ತಮಿಳುನಾಡಿನಲ್ಲಿ ವೇಗವಾಗಿ ಹರಡುತ್ತಿದೆ ಒಮಿಕ್ರಾನ್​ ಉಪ ರೂಪಾಂತರಿ BA.2 ವೈರಸ್; ಮತ್ತೊಂದು ಅಲೆಯ ಎಚ್ಚರಿಕೆ ನೀಡಿದ ಆರೋಗ್ಯ ತಜ್ಞರು​

ಬಿಎ.2 ವೈರಸ್ ಬಗ್ಗೆ ತುಂಬ ಎಚ್ಚರಿಕೆಯಿಂದ ಇರುವಂತೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳಿದೆ. ಯುರೋಪ್ ಮತ್ತು ಆಗ್ನೇಯ ಏಷ್ಯಾ ಪ್ರದೇಶಗಳಲ್ಲಿ ಸದ್ಯ ಈ ತಳಿಯ ವೈರಾಣು ಪ್ರಸರಣ ಶೇ.86ರಷ್ಟಿದೆ ಎಂದು ಡಬ್ಲ್ಯೂಎಚ್​ಒ ಮಾಹಿತಿ ನೀಡಿದೆ.

ತಮಿಳುನಾಡಿನಲ್ಲಿ ವೇಗವಾಗಿ ಹರಡುತ್ತಿದೆ ಒಮಿಕ್ರಾನ್​ ಉಪ ರೂಪಾಂತರಿ BA.2 ವೈರಸ್; ಮತ್ತೊಂದು ಅಲೆಯ ಎಚ್ಚರಿಕೆ ನೀಡಿದ ಆರೋಗ್ಯ ತಜ್ಞರು​
ಸಾಂಕೇತಿಕ ಚಿತ್ರ
Edited By:

Updated on: Mar 31, 2022 | 10:18 AM

ಕೊರೊನಾದ ರೂಪಾಂತರಿ ವೈರಾಣುಗಳಲ್ಲೇ ಅತ್ಯಂತ ವೇಗವಾಗಿ ಪ್ರಸರಣಗೊಳ್ಳುವ ತಳಿಯಾದ ಒಮಿಕ್ರಾನ್​​ನ ಉಪ ರೂಪಾಂತರಿ BA.2 ವೈರಸ್​ ತಮಿಳುನಾಡಿನಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದೆ ಎಂದು ಹೇಳಲಾಗಿದೆ. ಇದು ಡೆಲ್ಟಾವನ್ನೂ ಹಿಂದಿಕ್ಕಿದ್ದು, ಕೊರೊನಾದ ಮತ್ತೊಂದು ಅಲೆಯನ್ನು ಉತ್ತುಂಗಕ್ಕೆ ಏರಿಸುವಷ್ಟು ಪ್ರಬಲವಾಗಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಹಾಗಿದ್ದಾಗ್ಯೂ ಇದರ ಬಗ್ಗೆ ಹೆದರುವ ಅಗತ್ಯವಿಲ್ಲ ಎಂಬುದನ್ನೂ ತಿಳಿಸಿದ್ದಾರೆ.  ತಮಿಳುನಾಡಿನಲ್ಲಿ ಜನವರಿಯಿಂದ ಮಾರ್ಚ್​ 28ರವರೆಗೆ ದಾಖಲಾದ ಕೊವಿಡ್​ 19ನ ಎಲ್ಲ ರೂಪಾಂತರಿ ಕೇಸ್​ಗಳಲ್ಲಿ ಒಮಿಕ್ರಾನ್​ನ ಉಪ-ರೂಪಾಂತರಿ ವೈರಸ್​ ಬಿಎ.2 ಪ್ರಮಾಣ ಶೇ.93.4ರಷ್ಟು ಹೆಚ್ಚಳವಾಗಿದೆ ಎಂದು ಸಾರ್ವಜನಿಕ ಆರೋಗ್ಯ ಮತ್ತು ಪ್ರಿವೆಂಟಿವ್​ ಮೆಡಿಸಿನ್​ ನಿರ್ದೇಶನಾಲಯದ ಡೇಟಾದಲ್ಲಿ ಉಲ್ಲೇಖವಾಗಿದೆ. 

