
ನವದೆಹಲಿ, ಅಕ್ಟೋಬರ್ 19: ಬೀದಿ ಪ್ರತಿಭಟನೆಗಳ ಮೂಲಕ ಭಾರತದ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ಯತ್ನಗಳ ಬಗ್ಗೆ ಭಾರತೀಯ ಮೂಲದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಂಶೋಧಕರು, ಶಿಕ್ಷಣತಜ್ಞರು ಮತ್ತು ಹಳೆ ವಿದ್ಯಾರ್ಥಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ವಿಶ್ವದ 27 ದೇಶಗಳ ಪ್ರಮುಖ ವಿಶ್ವವಿದ್ಯಾಲಯಗಳಿಗೆ ಸೇರಿದ ಇವರೆಲ್ಲರೂ ‘ಭಾರತವನ್ನು ಅರಾಜಕತೆಯಿಂದ ರಕ್ಷಿಸಿ’ ಎಂಬ ಶೀರ್ಷಿಕೆಯ ಜಂಟಿ ಹೇಳಿಕೆಗೆ ಸಹಿ ಹಾಕಿದ್ದಾರೆ. ಈ ಹೇಳಿಕೆಯಲ್ಲಿ ನಿರ್ದಿಷ್ಟವಾಗಿ ಯಾವುದೇ ಪ್ರತಿಭಟನೆ ಅಥವಾ ಸಂಘಟನೆಯ ಹೆಸರನ್ನು ಉಲ್ಲೇಖಿಸದಿದ್ದರೂ, ಚುನಾವಣಾ ಆಯೋಗದ ಎಸ್ಐಆರ್ ವಿರುದ್ಧ ನಡೆಯುತ್ತಿರುವ ಸರಣಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈ ಪ್ರಕಟಣೆ ಹೊರಬಿದ್ದಿದೆ.
ಅಮೆರಿಕ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಫ್ರಾನ್ಸ್, ಜಪಾನ್, ಸಿಂಗಾಪುರ, ಇಸ್ರೇಲ್ ಮತ್ತು ಯುಎಇ ಸೇರಿದಂತೆ ಹಲವು ದೇಶಗಳಲ್ಲಿರುವ ಭಾರತೀಯರು ಈ ಹೇಳಿಕೆಗೆ ಬೆಂಬಲ ನೀಡಿದ್ದಾರೆ. ಇವರು ಎಂಐಟಿ, ಆಕ್ಸ್‌ಫರ್ಡ್, ಕೇಂಬ್ರಿಡ್ಜ್, ಪ್ರಿನ್ಸ್ಟನ್, ಹಾವರ್ಡ್, ಯೇಲ್, ಸ್ಟ್ಯಾನ್‌ಫೋರ್ಡ್, ಕೊಲಂಬಿಯಾ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಸಿಂಗಾಪುರ ರಾಷ್ಟ್ರೀಯ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದವರಾಗಿದ್ದಾರೆ. “ಸ್ವಾತಂತ್ರ್ಯ ಬಂದು 7 ದಶಕಗಳ ಅವಧಿಯಲ್ಲಿ ಭಾರತೀಯ ಪ್ರಜಾಪ್ರಭುತ್ವವು ತನ್ನ ದೃಢತೆಯನ್ನು ಪದೇ ಪದೇ ಸಾಬೀತುಪಡಿಸಿದೆ. ಸಂಸ್ಥೆಗಳು ಬೆಳೆದಿವೆ ಮತ್ತು ಅಧಿಕಾರದ ಶಾಂತಿಯುತ ಹಸ್ತಾಂತರವು ನಿರಂತರ ಹಬ್ಬವಾಗಿ ಉಳಿದಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಫಲಿತಾಂಶಗಳನ್ನು ತಿರಸ್ಕರಿಸುವುದು, ಸಾಂವಿಧಾನಿಕ ಸಂಸ್ಥೆಗಳನ್ನು ಪ್ರಶ್ನಿಸುವುದು ಹಾಗೂ ‘ಸಂಸತ್ತಿಗಿಂತ ಬೀದಿಗಳಿಗೆ ಆದ್ಯತೆ ನೀಡುವುದು’ ಹೆಚ್ಚುತ್ತಿರುವುದಕ್ಕೆ ಶಿಕ್ಷಣತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಎಸ್ಐಆರ್ ವಿವಾದ; ಬಿಹಾರ, ಪಶ್ಚಿಮ ಬಂಗಾಳದಲ್ಲಿ ಒಂದೇ ಒಂದು ಆಕ್ಷೇಪಣೆ ಸಲ್ಲಿಸದ ಕಾಂಗ್ರೆಸ್!
ಚುನಾವಣಾ ಸೋಲಿನ ನಂತರ ಚುನಾವಣಾ ಪ್ರಕ್ರಿಯೆಯ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸುವುದು ಹಾಗೂ ನ್ಯಾಯಾಲಯದ ತೀರ್ಪುಗಳ ವಿರುದ್ಧ ಹೇಳಿಕೆ ನೀಡಿ ನ್ಯಾಯಾಂಗದ ಸ್ವಾಯತ್ತತೆಯನ್ನು ದುರ್ಬಲಗೊಳಿಸುವ ಕೆಲಸ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ, ಪ್ರಜಾಸಾಪ್ರಭುತ್ವದ ಹಿತಾಸಕ್ತಿಯ ಹೆಸರಿನಲ್ಲಿ ರಾಜಕೀಯ ವಿವಾದಗಳಿಗೆ ಸಶಸ್ತ್ರ ಪಡೆಗಳನ್ನು ಎಳೆತರುತ್ತಿರುವುದು ಅತ್ಯಂತ ವಿರೋಧಾಭಾಸದ ಸಂಗತಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತವು ಸಾಂವಿಧಾನಿಕ ಗಣರಾಜ್ಯವಾಗಿ ಉಳಿಯಬೇಕಾದರೆ, ನಾಗರಿಕರು ಸಾಂವಿಧಾನಿಕ ಮಾರ್ಗಗಳಿಗೆ ಬದ್ಧರಾಗಿರಬೇಕು ಮತ್ತು ಅರಾಜಕತೆಗೆ ದಾರಿ ಮಾಡಿಕೊಡುವ ಹಿಂಸಾತ್ಮಕ ವಿಪ್ಲವಗಳನ್ನು ತೊರೆಯಬೇಕು ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತುಗಳನ್ನು ಸಹಿದಾರರು ಉಲ್ಲೇಖಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