ಕೇರಳ ಯೂನಿವರ್ಸಿಟಿಯ ಎಡವಟ್ಟು; ವಿದ್ಯಾರ್ಥಿಗೆ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ನೀಡುವ ಬದಲು ಮತ್ತೇನೋ ಕೊಟ್ಟ ಮೇಲ್ವಿಚಾರಕರು !

ಪ್ರಶ್ನೆ ಪತ್ರಿಕೆ ಮೌಲ್ಯಮಾಪನ ಮಾಡಿದವರು ಹೇಳಿದ ಮೇಲೆ ಗೊತ್ತಾಗಿದ್ದು, ವಿದ್ಯಾರ್ಥಿ ಪರೀಕ್ಷೆ ಬರೆದಿದ್ದು ಪ್ರಶ್ನೆ ಪತ್ರಿಕೆಯ ಮೇಲೆ ಅಲ್ಲ. ಉತ್ತರ ಪತ್ರಿಕೆಯ ಮೇಲೆ ಎಂದು !.

ಕೇರಳ ಯೂನಿವರ್ಸಿಟಿಯ ಎಡವಟ್ಟು; ವಿದ್ಯಾರ್ಥಿಗೆ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ನೀಡುವ ಬದಲು ಮತ್ತೇನೋ ಕೊಟ್ಟ ಮೇಲ್ವಿಚಾರಕರು !
ಸಾಂಕೇತಿಕ ಚಿತ್ರ
Edited By:

Updated on: Apr 27, 2022 | 5:21 PM

ಬಿಎಸ್​ಸಿ ಎಲೆಕ್ಟ್ರಾನಿಕ್​ ವಿದ್ಯಾರ್ಥಿಯೊಬ್ಬನಿಗೆ ಫೆಬ್ರವರಿಯಲ್ಲಿ ನಡೆದ ಪರೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಆಗ ಕೊರೊನಾ ಸೋಂಕು ತಗುಲಿದ್ದ ಕಾರಣ ಪರೀಕ್ಷೆಗೆ ಹಾಜರಾಗಲು ಆಗಿರಲಿಲ್ಲ. ಹೀಗಾಗಿ ಅವನಿಗೆ ಈಗ ಮತ್ತೊಮ್ಮೆ ಪರೀಕ್ಷೆ ಮಾಡಲಾಗಿತ್ತು. ಆತನೇನೋ ಪರೀಕ್ಷೆ ಬರೆದ..ಆದರೆ ಆ ಪರೀಕ್ಷೆ ಮಾನ್ಯವಾಗಿಲ್ಲ. ಮತ್ತೆ ಆ ವಿದ್ಯಾರ್ಥಿ ಮೇ 3ಕ್ಕೆ ಇನ್ನೊಮ್ಮೆ ಎಕ್ಸಾಮ್​ ಬರೆಯಲೇಬೇಕಾಗಿದೆ. ಅದಕ್ಕೆ ಕಾರಣ ಆತನಿಗೆ ಪರೀಕ್ಷೆ ಮಾಡಿದ ಯೂನಿವರ್ಸಿಟಿಯ ಎಡವಟ್ಟು. ಅಂದಹಾಗೇ, ಹೀಗೊಂದು ಎಡವಟ್ಟು ಮಾಡಿ, ನಗೆಪಾಟಲಿಗೀಡಾಗಿದ್ದು ತಿರುವನಂತಪುರಂನಲ್ಲಿರುವ ಕೇರಳ ಯೂನಿವರ್ಸಿಟಿ. ಬಿಎಸ್​​ಸಿ ಎಲೆಕ್ಟ್ರಾನಿಕ್ಸ್​ ನಲ್ಲಿರುವ ಸಿಗ್ನಲ್ಸ್​ ಆ್ಯಂಡ್ ಸಿಸ್ಟಮ್ಸ್​ ಎಂಬ ವಿಷಯದ ಪರೀಕ್ಷೆ ಈ ವಿದ್ಯಾರ್ಥಿಗೆ ಬಾಕಿ ಇತ್ತು. ಈಗ ಆತ ಪರೀಕ್ಷಾ ಕೇಂದ್ರಕ್ಕೆ ಬಂದ. ಆದರೆ ಪರೀಕ್ಷಾ ಕೇಂದ್ರದಲ್ಲಿ ಅವನಿಗೆ ಪ್ರಶ್ನೆ ಪತ್ರಿಕೆ ಕೊಡುವ ಬದಲು ಉತ್ತರ ಪತ್ರಿಕೆಯನ್ನೇ ನೀಡಲಾಯಿತು. ಅದನ್ನು ಗುರುತಿಸಿ ಅವನು ಹೇಳುವ ಬದಲು, ಆ ಉತ್ತರ ಪತ್ರಿಕೆಯಲ್ಲೇ ಉತ್ತರ ಬರೆದಿದ್ದಾನೆ..! 