ತಮಿಳುನಾಡಿನಲ್ಲಿ ಡೆಲ್ಟಾ ಮತ್ತು ಇತರ ರೂಪಾಂತರಗಳ ಹರಡುವಿಕೆ ಪ್ರಮಾಣ ಶೇ. 3.3ಕ್ಕೆ ಇಳಿದಿದೆ. ಮಾರ್ಚ್​​ನಲ್ಲಿ ಒಮಿಕ್ರಾನ್​ನ ವಿವಿಧ ಉಪ ರೂಪಾಂತರಿ ವೈರಸ್​ಗಳು ಪ್ರಬಲವಾಗಿ ಹರಡಲು ಶುರುವಾಗಿವೆ. ಈ ತಿಂಗಳಲ್ಲಿ BA.2 ವೈರಸ್​ ಹರಡುವಿಕೆ 68.4%, BA1.1 – 15.2%, BA.1 – 10.3%, B1.1 – 6% ಮತ್ತು BA.3 – 0.05% ರಷ್ಟಿತ್ತು ಎಂದು ಸಾರ್ವಜನಿಕ ಆರೋಗ್ಯ ಮತ್ತು ಪ್ರಿವೆಂಟಿವ್​ ಮೆಡಿಸಿನ್​ ನಿರ್ದೇಶನಾಲಯದ ನಿರ್ದೇಶಕ ಸೆಲ್ವವಿನಾಯಕಂ ತಿಳಿಸಿದ್ದಾಗಿ ನ್ಯೂಸ್​ 9 ವರದಿ ಮಾಡಿದೆ. ಅಷ್ಟೇ ಅಲ್ಲ, ಈ ಬಗ್ಗೆ ಜನರು ಹೆದರಬೇಕಾದ ಅಗತ್ಯವಿಲ್ಲ. ಸೋಂಕು ಹರಡುತ್ತಿದ್ದರೂ ಮಾರಣಾಂತಿಕವಾಗಿ ಪರಿಣಮಿಸುತ್ತಿಲ್ಲ. ಅಂದರೆ ಈಗಾಗಲೇ ತೆಗೆದುಕೊಂಡಿರುವ ಲಸಿಕೆಗಳು ಪರಿಣಾಮಕಾರಿ ಎಂಬುದು ಸಾಬೀತಾಗಿದೆ ಎಂದೂ ಸೆಲ್ವವಿನಾಯಕಂ ತಿಳಿಸಿದ್ದಾರೆ.

ಬಿಎ.2 ವೈರಸ್ ಬಗ್ಗೆ ತುಂಬ ಎಚ್ಚರಿಕೆಯಿಂದ ಇರುವಂತೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳಿದೆ. ಯುರೋಪ್ ಮತ್ತು ಆಗ್ನೇಯ ಏಷ್ಯಾ ಪ್ರದೇಶಗಳಲ್ಲಿ ಸದ್ಯ ಈ ತಳಿಯ ವೈರಾಣು ಪ್ರಸರಣ ಶೇ.86ರಷ್ಟಿದೆ. ಒಮಿಕ್ರಾನ್​ ನ ಇನ್ನೆರಡು ಉಪತಳಿಗಳಾದ BA.1 ಮತ್ತು BA.1.1ಗಿಂತಲೂ BA.2 ಅತ್ಯಂತ ಪ್ರಭಾವಶಾಲಿಯಾಗಿದೆ ಎಂದು ಹೇಳಿತ್ತು. ಹಾಗೇ, ಈ ವೈರಸ್​​ನಿಂದ ಕೊರೊನಾ ಕಾಯಿಲೆ ಮಾರಣಾಂತಿಕವಾಗಲಾರದು ಎಂದೂ ಹೇಳಿತ್ತು. ತಮಿಳುನಾಡಿನಲ್ಲಿ ಬುಧವಾರ 39 ಕೊರೊನಾ ಕೇಸ್​​ಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ  34,52,790ಕ್ಕೆ ಏರಿದೆ. ಕೊರೊನಾದಿಂದ ಯಾರೂ ಮೃತಪಟ್ಟಿಲ್ಲ ಎಂದು ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಮೇಲುಕೋಟೆಯಲ್ಲಿಯೂ ಸಲಾಂ ಆರತಿ ಹೆಸರು ತೆಗೆಯಲು ಸ್ಥಾನಿಕರಿಂದ ಮನವಿ

Published On - 9:48 am, Thu, 31 March 22