೇಳಿದ್ದಾರೆ. ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 20 ರಂದು ನಾಮಪತ್ರ ಸಲ್ಲಿಸಬೇಕಿದೆ.

ಬಿಸಿಸಿಐ ಅಥವಾ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಿರ್ಗಮಿತ ಮುಖ್ಯಸ್ಥ ಸೌರವ್ ಗಂಗೂಲಿ ನಂತರ ಆ ಸ್ಥಾನಕ್ಕೆ ರೋಜರ್ ಬಿನ್ನಿ ಬರುವ ಸಾಧ್ಯತೆ ಇದೆ. ಗಂಗೂಲಿ ಅವರು ಮಂಡಳಿಯ ಮುಖ್ಯಸ್ಥರಾಗಿ ಮುಂದುವರಿಯಲು ಬಯಸಿದ್ದರು. ಆದರೆ ಇತರ ಸದಸ್ಯರಿಂದ ಅವರು ಬಯಸಿದ ಬೆಂಬಲ ಸಿಗಲಿಲ್ಲ ಎಂದು ಮಾಧ್ಯಮಗಳ ವರದಿ ಮಾಡಿವೆ.

Published On - 2:41 pm, Mon, 17 October 22