Video: ಉಪ ಕುಲಪತಿಯ ಮುಖದ ಎದುರೇ ನಿಂತು ಅಶ್ಲೀಲವಾಗಿ ನಿಂದಿಸಿದ ವಿದ್ಯಾರ್ಥಿಗಳು; ಸ್ಟುಡೆಂಟ್ ಲೀಡರ್ ಅರೆಸ್ಟ್​, ವರದಿ ಕೇಳಿದ ರಾಜ್ಯಪಾಲ

| Updated By: Lakshmi Hegde

Updated on: Apr 04, 2022 | 1:23 PM

ಪ್ರಕರಣ ರಾಜಕೀಯವಾಗಿಯೂ ಆರೋಪ-ಪ್ರತ್ಯಾರೋಪಕ್ಕೆ ಗುರಿಯಾಗಿದೆ. ಇಲ್ಲಿ ಉಪ-ಕುಲಪತಿಯನ್ನು ನಿಂದಿಸಿದ ಪ್ರಮುಖ ಆರೋಪಿ ಗಿಯಾಸುದ್ದೀನ್​ ಮಂಡಲ್​ ತೃಣಮೂಲ ಕಾಂಗ್ರೆಸ್​​ನವನು ಎಂದು ಬಿಜೆಪಿ ಆರೋಪಿಸಿದೆ.

Video: ಉಪ ಕುಲಪತಿಯ ಮುಖದ ಎದುರೇ ನಿಂತು ಅಶ್ಲೀಲವಾಗಿ ನಿಂದಿಸಿದ ವಿದ್ಯಾರ್ಥಿಗಳು; ಸ್ಟುಡೆಂಟ್ ಲೀಡರ್ ಅರೆಸ್ಟ್​, ವರದಿ ಕೇಳಿದ ರಾಜ್ಯಪಾಲ
ಉಪಕುಲಪತಿಯನ್ನು ನಿಂಧಿಸಿದ ವಿದ್ಯಾರ್ಥಿಗಳು
Follow us on

ಪಶ್ಚಿಮ ಬಂಗಾಳದ (West Bengal) ಅಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕನನ್ನು (Student Leader) ಪೊಲೀಸರು ಬಂಧಿಸಿದ್ದಾರೆ. ಈ ಯೂನಿವರ್ಸಿಟಿಯ ಒಂದಷ್ಟು ವಿದ್ಯಾರ್ಥಿಗಳು ಅಲ್ಲಿನ ಉಪ-ಕುಲಪತಿಯನ್ನು ಟೀಕಿಸಿದ, ಅವರನ್ನು ನಿಂದಿಸಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು (West Bengal Police) ಸ್ಟುಡೆಂಟ್ ಲೀಡರ್​ನನ್ನು ಅರೆಸ್ಟ್ ಮಾಡಿದ್ದಾರೆ. ಉಪಕುಲಪತಿ ಕುರ್ಚಿಯಲ್ಲಿ ಕುಳಿತಿದ್ದರೆ, ಮೂರ್ನಾಲ್ಕು ಜನ ವಿದ್ಯಾರ್ಥಿಗಳು ಅವರ ಹತ್ತಿರದಲ್ಲೇ ನಿಂತು ಬೈದಿದ್ದಾರೆ. ಮುಖದ ಸಮೀಪ ತಮ್ಮ ಮುಖ ತೆಗೆದುಕೊಂಡು ಹೋಗಿ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ. ಅಲ್ಲಿ ಯೂನಿರ್ವರ್ಸಿಟಿ ಸೆಕ್ಯೂರಿಟಿಗಳು, ಇನ್ನಿತರ ಅಧ್ಯಾಪಕ ವೃಂದ ನಿಂತಿದ್ದರೂ ಎಲ್ಲರೂ ಮೌನವಾಗಿಯೇ ಇದ್ದರು. ಉಪ-ಕುಲಪತಿ ಕೂಡ ಮೌನವಾಗಿಯೇ ಕುಳಿತಿದ್ದಾರೆ, ಬಿಟ್ಟರೆ ಒಂದೂ ಪ್ರತಿಕ್ರಿಯೆ ನೀಡಲು ಹೋಗಿಲ್ಲ.  

ಈ ವಿಡಿಯೋವನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್​ ಧನ್​ಕರ್​ ಶೇರ್ ಮಾಡಿಕೊಂಡಿದ್ದಾರೆ. ಇವರೆಲ್ಲ ಕಾನೂನಿನ ಭಯವಲ್ಲಿದೆ, ತಮ್ಮದೇ ದಾರಿ ಎಂಬಂತೆ ಸಾಗುತ್ತಿರುವುದನ್ನು ನೋಡಿದರೆ ಅಸಹ್ಯವಾಗುತ್ತದೆ ಮತ್ತು ಈ ಬೆಳವಣಿಗೆ ಅಷ್ಟೇ ಕಳವಳಕಾರಿಯಾಗಿದೆ. ಈ ಬಗ್ಗೆ ಚರ್ಚಿಸಲು ಮುಖ್ಯ ಕಾರ್ಯದರ್ಶಿಯನ್ನು ಕರೆಯಲಾಗಿದೆ ಮತ್ತು ಘಟನೆಯ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಉಪ-ಕುಲಪತಿ ಮೊಹಮ್ಮದ್​ ಅಲಿ  ವಿರುದ್ಧ ತುಂಬ ಅಶ್ಲೀಲ ಪದ ಬಳಕೆ ಮಾಡಿದ್ದು ವಿಡಿಯೋದಲ್ಲಿ ಕೇಳಿಸುತ್ತದೆ. ಪಿಎಚ್​ಡಿ ಪ್ರವೇಶ ಪಟ್ಟಿಯನ್ನು ನಾವು ಹೇಳಿದಂತೆ ಬದಲಿಸಿ ಕೊಡದೆ ಇದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ. ಪಿಎಚ್​ಡಿ ಅಡ್ಮಿಶನ್​ ಲಿಸ್ಟ್​ನಲ್ಲಿ ಆಡಳಿತ ಮಂಡಳಿ ಮೋಸ ಮಾಡಿದೆ ಎಂದು ಆರೋಪಿಸುತ್ತಿರುವ ವಿದ್ಯಾರ್ಥಿಗಳು ದಾಂಧಲೆ ಎಬ್ಬಿಸುತ್ತಿದ್ದಾರೆ. ಇಡೀ ವಿಶ್ವವಿದ್ಯಾಲಯವನ್ನು ನಾಶ ಮಾಡುವ ಬೆದರಿಕೆಯನ್ನೂ ಹಾಕಿದ್ದಾರೆ. ಸುಮ್ಮನೆಯೇ ಕುಳಿತುಕೊಂಡಿದ್ದ ಉಪ-ಕುಲಪತಿ ಕೊನೆಗೆ ನನ್ನ ಫೋನ್​ ವಾಪಸ್​ ಕೊಡಿ ಎಂದು ಕೇಳಿದ್ದು ವಿಡಿಯೋದಲ್ಲಿ ನೋಡಬಹುದು.

ಈ ಪ್ರಕರಣ ರಾಜಕೀಯವಾಗಿಯೂ ಆರೋಪ-ಪ್ರತ್ಯಾರೋಪಕ್ಕೆ ಗುರಿಯಾಗಿದೆ. ಇಲ್ಲಿ ಉಪ-ಕುಲಪತಿಯನ್ನು ನಿಂದಿಸಿದ ಪ್ರಮುಖ ಆರೋಪಿ ಗಿಯಾಸುದ್ದೀನ್​ ಮಂಡಲ್​ ತೃಣಮೂಲ ಕಾಂಗ್ರೆಸ್​​ನವನು. ಟಿಎಂಸಿಯ ವಿದ್ಯಾರ್ಥಿ ಮೋರ್ಚಾದಲ್ಲಿದ್ದ ಎಂದು ಬಿಜೆಪಿ ಆರೋಪಿಸಿದ್ದಾರೆ. ಆದರೆ ಅದನ್ನು ಟಿಎಂಸಿ ಒಪ್ಪಲಿಲ್ಲ. 2018ರಲ್ಲಿಯೇ ಮಂಡಲ್​ನನ್ನು ಉಚ್ಚಾಟನೆ ಮಾಡಿದ್ದಾಗಿ ಹೇಳಿಕೊಂಡಿದೆ.  ಇನ್ನು ಬಿಜೆಪಿ, ಸಿಪಿಐ (ಎಂ) ಪಕ್ಷಗಳು ಈ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.

ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉಪ-ಕುಲಪತಿ ಅಲಿ, ಮಂಡಲ್​ ಮತ್ತು ಇನ್ನಿತರ ಕೆಲವು ವಿದ್ಯಾರ್ಥಿಗಳು ಸುಮಾರು ಎರಡು ತಾಸುಗಳ ಕಾಲ ನನಗೆ ತೊಂದರೆ ಕೊಟ್ಟರು. ಯೂನಿವರ್ಸಿಟಿಯ ನನ್ನ ಆಫೀಸ್​ಗೆ ಬಂದು ಕೆಟ್ಟ ಭಾಷೆಯಲ್ಲಿ ನಿಂದಿಸಿದರು. ನಾನು ಪೊಲೀಸರಿಗೆ ಕರೆ ಮಾಡಿದೆ, ಆದರೆ ಅವರು ಬರಲಿಲ್ಲ ಎಂದು ಆರೋಪಿಸಿದ್ದಾರೆ. ಉಪಕುಲಪತಿ ಹೇಳಿಕೆ ಬೆನ್ನಲ್ಲೇ ಟ್ವೀಟ್ ಮಾಡಿದ ಪಶ್ಚಿಮ ಬಂಗಾಳ ಪೊಲೀಸರು, ನಾವು ಅವರ ಕರೆ ಬರುತ್ತಿದ್ದಂತೆ ಸೂಕ್ತವಾಗಿ ಸ್ಪಂದಿಸಿದ್ದೇವೆ. ಗಿಯಾಸುದ್ದೀನ್​​ ಮಂಡಲ್​​ನನ್ನು ಅರೆಸ್ಟ್ ಮಾಡಲಾಗಿದೆ. ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಜೆಡಿಎಸ್ ಮಾಜಿ ಕಾರ್ಪೊರೇಟರ್ ಪತಿ ನಿಗೂಡವಾಗಿ ನಾಪತ್ತೆ; ಕಾರಿನ ಬಳಿ ಪತ್ತೆಯಾದ ರಕ್ತದ ಕಲೆ

 

Published On - 1:22 pm, Mon, 4 April 22