
ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಗೂ ಎರಡು ತಿಂಗಳ ಮೊದಲು ನಟ ಸಲ್ಮಾನ್ ಖಾನ್ ಹತ್ಯೆಗೆ ಶೂಟರ್ಸ್ ಸಂಚು ರೂಪಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಇಂಡಿಯಾ ಟುಡೇ ಈ ಕುರಿತು ವರದಿ ಮಾಡಿದ್ದು, ಬಾಬಾ ಸಿದ್ದಿಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿದ ಆರೋಪಿಗಳ ವಿಚಾರಣೆ ವೇಳೆ ಸತ್ಯ ಬಹಿರಂಗಗೊಂಡಿದೆ.
66 ವರ್ಷದ ಸಿದ್ದಿಕಿಯವರನ್ನು ಅಕ್ಟೋಬರ್ 12 ರಂದು ಮುಂಬೈನಲ್ಲಿರುವ ಅವರ ಮಗ ಜೀಶನ್ ಸಿದ್ದಿಕಿ ಅವರ ಬಾಂದ್ರಾ ಈಸ್ಟ್ ಕಚೇರಿಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮೂವರು ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿದ್ದರು. ತಕ್ಷಣ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು.
ಆರೋಪಿಗಳು ಸಲ್ಮಾನ್ ಖಾನ್ ಶೂಟರ್‌ಗಳ ಹಿಟ್ ಲಿಸ್ಟ್‌ನಲ್ಲಿದ್ದಾರೆ ಎಂದು ಹೇಳಿದರು. ಆದರೆ ನಟನ ಬಿಗಿ ಭದ್ರತೆಯ ಕಾರಣದಿಂದ ಅವರನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ಏಪ್ರಿಲ್ 14 ರಂದು ತಡರಾತ್ರಿ ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಹೊರಗೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು .
ಮತ್ತಷ್ಟು ಓದಿ: Baba Siddique Murder Case: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ, ಪ್ರಮುಖ ಆರೋಪಿಯ ಬಂಧನ
ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ ಎಂಬ ಶೂಟರ್‌ಗಳನ್ನು ನಂತರ ಗುಜರಾತ್‌ನಲ್ಲಿ ಬಂಧಿಸಲಾಗಿತ್ತು. ನಂತರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಘಟನೆಯ ಹೊಣೆಯನ್ನು ಹೊತ್ತುಕೊಂಡಿತ್ತು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಸಲ್ಮಾನ್ ಖಾನ್ ಪದೇ ಪದೇ ಬೆದರಿಕೆಗಳಿಗೆ ಗುರಿಯಾಗುತ್ತಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಜೊತೆಗಿನ ವೈಷಮ್ಯದ ಹೊರತಾಗಿ, ಗ್ಯಾಂಗ್‌ಸ್ಟರ್ ಹೆಸರಿನಲ್ಲಿ ಜನರು ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕುವ ಘಟನೆಗಳೂ ನಡೆದಿವೆ. ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಎಂದು ಹೇಳಿಕೊಳ್ಳುವ ವ್ಯಕ್ತಿಯಿಂದ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಲಾಗಿತ್ತು.
ದೇವಸ್ಥಾನಕ್ಕೆ ಹೋಗಿ ಕೃಷ್ಣಮೃಗವನ್ನು ಕೊಂದಿದ್ದಕ್ಕಾಗಿ ಕ್ಷಮೆಯಾಚಿಸುವಂತೆ ಅಥವಾ 5 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Thu, 5 December 24