ಕೊಲ್ಕತ್ತಾ: ಲಂಚ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಬೆಳಗ್ಗೆ ಸಿಬಿಐ ಬಂಧಿಸಿದ ಪಶ್ಚಿಮ ಬಂಗಾಳದ ಇಬ್ಬರು ಸಚಿವರು,ಶಾಸಕ ಮತ್ತು ಮಾಜಿ ಶಾಸಕರಿಗೆ ವಿಶೇಷ ಸಿಬಿಐ ನ್ಯಾಯಾಲಯ ಜಾಮೀನು ನೀಡಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮುಖಂಡರು ಮತ್ತು ಸಚಿವರಾದ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ, ಟಿಎಂಸಿ ಶಾಸಕ ಮದನ್ ಮಿತ್ರಾ ಮತ್ತು ಪಕ್ಷದ ಮಾಜಿ ಮುಖಂಡ ಸೋವನ್ ಚಟರ್ಜಿಯನ್ನು ಸಿಬಿಐ ಸೋಮವಾರ ಬೆಳಿಗ್ಗೆ ಬಂಧಿಸಿತ್ತು.
ಸಿಬಿಐ ಬಂಧಿಸಿರುವ ನಾಲ್ವರು ನಾಯಕರು 2014 ರಲ್ಲಿ ನಾರದ ಲಂಚ ಪ್ರಕರಣ ಚಿತ್ರೀಕರಿಸಿದಾಗ ಈ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಮಂತ್ರಿಗಳಾಗಿದ್ದರು. ಕಳೆದ ತಿಂಗಳು ಬಂಗಾಳದಲ್ಲಿ ಸತತ ಮೂರನೇ ಅವಧಿಯಲ್ಲಿ ಗದ್ದುಗೆಗೇರಿದ ನಂತರ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ ಅವರು ಮಮತಾ ಬ್ಯಾನರ್ಜಿ ಅವರ ಹೊಸ ಸಚಿವ ಸಂಪುಟ ಸದಸ್ಯರಾಗಿ ರಾಜ್ಯಪಾಲರಿಂದ ಪ್ರಮಾಣವಚನ ಸ್ವೀಕರಿಸಿದ್ದರು.
ಕೋಲ್ಕತ್ತಾದ ಮಾಜಿ ಮೇಯರ್ ಮತ್ತು ಹಿರಿಯ ಸಚಿವರಾದ ಎಂ.ಎಸ್.ಚಟರ್ಜಿ ಅವರು 2019 ರಲ್ಲಿ ತೃಣಮೂಲವನ್ನು ತೊರೆದು ಬಿಜೆಪಿಗೆ ಸೇರಿದ್ದರು. ಈ ಮಾರ್ಚ್‌ನಲ್ಲಿ ಬಿಜೆಪಿಯನ್ನು ಅವರು ತೊರೆದಿದ್ದಾರೆ.
ಇವರೆಲ್ಲರ ಬಂಧನವಾಗಿ ಒಂದೇ ತಾಸಿನೊಳಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಬಿಐ ಕಚೇರಿಗೆ ಭೇಟಿ ನೀಡಿ, ತಮ್ಮನ್ನೂ ಬಂಧಿಸುವಂತೆ ಸವಾಲು ಹಾಕಿದ್ದರು. ಮಮತಾ ಬ್ಯಾನರ್ಜಿ ಸುಮಾರು 6 ತಾಸು ಸಿಬಿಐ ಕಚೇರಿಯಲ್ಲೇ ಇದ್ದರು. ಈ ನಾರದ ಸ್ಟಿಂಗ್ ಆಪರೇಶನ್ಗೆ ಸಂಬಂಧಪಟ್ಟಂತೆ ಟಿಎಂಸಿ ನಾಯಕರ ವಿರುದ್ಧ ಸಿಬಿಐ ತನಿಖೆ ನಡೆಸಲು ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಕರ್ ಅನುಮತಿ ನೀಡಿದ್ದರು.