ಮಲ್ಟಿಪಲ್​ ಚಾಯ್ಸ್  ಪ್ರಶ್ನೆಗಳನ್ನು ಒಳಗೊಂಡ ಪರೀಕ್ಷೆಯಾಗಿದ್ದರಿಂದ ಆತ ಟಿಕ್ ಹಾಕಿ ಕಳಿಸಿದ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನಕ್ಕೆ ಹಾಗೇ ಕಳಿಸಲಾಯಿತು. ಅಲ್ಲಿ ಪ್ರಶ್ನೆ ಪತ್ರಿಕೆ ಮೌಲ್ಯಮಾಪನ ಮಾಡಿದವರು ಹೇಳಿದ ಮೇಲೆ ಗೊತ್ತಾಗಿದ್ದು, ವಿದ್ಯಾರ್ಥಿ ಪರೀಕ್ಷೆ ಬರೆದಿದ್ದು ಪ್ರಶ್ನೆ ಪತ್ರಿಕೆಯ ಮೇಲೆ ಅಲ್ಲ. ಉತ್ತರ ಪತ್ರಿಕೆಯ ಮೇಲೆ ಎಂದು !. ಅಂದರೆ ಒಂದು ಪ್ರಶ್ನೆಯಿದ್ದು, ಅದಕ್ಕೆ ನಾಲ್ಕು ಉತ್ತರವನ್ನು ಆಯ್ಕೆಗೆ ಕೊಡಲಾಗುತ್ತದೆ. ಆ ಪತ್ರಿಕೆಯಲ್ಲೇ ಸರಿಯಾದ ಉತ್ತರವನ್ನು ಟಿಕ್​ ಮಾಡಬೇಕಾಗುತ್ತದೆ. ಹಾಗೇ, ಒಂದು ಡಮ್ಮಿ ಉತ್ತರ ಪತ್ರಿಕೆಯನ್ನು ಪರೀಕ್ಷಾ ಮೌಲ್ಯಮಾಪಕರಿಗಾಗಿ ಸಿದ್ಧ ಮಾಡಿಡಲಾಗುತ್ತದೆ. ಅದರಲ್ಲಿ ಸರಿಯಾದ ಉತ್ತರ ಅದಾಗಲೇ ಟಿಕ್​ ಆಗಿರುತ್ತದೆ. ಈ ವಿದ್ಯಾರ್ಥಿಗೆ ಹಾಗೇ ಸಿದ್ಧ ಮಾಡಿಟ್ಟ ಉತ್ತರ ಪತ್ರಿಕೆಯನ್ನೇ ನೀಡಲಾಗಿತ್ತು. ಅವನು ಅದರಲ್ಲೇ ಉತ್ತರ ಟಿಕ್​ ಮಾಡಿದ್ದ.

ಪರೀಕ್ಷೆ ವೇಳೆ ವಿದ್ಯಾರ್ಥಿಯಾಗಲೀ, ಮೇಲ್ವಿಚಾರಕರಾಗಲೀ  ಈ ಬಗ್ಗೆ ಗಮನ ಹರಿಸಲಿಲ್ಲ. ಪ್ರಶ್ನೆ ಪತ್ರಿಕೆ ಬದಲಾಗಿ ಉತ್ತರ ಪತ್ರಿಕೆಯೇ ಕೊಟ್ಟಿದ್ದಕ್ಕೆ ಏನೂ ಹೇಳಲೂ ಇಲ್ಲ. ಆದರೆ ಈಗ ಯೂನಿವರ್ಸಿಟಿಯ ಉಪಕುಲಪತಿ ತನಿಖೆಗೆ ಆದೇಶ ಹೊರಡಿಸಿದ್ದಾರೆ. ಪರೀಕ್ಷೆ ಅಮಾನ್ಯವಾಗಿದ್ದು, ಮೇ 3ಕ್ಕೆ ಮತ್ತೊಮ್ಮೆ ನಿಗದಿಪಡಿಸಲಾಗಿದೆ. ಸುದ್ದಿ ಹೊರಬೀಳುತ್ತಿದ್ದಂತೆ ಈ ಯೂನಿವರ್ಸಿಟಿ ನಗೆಪಾಟಲಿಗೀಡಾಗಿದೆ.

ಇದನ್ನೂ ಓದಿ: ಕರಾಚಿ ವಿಶ್ವವಿದ್ಯಾಲಯದಲ್ಲಿ ಬಾಂಬ್ ಸ್ಫೋಟಿಸಿದ ಮಹಿಳಾ ಬಾಂಬರ್ ಎಂಫಿಲ್ ವಿದ್ಯಾರ್ಥಿನಿ; ಆಕೆಯ ಕೃತ್ಯ ಬಗ್ಗೆ ಹೆಮ್ಮೆಯಿಂದ ಬೀಗುತ್ತಿರುವೆ ಎಂದ ಪತಿ

Published On - 5:08 pm, Wed, 27 April 22