ಟಿಎಂಸಿ ನಾಯಕರ ಬಂಧನವಾಗುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಸಿಬಿಐ ಕಚೇರಿಯತ್ತ ಕಲ್ಲುತೂರಾಟ ಶುರು ಮಾಡಿದ್ದಾರೆ. ರಾಜ್ಯಪಾಲ ಜಗದೀಪ್ ಧಂಕರ್ ಅವರ ನಿವಾಸ ರಾಜಭವನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರನ್ನು ನಿಯಂತ್ರಿಸಲು ರಕ್ಷಣಾ ಪಡೆ ಸಿಬ್ಬಂದಿ ನಿಯೋಜನೆಯಾಗಿದೆ.
ಈ ಮಧ್ಯೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಎಂಪಿ ದಿಲೀಪ್ ಘೋಷ್ ಪೊಲೀಸರಿಗೆ ದೂರು ನೀಡಿದ್ದಾರೆ. ರಾಜ್ಯದಲ್ಲಿ ಪದೇಪದೆ ಹಿಂಸಾಚಾರ ನಡೆಯಲು ಮಮತಾ ಬ್ಯಾನರ್ಜಿಯವರೇ ಕಾರಣ. ಅವರು ತಮ್ಮ ಪಕ್ಷದ ನಾಯಕರನ್ನು ಪ್ರಚೋದಿಸುತ್ತಾರೆ ಎಂದು ಆರೋಪಿಸಿದ್ದಾರೆ.
#WATCH | TMC supporters hold protest outside the CBI office over the arrest of its leaders. pic.twitter.com/0lBPK92zfA
— ANI (@ANI) May 17, 2021
ಏನಿದು ನಾರದ ಕಾರ್ಯಾಚರಣೆ?
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಯ ಉನ್ನತ ಶ್ರೇಣಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡು ಮ್ಯಾಥ್ಯೂ ಸ್ಯಾಮ್ಯುಯೆಲ್ ನಡೆಸಿದ ಕುಟುಕು ಕಾರ್ಯಾಚರಣೆಯೇ ನಾರದ ಕುಟುಕು ಕಾರ್ಯಾಚರಣೆ. ಇದು ಹಲವಾರು ರಾಜಕಾರಣಿಗಳು ಮತ್ತು ಉನ್ನತ ದರ್ಜೆಯ ಪೊಲೀಸ್ ಅಧಿಕಾರಿಯೊಬ್ಬರು ಕಂಪನಿಗೆ ಅನಧಿಕೃತ ಸಹಾಯವನ್ನು ನೀಡುವ ಬದಲು ನಗದು ಲಂಚ ಸ್ವೀಕರಿಸುವುದನ್ನು ತೋರಿಸಿದೆ. ಭಾರತೀಯ ಸುದ್ದಿ ಪತ್ರಿಕೆ ತೆಹಲ್ಕಾಗಿ 2014 ರಲ್ಲಿ ಮಾಡಿದ ಈ ಕುಟುಕು ಕಾರ್ಯಾಚರಣೆ 2016 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ತಿಂಗಳುಗಳ ಮೊದಲು ಖಾಸಗಿ ವೆಬ್‌ಸೈಟ್‌ನಲ್ಲಿ ಪ್ರಕಟವಾಯಿತು.
ಜೂನ್ 2017 ನಿಂದ ಕೇಂದ್ರ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಂಸದೀಯ ನೀತಿ ಸಮಿತಿ ಈ ಪ್ರಕರಣದ ತನಿಖೆ ನಡೆಸುತ್ತಿವೆ. ತೃಣಮೂಲ ಕಾಂಗ್ರೆಸ್ ಆರೋಪಗಳನ್ನು ತಿರಸ್ಕರಿಸಿದ್ದು, ದೇಣಿಗೆ ನೀಡುವ ರೀತಿಯಲ್ಲಿ ಹಣವನ್ನು ಸ್ವೀಕರಿಸಲಾಗಿದೆ ಎಂದು ಹೇಳಿಕೊಂಡಿದೆ.
ಇದನ್ನೂ ಓದಿ: Narada Sting Case: ಪಶ್ಚಿಮ ಬಂಗಾಳದಲ್ಲಿ ಸಿಬಿಐಯಿಂದ ಟಿಎಂಸಿ ನಾಯಕ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ, ಮದನ್ ಮಿತ್ರಾ ಬಂಧನ
(Special CBI court in Kolkata granted bail to all four accused arrested in connection with the Narada sting case)